ಬುಧವಾರ, ಡಿಸೆಂಬರ್ 7, 2022
22 °C
ಭಾಲ್ಕಿ: ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಭಾಲ್ಕಿ | ಬಡವರ ಮನೆ ಕನಸು ನನಸು ಆಗುವವರೆಗೂ ಹೋರಾಟ: ಈಶ್ವರ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಕ್ಷೇತ್ರದ ಬಡವರ ಕನಸಿನ ಮನೆ ನನಸು ಆಗುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದ ಎಲ್ಲ ವಸತಿ ರಹಿತರಿಗೆ ಶಾಶ್ವತ ಸೂರು ಒದಗಿಸುವ ಉದ್ದೇಶದಿಂದ ನಾನು ಶಾಸಕನಾಗಿ ಆಯ್ಕೆ ಆದಾಗಿನಿಂದ ಇದುವರೆಗೂ 26 ಸಾವಿರ ಮನೆ ಮಂಜೂರು ಮಾಡಿಸಿದ್ದೇನೆ. 12 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿದ್ದವು. ಬಳಿಕ ಚುನಾವಣೆ ಎದುರಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಚುನಾವಣೆಯಲ್ಲಿ ನನ್ನ ವಿರುದ್ಧ ಸೋಲು ಕಂಡ ಡಿ.ಕೆ.ಸಿದ್ರಾಮ ಮತ್ತು ಈಗಿನ ಕೇಂದ್ರದ ಮಂತ್ರಿ ಭಗವಂತ ಖೂಬಾ ಸೇರಿ ದುರುದ್ದೇಶದಿಂದ ಸುಳ್ಳು ದೂರು ನೀಡಿ ಬಡವರಿಗೆ ಸೇರಬೇಕಾಗಿದ್ದ ಕಂತಿನ ಹಣ ತಡೆ ಹಿಡಿದಿದ್ದಾರೆ’ ಎಂದು ದೂರಿದರು.

‘ಹಂಚಿಕೆ ಮಾಡಿರುವ ಮನೆಯಲ್ಲಿ ಬೋಗಸ್ ಸಾಬೀತಾದರೆ ರಾಜೀನಾಮೆ ಕೊಡಲು ಸಿದ್ಧ’ ಎಂದು ಸವಾಲು ಹಾಕಿದರು.

‘ಸುಳ್ಳು, ಮೋಸ, ವಂಚನೆ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಖೂಬಾ, ಡಿ.ಕೆ.ಸಿದ್ರಾಮ ಅವರು ರಾಜಕೀಯದಲ್ಲಿ ಇರಲು ಲಾಯಕ್ಕಿಲ್ಲ. ರಾಜ್ಯದ ಬಿಜೆಪಿ ಸರ್ಕಾರ ಇದುವರೆಗೂ ಒಂದೂ ಮನೆ ನೀಡಿಲ್ಲ. ಚುನಾವಣೆ ಪೂರ್ವದಲ್ಲಿ ವಸತಿ ಫಲಾನುಭವಿಗಳ ಕಂತು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆ ಸಂದರ್ಭದಲ್ಲಿ ವಸತಿ ಫಲಾನುಭವಿಗಳಿಗೆ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡಿಸುವುದರ ಜತೆಗೆ ಸೂರು ಇಲ್ಲದವರಿಗೆ ಪಕ್ಕಾ ಮನೆ ಕೊಡಿಸಿ ಗುಡಿಸಲು ಮುಕ್ತ ತಾಲ್ಲೂಕು ಮಾಡುವುದಾಗಿ’ ಭರವಸೆ ನೀಡಿದರು.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ‘ಅರ್ಹ ವಸತಿ ಫಲಾನುಭವಿಗಳ ಕಂತಿನ ಹಣ ಪಾವತಿ ಮಾಡದೆ ಬಿಜೆಪಿ ಸರ್ಕಾರ ಬಡವರ ಜತೆಗೆ ಚೆಲ್ಲಾಟವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಶಾಸಕರನ್ನು ಖರೀದಿ ಮಾಡಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳಗಿದೆ. ಹುದ್ದೆ ಭರ್ತಿ ಸೇರಿ ಎಲ್ಲದರಲ್ಲೂ ಲಂಚದ ಬೇಡಿಕೆ ಇಡುತ್ತಿದೆ’ ಎಂದು ಆರೋಪಿಸಿದರು.

ಎಐಸಿಸಿ ಕಾರ್ಯದರ್ಶಿ ಶ್ರೀನಿವಾಸ ಬಾಬು ಮಾತನಾಡಿ, ‘ಶಾಸಕ ಖಂಡ್ರೆ ಅವರು ಯಾವುದೇ ಜಾತಿ, ಸಮುದಾಯ ಎನ್ನದೇ ಎಲ್ಲರಿಗೂ ಶಾಶ್ವತ ಸೂರು ನೀಡುವ ಕೆಲಸ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಮನೆ ಕಂತಿನ ಹಣ ನಿಲ್ಲಿಸುವ ಮೂಲಕ ಸೇಡಿನ ರಾಜಕೀಯ ಮಾಡುತ್ತಿದೆ’ ಎಂದು ದೂರಿದರು.

ಬೀದರ್ ಶಾಸಕ ರಹೀಂಖಾನ್, ಎಂಎಲ್ಸಿ ಭೀಮರಾವ ಪಾಟೀಲ, ಮೀನಾಕ್ಷಿ ಸಂಗ್ರಾಮ ಮಾತನಾಡಿದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವಾಣ್‌, ಮಾಜಿ ಶಾಸಕ ಅಶೋಕ ಖೇಣಿ, ಪುರಸಭೆ ಅಧ್ಯಕ್ಷ ಅನಿಲ್ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ ಇದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಲಾಯಿತು.

ಬಿಜೆಪಿ ನಾಯಕರ ಫ್ಲೆಕ್ಸ್‌ ಪ್ರದರ್ಶಿಸಿ ಧಿಕ್ಕಾರ

ಭಾಲ್ಕೇಶ್ವರ ಮಂದಿರ ಆವರಣದಿಂದ ಶಾಸಕ ಈಶ್ವರ ಖಂಡ್ರೆ ನೇತೃತ್ವದಲ್ಲಿ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಚನ್ನಬಸವಾಶ್ರಮ, ಬಸವೇಶ್ವರ ವೃತ್ತದ ಮೂಲಕ ಮಹಾತ್ಮ ಗಾಂಧಿ ವೃತ್ತದ ಸಮಾವೇಶ ಸ್ಥಳದಲ್ಲಿ ಸಮಾವೇಶಗೊಂಡಿತು.

ಮೆರವಣಿಗೆಯುದ್ದಕ್ಕೂ ವಸತಿ ಫಲಾನುಭವಿಗಳು, ಮಹಿಳೆಯರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಗುಡುಗಿದರು. ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರ ಫ್ಲೆಕ್ಸ್ ಹಿಡಿದು ಧಿಕ್ಕಾರ ಕೂಗಿದರು. ಪಟ್ಟಣದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಭಟನೆ ವಿರೋಧಿಸಿ ಕರಪತ್ರ ಹಂಚಿಕೆ: ಮಾತಿನ ಚಕಮಕಿ

ಭಾಲ್ಕಿಯ ಸರಾಫ್ ಬಜಾರ್‌ನಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಶಾಸಕ ಈಶ್ವರ ಖಂಡ್ರೆ ಅವರು ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಡಬಲಿ ಗೇಮ್ ನೀತಿ ಅನುಸರಿಸುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚುತ್ತಿದ್ದ ವೇಳೆ ಕಾಂಗ್ರೆಸ್ ನಾಯಕರೊಬ್ಬರ ಪಿ.ಎ. ಅವುಗಳನ್ನು ಕಸಿದುಕೊಂಡ ಹಿನ್ನೆಲೆಯಲ್ಲಿ ಕೆಲ ಕಾಲ ಪರಸ್ಪರ ಮಾತಿನ ಚಕಮಕಿ ನಡೆಯಿತು.

ನಂತರ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಯುವ ಮುಖಂಡ ಪ್ರಸನ್ನ ಖಂಡ್ರೆ ಮತ್ತು ಅವರ ಬೆಂಬಲಿಗರು ಶಾಸಕ ಈಶ್ವರ ಖಂಡ್ರೆ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸ್ ಅಧಿಕಾರಿಯ ಮನವೊಲಿಕೆ ನಂತರ ಪರಿಸ್ಥಿತಿ ಶಾಂತವಾಯಿತು. ಈ ಕುರಿತ ವಿಡಿಯೊ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.