ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಬಿಡುಗಡೆಯಾಗದ ಹಣ: ‘ಉದ್ಯೋಗ ಖಾತ್ರಿ’ಗೆ ತೊಡಕು

ಬೀದರ್‌ ಜಿಲ್ಲೆಗೆ ಬರಬೇಕಿದೆ ₹ 214.26 ಕೋಟಿ ಅನುದಾನ
Last Updated 13 ಜೂನ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಲಾಕ್‌ಡೌನ್‌ ಅವಧಿಯಲ್ಲಿ ಕೂಲಿಕಾರ್ಮಿಕರು ಮತ್ತು ಬಡವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಉದ್ಯೋಗ ಲಭಿಸುತ್ತಿದೆ. ಆದರೆ, ಅವರಿಗೆ ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ. ನರೇಗಾದಲ್ಲಿ ಉದ್ಯೋಗ ಕೈಗೊಳ್ಳುವ ಯೋಜನೆಯಡಿ ಅನೇಕ ಪಂಚಾಯಿತಿಗಳಿಗೆ ಒಂದು ವರ್ಷದಿಂದ ಹಣ ಪಾವತಿಯಾಗಿಲ್ಲ. ಸರ್ಕಾರದ ವಿಳಂಬ ನೀತಿಯಿಂದ ಫಲಾನುಭವಿಗಳು ಮತ್ತು ಪಿಡಿಒಗಳಿಗೆ ತೊಂದರೆಯಾಗಿದೆ. ಹಣ ಬಿಡುಗಡೆಯಲ್ಲಿನ ವಿಳಂಬದಿಂದ ಯೋಜನೆ ಅನುಷ್ಠಾನಕ್ಕೂ ತೊಡಕಾಗಿದೆ.

ಗ್ರಾಮಾಭಿವೃದ್ಧಿಗೆ ಪೂರಕವಾದ ನರೇಗಾ ಯೋಜನೆಯು ಲಾಕ್‌ಡೌನ್‌ ಅವಧಿಯಲ್ಲಿ ಜನರ ಸಂಕಷ್ಟಕ್ಕೆ ನೆರವಾಗಿದೆ. ಆದರೆ, ಕೂಲಿ ಪಾವತಿಗೆ 15 ದಿನ ವಿಳಂಬವಾದರೆ, ಸಾಮಗ್ರಿ ಖರೀದಿಯ ಹಣ ಪಡೆಯಲು ವರ್ಷವಿಡೀ ಕಾಯಬೇಕು. ಸರ್ಕಾರ ಸಕಾಲದಲ್ಲಿ ಹಣ ಬಿಡುಗಡೆ ಮಾಡದ ಕಾರಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳಲು ಗ್ರಾಮ ಪಂಚಾಯಿತಿಗಳು ಹಿಂದೇಟು ಹಾಕುತ್ತಿವೆ.

ನರೇಗಾದಲ್ಲಿ 2020–2021ರಲ್ಲಿ ಖರ್ಚು ಮಾಡಲಾದ ಸಾಮಗ್ರಿ ವೆಚ್ಚ ₹214.26 ಕೋಟಿ. ಈವರೆಗೂ ಹಣ ಬಿಡುಗಡೆಯಾಗಿಲ್ಲ. 2021–2022ರ ಹಣಕಾಸು ವರ್ಷದ ಅವಧಿಯಲ್ಲಿ ಖರ್ಚು ಮಾಡಿದ ₹74.76 ಲಕ್ಷ ಬಿಡುಗಡೆಯಾಗಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.

ನಕಲಿ ಬಿಲ್ ಸೃಷ್ಟಿ!
ಬಸವಕಲ್ಯಾಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಹೊಂಡ, ಹೊಲದ ಬದು ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ‌ನೀಡಲಾಗಿದೆ. ಆದರೂ ಹಲವೆಡೆ ಕೆಲಸ ಕೈಗೊಳ್ಳದೆಯೇ ನಕಲಿ ಬಿಲ್ ಸೃಷ್ಟಿಸಿರುವ ಆರೋಪಗಳಿವೆ.

ಮಳೆಗಾಲ ಆರಂಭವಾಗುವ ಮೊದಲು ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಖಾತ್ರಿ ಕಾಮಗಾರಿ ನಡೆಸಲಾಗಿದೆ. ಒಟ್ಟು ₹6 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿದ್ದು, 2.20 ಲಕ್ಷ ಮಾನವ ದಿನಗಳು ಸೃಷ್ಟಿಯಾಗಿವೆ. ಕಳೆದ ವರ್ಷದ ಲಾಕ್‌ಡೌನ್‌ನಂತೆ ಈ ಸಲ ಎಲ್ಲರಿಗೂ ಕೆಲಸ ಒದಗಿಸಿಲ್ಲ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸವೇ ನಡೆದಿಲ್ಲ.

‘ಚರಂಡಿ ಸ್ವಚ್ಛತೆ, ಬದು ನಿರ್ಮಾಣ, ಶಾಲಾ ಆವರಣದಲ್ಲಿ ಆಟದ ಮೈದಾನ ಸಿದ್ಧಪಡಿಸುವ ಕಾಮಗಾರಿಗಳಲ್ಲಿ ಅನೇಕ ಕಡೆ ವ್ಯಾಪಕ ಅವ್ಯವಹಾರ ನಡೆದಿದೆ. ₹3 ಲಕ್ಷ ವೆಚ್ಚ ತೋರಿಸಿ ಬರೀ ₹30 ಸಾವಿರದ ಕೆಲಸ ನಿರ್ವಹಿಸಿರುವುದು ಕಂಡು ಬರುತ್ತಿದ್ದು, ಈ ಬಗ್ಗೆ ಎಲ್ಲೆಡೆ ತನಿಖೆ ನಡೆಯಬೇಕಾಗಿದೆ’ ಎಂದು ಹಲವರು ಒತ್ತಾಯಿಸಿದ್ದಾರೆ.

ಶಾಸಕ ಶರಣು ಸಲಗರ ಕೂಡ ಈಚೆಗೆ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತಾಲ್ಲೂಕು ಮಟ್ಟದ ಸಭೆಯಲ್ಲಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಪ್ಪಿತಸ್ಥರ‌ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಹುಲಸೂರು ತಾಲ್ಲೂಕಿನ ಗಡಿಗೌಡಗಾಂವ, ಮುಚಳಂಬ, ಬೇಲೂರು, ಮಿರಖಲ್, ತೊಗಲೂರ, ಗೋರ್ಟಾ(ಬಿ)ದಲ್ಲಿ ನರೇಗಾದಡಿ 2020–2021ನೇ ಸಾಲಿನಲ್ಲಿ ಕೈಗೊಂಡ ಸಿ.ಸಿ ರಸ್ತೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ₹ 1 ಕೋಟಿ ಮೊತ್ತದ ಸಿಮೆಂಟ್‌ ಮತ್ತಿತರ ಸಾಮಗ್ರಿ ಖರೀದಿಸಲಾಗಿದೆ. ಸರ್ಕಾರದಿಂದ ಇನ್ನೂ ಹಣ ಬಿಡುಗಡೆಯಾಗಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಜೈಪ್ರಕಾಶ ಚವ್ಹಾಣ ಹೇಳುತ್ತಾರೆ.

ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ
ಭಾಲ್ಕಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಆಸ್ತಿ ಸೃಷ್ಟಿಸುವ ಸಂಬಂಧ 2020-21ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳಿಗೆ ₹4.80 ಕೋಟಿ ವ್ಯಯಿಸಲಾಗಿದೆ. ಈ ವರ್ಷದ ₹18.37 ಲಕ್ಷ ಸೇರಿ ಒಟ್ಟು ₹5 ಕೋಟಿ ಮೆಟಲ್ ಪಾವತಿ ಬಾಕಿ ಉಳಿದಿದೆ. ಇದರಿಂದ ರೈತರ ಪ್ರಗತಿಗೆ ಪೂರಕವಾಗಬೇಕಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಕೋಳಿ ಕುರಿ ಸಾಕಾಣಿಕೆ, ದನದ ಕೊಟ್ಟಿಗೆ, ನಾಲಾ ಹೂಳೆತ್ತುವ ಕಾಮಗಾರಿ, ಮಳೆ ನೀರು ಸಂಗ್ರಹಣಾ ಟ್ಯಾಂಕ್, ಸಿಸಿ ರಸ್ತೆ, ರೈತರ ಹೊಲದಲ್ಲಿ ಬಾವಿ ನಿರ್ಮಾಣ, ಕಿರು ಸೇತುವೆ ಸೇರಿದಂತೆ ಅನೇಕ ಆಸ್ತಿ ಸೃಷ್ಟಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅನೇಕ ಕಡೆ ಫಲಾನುಭವಿಗಳೇ ಸಾಲ ಮಾಡಿ ಸಾಮಗ್ರಿಗಳನ್ನು ಖರೀದಿಸಿ ತಂದಿದ್ದಾರೆ.

ಕಾಮಗಾರಿ ಕುಂಠಿತ
ಔರಾದ್: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದ ಕಾರಣ ಸಮಸ್ಯೆಯಾಗಿದೆ. ಕಳೆದ ಮೂರು ತಿಂಗಳಿನಿಂದ ಸಾಮಗ್ರಿ ಖರೀದಿ ಅನುದಾನ ಬಾರದೆ ಮುಂದಿನ ಕೆಲಸಗಳು ಆಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಸಿ ರಸ್ತೆ, ಸಿಸಿ ಚರಂಡಿ, ಶೌಚಾಲಯ ಕಟ್ಟಡ, ಶಾಲಾ ಕಂಪೌಂಡ್ ಗೋಡೆ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಮೂರು ತಿಂಗಳಿನಿಂದ ಅನುದಾನ ಬಾರದೆ ಸಂಬಂಧಿತ ಏಜೆನ್ಸಿಯವರು ಮುಂದಿನ ಕಾಮಗಾರಿಗೆ ಸಾಮಗ್ರಿ ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ.

‘ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಪಾವತಿಯಾಗುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಮಟಿರಿಯಲ್ ಪಾವತಿ ಬರುವಲ್ಲಿ ವಿಳಂಬವಾಗುತ್ತಿದೆ. ತಾಲ್ಲೂಕಿನ 21 ಗ್ರಾಮ ಪಂಚಾಯಿತಿಯಲ್ಲಿ ಕಳೆದ ಮಾರ್ಚ್‍ನಿಂದ ಇಲ್ಲಿಯ ತನಕ ₹1.69 ಕೋಟಿ ಅನುದಾನ ಬರಬೇಕಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳುತ್ತಾರೆ.

‘ನರೇಗಾ ಯೋಜನೆ ಅಡಿಯಲ್ಲಿ ಕೆಲಸಕ್ಕೆ ಬಳಸಿದ ಕಲ್ಲು, ಸಿಮೆಂಟ್ ಸೇರಿದಂತೆ ಇತರ ಸಾಮಗ್ರಿಗಳ ಹಣ ಎರಡು ವರ್ಷಗಳಿಂದ ಬಾಕಿ ಉಳಿದಿದೆ’ ಎಂದು ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಕೆ) ಗ್ರಾ.ಪಂ ಅಧ್ಯಕ್ಷೆ ಅನಿತಾ ಹೇಳುತ್ತಾರೆ.

ನರೇಗಾ ಕಾಮಗಾರಿ ಸ್ಥಗಿತ; ಕಾರ್ಮಿಕರ ಪರದಾಟ
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿಯಲ್ಲಿ ಒಂದು ತಿಂಗಳಿನಿಂದ ನರೇಗಾ ಯೋಜನೆ ಅಡಿಯಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಪಂಚಾಯಿತಿ ಸದಸ್ಯರ ಹೊಂದಾಣಿಕೆ ಸಮಸ್ಯೆಯಿಂದ ಯೋಜನೆ ಆರಂಭವಾಗಿಲ್ಲ. ಇದರಿಂದ ಬಹುತೇಕ ಫಲಾನುಭವಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ.

‘ಸದಸ್ಯರ ಮನವೊಲಿಸಿ ತಕ್ಷಣ ನರೇಗಾ ಯೋಜನೆ ಕಾಮಗಾರಿ ಆರಂಭಿಸಲಾಗುವುದು’ ಎಂದು ಪಿಡಿಒ ಸಂಗಮೇಶ ತಿಳಿಸಿದ್ದಾರೆ.

ಲಾಭ ಪಡೆದ ಫಲಾನುಭವಿಗಳು

ಬೀದರ್‌ ಜಿಲ್ಲೆಯಲ್ಲಿ 169 ಜನ ನರೇಗಾದಲ್ಲಿ ವೈಯಕ್ತಿಕ ಲಾಭ ಪಡೆದುಕೊಂಡಿದ್ದಾರೆ. ಹುಮನಾಬಾದ್ ತಾಲ್ಲೂಕಿನಲ್ಲಿ 44, ಚಿಟಗುಪ್ಪದಲ್ಲಿ 32, ಔರಾದ್‌ನಲ್ಲಿ 24, ಬಸವಕಲ್ಯಾಣದಲ್ಲಿ 18, ಭಾಲ್ಕಿಯಲ್ಲಿ 22, ಬೀದರ್‌ನಲ್ಲಿ 19, ಹುಲಸೂರಲ್ಲಿ 6 ಹಾಗೂ ಕಮಲನಗರ ತಾಲ್ಲೂಕಿನಲ್ಲಿ ನಾಲ್ವರು ಯೋಜನೆಯಡಿ ವೈಯಕ್ತಿಕ ಶೌಚಾಲಯ, ಬಚ್ಚಲು ಮನೆ, ಹೊಲದ ಬದು, ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಹುಮನಾಬಾದ್‌ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಿವೆ. ಇದರಿಂದ ಆಸ್ತಿ ಸೃಷ್ಟಿಸಲು ಸಾಧ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ತಾಲ್ಲೂಕಾದ ಕಮಲನಗರ ನರೇಗಾ ಲಾಭ ಪಡೆಯುವಲ್ಲಿ ಹಿಂದೆ ಬಿದ್ದಿದೆ.

ಲಕ್ಷ ಜನರಿಗೆ ಉದ್ಯೋಗ
‘ಬೀದರ್ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1,15,772 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸುತ್ತಿದ್ದ ಅನೇಕ ಜನ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಿದೆ’ ಎಂದು ನರೇಗಾ ನೋಡಲ್‌ ಅಧಿಕಾರಿ ದೀಪಕ ಮಣಗೆ ಹೇಳುತ್ತಾರೆ.

ಜಿಲ್ಲೆಯಲ್ಲಿ 4,36,118 ಜನ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಸಕ್ತ ವರ್ಷ 17,878 ಜನ ಹೊಸದಾಗಿ ಜಾಬ್‌ಕಾರ್ಡ್‌ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,16,826 ಜನ ಜಾಬ್‌ಕಾರ್ಡ್‌ ಹೊಂದಿದ್ದಾರೆ.

ಪೂರಕ ಮಾಹಿತಿ: ಮಾಣಿಕ ಭುರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ವೀರೇಶ ಮಠಪತಿ, ಗುಂಡು ಅತಿವಾಳೆ, ನಾಗೇಶ ಪ್ರಭಾ, ಗಿರಿರಾಜ್‌ ವಾಲೆ, ಮನೋಜಕುಮಾರ ಹಿರೇಮಠ, ಬಸವಕುಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT