ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿರಖಲ್‌’ನಲ್ಲಿ ಸಮಸ್ಯೆ ಉಲ್ಬಣ

ನೀರಿನ ತೊಟ್ಟಿಗಳ ಎದುರಲ್ಲಿ ಕೊಡಗಳ ಉದ್ದನೆ ಸಾಲು: ಹೊಲಗಳಲ್ಲಿಯ ಬಾವಿಗಳಿಂದ ನೀರು
Last Updated 4 ಮೇ 2020, 11:12 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಮಿರಖಲ್‌ನಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮಸ್ಥರು ಸುಡು ಬಿಸಿಲಲ್ಲಿಯೇ ಹೊಲಗಳಲ್ಲಿನ ಬಾವಿಗಳಿಂದ ನೀರಿನ ಕೊಡಗಳನ್ನು ಹೊತ್ತುಕೊಂಡು ತರುತ್ತಿದ್ದಾರೆ.

ಊರು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು 5 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಅಂತರ್ಜಲ ಮಟ್ಟ ಕುಸಿದಿದ್ದರಿಂದ ಕೊಳವೆ ಬಾವಿಗಳಲ್ಲಿನ ನೀರಿನ ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ ನಳಗಳಿಗೆ ನೀರು ಬರುತ್ತಿಲ್ಲ. ಓಣಿಗಳ ರಸ್ತೆಗಳಲ್ಲಿ ಅಲ್ಲಲ್ಲಿ ಇರುವ ತೊಟ್ಟಿಗಳಲ್ಲಿ ನೀರನ್ನು ತುಂಬಲಾಗುತ್ತಿದೆ. ಆದ್ದರಿಂದ ಜನರು ಅಂಥಲ್ಲಿ ಕೊಡಗಳನ್ನು ಸಾಲಿನಲ್ಲಿ ಇಟ್ಟು ಬಿಸಿಲಲ್ಲಿಯೇ ಕಾಯುತ್ತ ಕುಳಿತಿರುತ್ತಾರೆ. ತೊಟ್ಟಿಗಳ ಎದುರಲ್ಲಿ ಯಾವಾಗಲೂ ಕೊಡಗಳ ಉದ್ದನೆಯ ಸಾಲುಗಳು ಕಂಡು ಬರುತ್ತಿವೆ.

ಅಂಬೇಡ್ಕರ್ ವೃತ್ತದಲ್ಲಿ, ಔರಾದ್ ರಸ್ತೆ ಕ್ರಾಸ್ ಹಾಗೂ ಗ್ರಾಮದಲ್ಲಿನ ಹನುಮಾನ ದೇವಸ್ಥಾನದ ಹತ್ತಿರ ಹಾಗೂ ಇತರೆಡೆಯಲ್ಲಿ ತೊಟ್ಟಿಗಳಿದ್ದು ಇಲ್ಲಿಯೂ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಹೀಗಾಗಿ ನೀರು ತುಂಬಲು ನಾ ಮುಂದೆ ತಾ ಮುಂದೆ ಎಂದು ಜನರು ನೂಕುನುಗ್ಗಲು ಮಾಡುತ್ತಾರೆ. ನೀರು ದೊರಕದ್ದಕ್ಕೆ ಜಗಳಗಳು ಕೂಡ ಆಗುತ್ತವೆ.

‘ಲಾಕ್‌ಡೌನ್ ಕಾರಣ ಪರ ಊರಿನಲ್ಲಿದ್ದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಇತರರು ಊರಿಗೆ ಬಂದಿದ್ದು ಜನರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ನೀರಿನ ಬಳಕೆಯೂ ಹೆಚ್ಚಾಗಿದೆ. ಆದರೆ, ನೀರಿನ ಲಭ್ಯತೆ ಮಾತ್ರ ಕಡಿಮೆಯಿದೆ. ಆದ್ದರಿಂದ ದೂರದ ಹೊಲಗಳಲ್ಲಿನ ತೆರೆದ ಬಾವಿಗಳಿಂದ ನೀರು ತರುವ ಪರಿಸ್ಥಿತಿ ಬಂದೊದಗಿದೆ’ ಎಂದು ರಾಮ ಹಾಗೂ ಪಾರ್ವತಿ ಹೇಳಿದ್ದಾರೆ .‘ಕೆಲ ಕೊಳವೆ ಬಾವಿಗಳಲ್ಲಿ ನೀರು ಇದ್ದರೂ ನೀರು ಪೊರೈಕೆ ಯೋಜನೆಯಲ್ಲಿ ವ್ಯತ್ಯಯ ಆಗುತ್ತಿದೆ. ಕೆಲವೆಡೆ ಪೈಪ್‌ಲೈನ್‌ ಸರಿಯಾಗಿಲ್ಲ. ಹೀಗಾಗಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಶೀಘ್ರದಲ್ಲಿ ನೀರಿನ ಸೌಲಭ್ಯ ಕಲ್ಪಿಸಬೇಕು’ ಎಂದು ಪ್ರಮುಖರಾದ ಶರದ್ ಶಿಂಧೆ ಆಗ್ರಹಿಸಿದ್ದಾರೆ.

‘ಗ್ರಾಮದಲ್ಲಿನ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆಯ ಕಾರಣ ಗ್ಯಾಪ್ ಕೊಡುತ್ತಿವೆ. ಆದ್ದರಿಂದ ಸಮೀಪದ ವಾಂಜರವಾಡಿ ಹತ್ತಿರದ ತೆರೆದ ಬಾವಿಯಿಂದ ನೀರು ತಂದು ತೊಟ್ಟಿಗಳಲ್ಲಿ ಸುರಿಯಲು ಯೋಜನೆ ರೂಪಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ ತಿಳಿಸಿದ್ದಾರೆ.

‘ವಾಂಜರವಾಡಿಯ ಬಾವಿಯಿಂದ ಸುಮಾರು 2 ಕಿ.ಮೀ ನಷ್ಟು ಪೈಪ್‌ಲೈನ್‌ ಮೊದಲೇ ಅಳವಡಿಸಿದ್ದರೂ ಕೆಲ ಸ್ಥಳಗಳಲ್ಲಿ ಅದಕ್ಕೆ ಹಾನಿಯಾಗಿದೆ. ಅದನ್ನು ದುರುಸ್ತಿಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಇನ್ನೇರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT