ಬುಧವಾರ, ಜನವರಿ 22, 2020
20 °C

‘ಧರ್ಮಮಾರ್ಗದಲ್ಲಿ ಸಾಗಿದರೆ ಮಾನಸಿಕ ಶಾಂತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಬರೀ ಭೌತಿಕ ಉನ್ನತಿಯಿಂದ ಏನೂ ಸಾಧ್ಯವಿಲ್ಲ. ಧರ್ಮ ಮಾರ್ಗದಲ್ಲಿ ಸಾಗಿದರೆ ಮಾತ್ರ ಮಾನಸಿಕ ಶಾಂತಿ ಲಭಿಸುತ್ತದೆ’ ಎಂದು ನಿವೃತ್ತ ಪ್ರಾಚಾರ್ಯ ದಯಾನಂದ ಶೀಲವಂತ ಹೇಳಿದ್ದಾರೆ.

ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಹಾಗೂ ತ್ರಿಪುರಾಂತ ಗವಿಮಠದಿಂದ ಇಲ್ಲಿನ ಶಹಾಪುರ ಓಣಿಯ ಸವಿತಾ ರಮೇಶಸ್ವಾಮಿ ಅವರ ನಿವಾಸದಲ್ಲಿ ಬುಧವಾರ ಆಯೋಜಿಸಿದ್ದ ಮನೆ ಮನಗಳಲ್ಲಿ ಸದ್ಭಾವ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ತ್ರಿಪುರಾಂತ ಗವಿಮಠವು ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿದೆ. ಇಷ್ಟಲಿಂಗಪೂಜೆ, ಧ್ಯಾನಾದಿಗಳು ಅಲ್ಲಿ ನಿರಂತರವಾಗಿ ನಡೆಯುತ್ತಿವೆ. ಜತೆಯಲ್ಲಿ ರೇಣುಕಾಚಾರ್ಯರ ಜಯಂತಿ ಅದ್ಧೂರಿಯಾಗಿ ಆಯೋಜಿಸಿ ಪಲ್ಲಕ್ಕಿ ಮೆರವಣಿಗೆ, ರಥೋತ್ಸವ ಹಮ್ಮಿಕೊಳ್ಳುವ ಅಗತ್ಯವಿದ್ದು ಇದಕ್ಕಾಗಿ ಭಕ್ತರು ಎಲ್ಲ ರೀತಿಯಿಂದಲೂ ಸಹಕಾರ ನೀಡಬೇಕು’ ಎಂದರು.

ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಭಕ್ತಿಯಲ್ಲಿ ಸಕಾಮ ಭಕ್ತಿ ಹಾಗೂ ನಿಷ್ಕಾಮ ಭಕ್ತಿ ಎಂದಿವೆ. ನಿಷ್ಕಾಮ ಭಕ್ತಿಯಿಂದ ಮಾತ್ರ ಉತ್ತಮ ಫಲ ದೊರಕುತ್ತದೆ. ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ’ ಎಂದರು.

‘ಎಲ್ಲರೂ ಮಕ್ಕಳಿಗೆ ಶಿಕ್ಷಣ ನೀಡಬೇಕು. ಅಕ್ಷರಕ್ಕಿಂತ ಸಂಸ್ಕಾರ ನೀಡುವುದು ಮುಖ್ಯ. ಯುವಜನತೆ ದುಶ್ಚಟ, ದುರ್ಗುಣಗಳನ್ನು ಬಿಟ್ಟು ಸನ್ನಡತೆ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ' ಎಂದು ಹೇಳಿದರು.

ರಮೇಶಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ, ಮಯೂರಿ ರಮೇಶ ಮಾತನಾಡಿದರು. ನಾಗಣ್ಣ ಭೂಶೆಟ್ಟೆ, ಮಲ್ಲಿಕಾರ್ಜುನ ಶೀಲವಂತ ಸಂಗೀತ ಪ್ರಸ್ತುತಪಡಿಸಿದರು. ಗವಿಮಠ ಟ್ರಸ್ಟ್ ಅಧ್ಯಕ್ಷ ಶರಣಪ್ಪ ಬಿರಾದಾರ, ವೀರಣ್ಣ ಶೀಲವಂತ, ಸೂರ್ಯಕಾಂತ ಶೀಲವಂತ, ಮಲ್ಲಿಕಾರ್ಜುನ ನಂದಿ, ರೇವಣಸಿದ್ಧಯ್ಯ ಮಠಪತಿ, ಪ್ರೊ.ರುದ್ರೇಶ್ವರ ಗೋರಟಾ, ಡಾ.ಬಸವರಾಜಸ್ವಾಮಿ, ರಮೇಶ ರಾಜೋಳೆ ಪಾಲ್ಗೊಂಡಿದ್ದರು.
 

ಪ್ರತಿಕ್ರಿಯಿಸಿ (+)