ಬೀದರ್: ‘ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು ಟೋಕರೆ ಕೋಳಿ ಸಮಾಜ. ಈ ಸಮಾಜದವರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಪ್ರಮಾಣ ಪತ್ರ ಕೊಡಬೇಕು ಎಂದು ಈ ಹಿಂದೆಯೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸಿದೆ. ಈಗ ಪುನಃ ಕೇಂದ್ರಕ್ಕೆ ಒತ್ತಾಯ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಭರವಸೆ ನೀಡಿದರು.
ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಹಯೋಗದಲ್ಲಿ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೋಳಿ ಸಮಾಜ ನಮ್ಮ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆಯವರನ್ನು ಬೆಂಬಲಿಸಿ ಗೆಲ್ಲಿಸಿದೆ. ಸಾಗರ್ ಖಂಡ್ರೆಯವರು ಎಸ್ಟಿ ಪ್ರಮಾಣ ಪತ್ರದ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವರು. ಇನ್ನು, ಜಿಲ್ಲೆಯಲ್ಲಿ ಎಸ್ಟಿ ಪ್ರಮಾಣ ಪತ್ರ ಕೊಡುವುದರಲ್ಲಿ ಆಗುತ್ತಿರುವ ಗೊಂದಲ ನಿವಾರಣೆಗೆ ಜಿಲ್ಲಾಧಿಕಾರಿಗೆ ಸೂಚನೆ ಕೊಡುವೆ. ಕೋಳಿ, ಕಬ್ಬಲಿಗ ಹಾಗೂ ಗೊಂಡ ಸಮಾಜದವರಿಗೆ ಎಸ್ಟಿ ಪ್ರಮಾಣ ಪತ್ರ ಕೊಡಬೇಕು ಎಂದು ಜಿಲ್ಲೆಯಲ್ಲಿ ಮೊದಲು ಹೋರಾಟ ಆರಂಭಿಸಿದವರು ಮಾಜಿ ಶಾಸಕ ಬಿ.ನಾರಾಯಣರಾವ್ ಎಂದು ನೆನೆದರು.
ಕೋಳಿ ಸಮಾಜಕ್ಕೆ ಜಿಲ್ಲೆಯಲ್ಲಿ ಐದು ಎಕರೆ ಜಮೀನು ಕೊಡಬೇಕು. ಅಂಬಿಗರ ಚೌಡಯ್ಯನವರ ಭವನ ನಿರ್ಮಿಸಬೇಕು. ವಿಧಾನಸೌಧದ ಎದುರು ಅಂಬಿಗರ ಚೌಡಯ್ಯನವರ ಪುತ್ಥಳಿ ಪ್ರತಿಷ್ಠಾಪಿಸಬೇಕೆಂಬ ಬೇಡಿಕೆಗಳಿಗೆ ನನ್ನ ಹಾಗೂ ನನ್ನ ಪಕ್ಷದ ಸಂಪೂರ್ಣ ಬೆಂಬಲವಿದೆ. ಆದ್ಯತೆ ಮೇರೆಗೆ ಬೇಡಿಕೆ ಈಡೇರಿಸಲು ಶ್ರಮಿಸುವೆ ಎಂದು ಹೇಳಿದರು.
ಟೋಕರೆ ಕೋಳಿ ಸಮಾಜದವರು ಒಂದು ಸಲ ಯಾರಿಗಾದರೂ ಮಾತು, ವಚನ ಕೊಟ್ಟರೆ ಅದು ಮಾಡಿಯೇ ತೀರುತ್ತಾರೆ. ಈ ಸಮಾಜದಲ್ಲಿ ಹಲವರು ಬಡವರಿದ್ದಾರೆ. ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮೀನುಗಾರಿಕೆ ಮಾಡುವಾಗ ಅನೇಕರು ಜೀವ ಕಳೆದುಕೊಂಡಿದ್ದಾರೆ. ಈ ಸಮಾಜದವರಿಗೆ ರಕ್ಷಣೆ, ಪ್ರಾತಿನಿಧ್ಯ ಕೊಡುವುದು ನಮ್ಮ ಜವಾಬ್ದಾರಿ ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ,‘ಸಮಾಜದ ಭವನ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ ₹2 ಕೋಟಿ ಅನುದಾನ ಕೊಡಬೇಕು. ಅದಕ್ಕೆ ಮಾಜಿ ಶಾಸಕ ಬಿ.ನಾರಾಯಣರಾವ್ ಅವರ ಹೆಸರಿಡಲಾಗುವುದು. ಐದು ಎಕರೆ ಜಮೀನು ಕೊಟ್ಟರೆ ಅದಕ್ಕೆ ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ಹೆಸರಿಡುತ್ತೇವೆ. ಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಮಾಜದವರಿಗೆ ಪ್ರಾತಿನಿಧ್ಯ ಕೊಡಬೇಕು’ ಎಂದು ಮನವಿ ಮಾಡಿದರು.
ಉಪನ್ಯಾಸ ನೀಡಿದ ಸಾಹಿತಿ ಪಾರ್ವತಿ ವಿ.ಸೋನಾರೆ ಮಾತನಾಡಿ,‘ಶಿಕ್ಷಣ ಪಡೆದು ನಾವು ಎಚ್ಚರವಾಗುವುದರ ಜೊತೆಗೆ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ಮಾಡಬೇಕಿದೆ. ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿದರ್ಶನವಾಗಿ ಇಟ್ಟುಕೊಳ್ಳಬೇಕು. ಅಂಬೇಡ್ಕರ್ ಅವರು ಇಡೀ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು’ ಎಂದು ನೆನಪಿಸಿದರು.
ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮಾತನಾಡಿ,‘ಮೀನುಗಾರಿಕೆ ಸಂಘಗಳ ರಚನೆಗೆ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಮೀನುಗಾರರಲ್ಲದವರು ಟೆಂಡರ್ ಪಡೆಯುತ್ತಿದ್ದಾರೆ. ಇದನ್ನು ತಡೆಯಬೇಕು. ಮೀನುಗಾರರಿಗೆ ಮೊದಲ ಆದ್ಯತೆ ಸಿಗಬೇಕು. ಕೋಲಿ, ಕಬ್ಬಲಿಗ ಸೇರಿದಂತೆ ಇತರೆ ಹೆಸರುಗಳಲ್ಲಿ ಇರುವ ಸಮಾಜದವರನ್ನು ಎಸ್ಟಿಗೆ ಸೇರಿಸಬೇಕು. ಜಿಲ್ಲೆಯ ಮೀನುಗಾರರ ಕುಟುಂಬದವರಿಗೆ ಕನಿಷ್ಠ 500 ಮನೆಗಳನ್ನು ಕಟ್ಟಿಸಿಕೊಡಬೇಕು’ ಎಂದು ಬೇಡಿಕೆ ಮಂಡಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಹಳ್ಳೀಖೇಡ್ (ಕೆ) ವಾಡಿ ಮಹರ್ಷಿ ವಾಲ್ಮೀಕಿ ಆಶ್ರಮದ ದತ್ತಾತ್ರೇಯ ಗುರೂಜಿ, ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಮುಖಂಡರಾದ ಚಂದ್ರಾ ಸಿಂಗ್, ಈಶ್ವರ ಸಿಂಗ್ ಠಾಕೂರ್, ಶಾಂತಪ್ಪ ಜಿ. ಪಾಟೀಲ, ರಾಜಕುಮಾರ ಕರಣೆ, ವಿಜಯಕುಮಾರ ಸೋನಾರೆ, ಅರುಣಕುಮರ ಬಾವಗಿ, ನಾರಾಯಣರಾವ್ ಭಂಗಿ, ಮಾಣಿಕ ನೇಳಗಿ, ಸುನೀಲ್ ಕಾಶೆಂಪುರ್, ಕೋಲಿ ಸಮಾಜದ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ ಎಂ.ಜಮಾದಾರ, ಡಿವೈಎಸ್ಪಿ ಶಿವನಗೌಡ ಪಾಟೀಲ ಹಾಗೂ ಮತ್ತಿತರರು ಹಾಜರಿದ್ದರು.
ಬಾರದ ಸಚಿವರು
ಉದ್ಘಾಟನೆಗೆ ಗೊಂದಲ ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಜನಜಾಗೃತಿ ಸಮಾವೇಶ ಮಧ್ಯಾಹ್ನ 1.30ಕ್ಕೆ ಆರಂಭಗೊಂಡಿತು. ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಸೇರಿದಂತೆ ಇತರೆ ಗಣ್ಯರು ವೇದಿಕೆಗೆ ಆಗಮಿಸಿದ್ದರು. ಪ್ರಾರ್ಥನಾ ಗೀತೆ ಸ್ವಾಗತ ಪ್ರಾಸ್ತಾವಿಕ ಭಾಷಣ ಮುಗಿದಿತ್ತು. ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಪೌರಾಡಳಿತ ಸಚಿವ ರಹೀಂ ಖಾನ್ ಅವರು ವೇದಿಕೆಗೆ ಬಂದಿರಲಿಲ್ಲ. ಆದರೆ ಸಚಿವರು ವೇದಿಕೆ ಉದ್ದೇಶಿಸಿ ಮಾತನಾಡಬೇಕೆಂದು ನಿರೂಪಕರು ಕರೆದರು. ಈ ವೇಳೆ ಸಭಿಕರ ಸಾಲಿನಲ್ಲಿ ಕುಳಿತಿದ್ದ ಟೋಕರೆ ಕೋಳಿ ಸಮಾಜದ ಕೆಲ ಮುಖಂಡರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ‘ಕಾರ್ಯಕ್ರಮ ಉದ್ಘಾಟಿಸದೇ ಸಚಿವರಿಂದ ಭಾಷಣ ಮಾಡಿಸುವುದು ಸೂಕ್ತವಲ್ಲ. ಈಶ್ವರ ಖಂಡ್ರೆ ರಹೀಂ ಖಾನ್ ಅವರಿಗೆ ನಿರೀಕ್ಷಿಸುವುದು ಬೇಡ. ಸಚಿವ ಮಂಕಾಳ ವೈದ್ಯ ಅವರಿಂದಲೇ ಕಾರ್ಯಕ್ರಮ ಉದ್ಘಾಟಿಸಿ ಆರಂಭಿಸಬೇಕು. ಇದು ಸಮಾಜದ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಲ್ಲ’ ಎಂದರು. ನಿರೂಪಕರು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು. ಆದರೆ ಅದಕ್ಕೆ ಅವರು ಸುಮ್ಮನಾಗಲಿಲ್ಲ. ಇದರಿಂದ ಕೆಲಕಾಲ ಗೊಂದಲ ಉಂಟಾಗಿತ್ತು. ಕೆಲ ಸಮಯದ ನಂತರ ಸಂಘಟಕರು ಸಚಿವ ಮಂಕಾಳ ವೈದ್ಯ ಅವರಿಂದ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ‘ಹಿರಿಯರಿಗೆ ಗೌರವ ಕೊಡಬೇಕಾಗುತ್ತದೆ. ಅದು ಸಂಸ್ಕಾರ. ಮೀನುಗಾರರು ಹೊಂದಾಣಿಕೆ ಕೂಡಿಕೊಂಡು ಹೋಗುವ ಸಮಾಜ’ ಎಂದು ಹೇಳಿದರು. ಇದಾದ ಕೆಲ ನಿಮಿಷಗಳ ನಂತರ ಸಚಿವ ಈಶ್ವರ ಬಿ.ಖಂಡ್ರೆ ವೇದಿಕೆಗೆ ಬಂದರು. ಅದಾದ ಕೆಲ ನಿಮಿಷಗಳ ಬಳಿಕ ಸಚಿವ ರಹೀಂ ಖಾನ್ ಆಗಮಿಸಿದರು. ಕಲಬುರಗಿಯಲ್ಲಿ ಸಮಾಜದ ಮುಖಂಡರೊಬ್ಬರು ನಿಧನ ಹೊಂದಿದ ಕಾರಣ ಸಚಿವ ಮಂಕಾಳ ಎಸ್.ವೈದ್ಯ ಅವರು ಭಾಷಣ ಮುಗಿಸಿ ಕಾರ್ಯಕ್ರಮದ ಮಧ್ಯದಲ್ಲೇ ನಿರ್ಗಮಿಸಿದರು.
‘ಮೂಲ ಮೀನುಗಾರರಿಗೆ ಮೊದಲ ಆದ್ಯತೆ’
‘ಮೊದಲಿನಿಂದಲೂ ಮೀನುಗಾರಿಕೆ ಮಾಡುತ್ತ ಬಂದಿರುವ ಮೂಲ ಮೀನುಗಾರರಿಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ಭರವಸೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ‘ಟೋಕರೆ ಕೋಳಿ ಸಮಾಜ ಹಾಗೂ ಇತರೆ ಸಮಾಜದವರಿಗೂ ಅಗತ್ಯ ಸಹಕಾರ ನೀಡಲಾಗುವುದು. ಜಿಲ್ಲೆಯ ಮೀನುಗಾರರ ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಬೇಕೆಂದು ಕೇಳಿದ್ದೀರಿ. ಖಂಡಿತವಾಗಿಯೂ ಮನೆ ಕಟ್ಟಿಸಿಕೊಡಲಾಗುವುದು. ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಮೀನುಗಾರಿಕೆ ಅಭಿವೃದ್ಧಿ ನಿಗಮವು ತನ್ನ ಆದಾಯವನ್ನು ಸೃಷ್ಟಿಸಿ ಅದರ ಮೂಲಕವೇ ನಡೆಯುತ್ತದೆ. ಐಸ್ ಪ್ಲಾಂಟ್ ಸ್ಟೋರೇಜ್ ಕ್ಯಾಂಟೀನ್ ಮಾಡಬಹುದು. ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕ್ಯಾಂಟೀನ್ ಯಶಸ್ವಿಯಾಗಿ ನಡೆಯುತ್ತಿದೆ. ಅದರಿಂದ ಕೆಲವರಿಗೆ ಉದ್ಯೋಗಗಳು ಸಿಗುತ್ತವೆ. ನಿಮ್ಮಲ್ಲೂ ಮೀನು ತಿನ್ನುವವರು ಇದ್ದರೆ ಮಾಡಬಹುದು ಎಂದರು. ಶಿಕ್ಷಣ ಮತ್ತು ಸಂಸ್ಕಾರ ಬಹಳ ಮುಖ್ಯ. ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ನಮ್ಮ ಸರ್ಕಾರ ಕೂಡ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಟ್ಟಿದೆ. ಜೊತೆಗೆ ಶಿಷ್ಯವೇತನ ಕೂಡ ನೀಡುತ್ತಿದೆ. ಯಾವ ರೀತಿಯ ಶಿಕ್ಷಣ ಪಡೆದರೆ ಉತ್ತಮ ಎಂಬುದನ್ನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.