ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಉಳಿಯಲು ಬಳಕೆಯೇ ಪರಿಹಾರ: ಪ್ರೊ.ಸಿದ್ರಾಮಪ್ಪ ಮಾಸಿಮಾಡೆ

Last Updated 15 ನವೆಂಬರ್ 2022, 13:51 IST
ಅಕ್ಷರ ಗಾತ್ರ

ಬೀದರ್‌: ‘ಅತ್ಯಂತ ಪುರಾತನ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ. ಈ ಭಾಷೆಯನ್ನು ಉಳಿಸಿ ಬೆಳೆಸಲು ಬಳಸುವುದೊಂದೆ ಪರಿಣಾಮಕಾರಿ ಮಾರ್ಗವಾಗಿದೆ’ ಎಂದು ಸಾಹಿತಿ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ಯುವ ಘಟಕದ ವತಿಯಿಂದ ವಿದ್ಯಾನಗರದಲ್ಲಿರುವ ಬಸವ ಕೇಂದ್ರದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಹಾಗೂ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಕನ್ನಡ ಉಳಿಯುವಲ್ಲಿ ಕವಿ ಪಂಪನಿಗೆ ಆಶ್ರಯ ಕೊಟ್ಟು ಪ್ರೋತ್ಸಾಹಿಸುವ ಅರಿಕೇಸರಿಯಂತಹ ಸಾಕಷ್ಟು ಮಹನೀಯರ ಪಾತ್ರ ಬಹಳಷ್ಟಿದೆ. ಆ ಎಲ್ಲ ಮಹನೀಯರನ್ನು ಅನುಸರಿಸಬೇಕಾಗ ಅನಿವಾರ್ಯತೆಯಿದೆ. ಹಾಗೆಯೇ ಕನ್ನಡವನ್ನು ಉಳಿಸಿ ಬೆಳೆಸಲು ಶ್ರಮಿಸಿದ ಪಂಪ, ರನ್ನ, ಬಸವಣ್ಣನಂತ ಮಹನೀಯರ ಬಗ್ಗೆ ಅಧ್ಯಯನ ಮಾಡಬೇಕಿದೆ’ ಎಂದರು.

‘ಇಂದಿನ ದಿನಮಾನಗಳಲ್ಲಿ ಕನ್ನಡ ಭಾಷೆಯ ಬಳಕೆ ಮತ್ತು ಕಾಗುಣಿತ ಬಳಸುವಲ್ಲಿ ನಿರಾಸಕ್ತಿ ವಹಿಸುತ್ತಿರುವುದು ಕಳವಳಕಾರಿ ವಿಷಯ. ಕನ್ನಡ ಭಾಷೆಯ ಬಳಕೆಯಲ್ಲಿ ತಪ್ಪುಗಳು ಆಗುತ್ತಿರುವುದನ್ನು ನೋಡಿಯೂ ಸಹಿಸಿಕೊಂಡು ಹೋಗುತ್ತಿರುವುದು ಸಹನೀಯವಲ್ಲ’ ಎಂದರು.

‘ಸುರೇಶ ಚನ್ನಶೆಟ್ಟಿ ಅವರ ಮುಂದಾಳತ್ವದಲ್ಲಿ ಜಿಲ್ಲೆಯಲ್ಲಿ ಕನ್ನಡಪರ ಕೆಲಸಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಇವರ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ನಿತ್ಯಬದುಕಿನಲ್ಲಿ ಕನ್ನಡದ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಕನ್ನಡವನ್ನು ಬೆಳೆಸಲು ಪ್ರತಿಯೊಬ್ಬ ಕನ್ನಡಿಗನೂ ಮುಂದಾಗಬೇಕಿದೆ’ ಎಂದು ತಿಳಿಸಿದರು.

ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಸವರಾಜ ಬಲ್ಲೂರ ಮಾತನಾಡಿ, ರಾಜ್ಯದಲ್ಲಿ 10 ಸಾವಿರ ವರ್ಷಗಳ ಹಿಂದೆಯೇ ಕನ್ನಡವನ್ನು ಬಳಕೆ ಮಾಡಿರುವ ಬಗ್ಗೆ ಉಲ್ಲೇಖಗಳು ಸಿಕ್ಕಿವೆ. ಈ ಬಗ್ಗೆ ವಿಚಾರ ವಿಮರ್ಶೆಯಾಗಬೇಕಾದ ಅವಶ್ಯಕತೆಯಿದೆ. ದೇಶದಲ್ಲಿ ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ಗಂಭೀರತೆ ವಹಿಸಬೇಕಿದೆ’ ಎಂದರು.

‘ನಮ್ಮಲ್ಲಿನ ಬಹುತೇಕ ಜನರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆಂಗ್ಲ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಹೆಚ್ಚಾಗಿದೆ. ಈ ಸಂಪ್ರದಾಯ ನಿಲ್ಲಬೇಕು. ಎಲ್ಲರೂ ತಮ್ಮ ಮಕ್ಕಳನ್ನು ಮಾತೃಭಾಷೆ ಕನ್ನಡದ ಶಾಲೆಗಳಿಗೆ ಸೇರಿಸಲು ಮುಂದಾಗಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ .ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಸುರೇಶ ಚನ್ನಶೆಟ್ಟಿ ಅವರು ಕಿರಿಯ ವಯಸ್ಸಿನಲ್ಲಿಯೇ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಕೊಂಡಾಡಿದರು.

ಸಾನಿಧ್ಯ ವಹಿಸಿದ್ದ ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಆಶೀರ್ವಚನ ನೀಡಿದರು.

ಹಿರಿಯರಾದ ಪ್ರಭುರಾವ್ ವಸ್ಮತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವಕುಮಾರ ಕಟ್ಟೆ, ಟಿ.ಎಂ ಮಚ್ಚೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್ ಮನೋಹರ ಇದ್ದರು.

ಕಸಾಪ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ವೀರೇಶ ಸ್ವಾಮಿ ನಿರೂಪಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT