ಶನಿವಾರ, ಮೇ 15, 2021
26 °C

ಅಭಿವೃದ್ಧಿ ಪರ ಪಕ್ಷಕ್ಕೆ ಮತದಾರರ ಬೆಂಬಲ: ಪ್ರಭು ಚವಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಮತದಾರರು ಅಭಿವೃದ್ಧಿ ಪರ ಪಕ್ಷವನ್ನು ಬೆಂಬಲಿಸಿ ದ್ದಾರೆ' ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಪ್ರತಿಕ್ರಿಯಿಸಿದರು.

ಇಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಲಾಕ್‍ಡೌನ್ ಅವಧಿಯಲ್ಲಿನ ಶರಣು ಸಲಗರ ಅವರ ಸೇವೆಯನ್ನು ಜನ ಗೌರವಿಸಿದ್ದಾರೆ. ಬಡವರ ಪರ ಕಾಳಜಿ ಹಾಗೂ ಅಭಿವೃದ್ಧಿ ಚಿಂತನೆ ಹೊಂದಿರುವ ಅವರಿಗೆ ವಿಜಯ ಮಾಲೆ ತೊಡಿಸಿ, ಯೋಗ್ಯ ಪ್ರತಿನಿಧಿ ಯನ್ನು ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು.

‘ಉಪ ಚುನಾವಣೆ ಮುಗಿಯುವ ವರೆಗೂ ಬಸವಕಲ್ಯಾಣದಲ್ಲಿ ವಾಸ್ತವ್ಯ ಮಾಡಿದ್ದೆ. ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದ್ದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಸಂಸದ ಭಗವಂತ ಖೂಬಾ ಸೇರಿ ಅನೇಕ ಗಣ್ಯರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು’ ಎಂದು ಅವರು ಸ್ಮರಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಮುಖ್ಯಮಂತ್ರಿ ಬಸವಕಲ್ಯಾಣ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಈಗಾಗಲೇ ಜನರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಅನುಭವ ಮಂಟಪಕ್ಕೆ ಅನುದಾನ ಒದಗಿಸಿ, ಕಾಮಗಾರಿಗೆ ಚಾಲನೆಯನ್ನೂ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ’ ಎಂದು ಹೇಳಿದರು.

‘ನಾನು ಬಸವಕಲ್ಯಾಣ ಅಭಿವೃದ್ಧಿಗೆ ಬದ್ಧನಾಗಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶರಣು ಸಲಗರ ಅವರೊಂದಿಗೆ ಇರಲಿದ್ದೇನೆ. ಬಸವಕಲ್ಯಾಣದಲ್ಲಿ ಇನ್ನೂ ಆಗಬೇಕಿರುವ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಅನುದಾನ ಬಿಡುಗಡೆಗೆ ಕೋರುತ್ತೇನೆ’ ಎಂದು ಸಚಿವ ಚವಾಣ್‌ ಅವರು ತಿಳಿಸಿದರು.

‘ಸಂಘಟಿತ ಪ್ರಚಾರದ ಫಲ’
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಗೆಲುವಿನಲ್ಲಿ ಬಿಜೆಪಿ ಸರ್ಕಾರಗಳ ಸಾಧನೆ ಹಾಗೂ ಪಕ್ಷದ ನಾಯಕರ ಸಂಘಟಿತ ಪ್ರಚಾರ ಪ್ರಮುಖ ಪಾತ್ರ ವಹಿಸಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಮುಖ್ಯಮಂತ್ರಿ, ಸಚಿವರು, ಸಂಸದರು, ಜನಪ್ರತಿನಿಧಿಗಳು, ಚುನಾವಣಾ ಉಸ್ತುವಾರಿಗಳು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಸರ್ಕಾರದ ಸಾಧನೆಗಳು ಹಾಗೂ ಜನಪರ ಕಾರ್ಯ ಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿದ್ದರು ಎಂದು ತಿಳಿಸಿದ್ದಾರೆ.

ಪಕ್ಷದ ಸಂಘಟಿತ ಶ್ರಮವು ಮತದಾರರ ಮನಸ್ಸು ಬದಲಾಗುವಂತೆ ಮಾಡಿತು. ಉಪ ಚುನಾವಣೆಯಲ್ಲಿನ ಗೆಲುವು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಯೋಜನೆಗಳಿಗೆ ದೊರೆತ ಜನ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.

ಅಭಿವೃದ್ಧಿಗೆ ಶರಣು ಶ್ರಮ: ಖೂಬಾ
ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಬಸವಕಲ್ಯಾಣ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಲಿದ್ದಾರೆ ಎಂದು ಸಂಸದ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹ 500 ಕೋಟಿ ಅನುದಾನ ಘೋಷಿಸಿ, ಈಗಾಗಲೇ  ₹100 ಕೋಟಿ ಬಿಡುಗಡೆಯನ್ನೂ ಮಾಡಿದೆ. ಬಸವ ಭಕ್ತರ ಅಪೇಕ್ಷೆಯಂತೆ ಬರುವ ದಿನಗಳಲ್ಲಿ ಮಂಟಪ ನಿರ್ಮಾಣಗೊಳ್ಳಲಿದೆ. ಸಲಗರ ಈ ದಿಸೆಯಲ್ಲಿ ಕೆಲಸ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉತ್ತಮ ಹಾಗೂ ಜನಪರ ಆಡಳಿತವೇ ಚುನಾವಣೆ ಫಲಿತಾಂಶಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಜನ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು