ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆಯ ಕ್ರೀಡಾಕೂಟ: ಅಲೆದಾಡಿ ಪ್ರಮಾಣಪತ್ರ ಪಡೆದ ವಿಜೇತರು

ಶಿಕ್ಷಣ ಇಲಾಖೆಯ ಕ್ರೀಡಾಕೂಟದಲ್ಲಿ ಅವವಸ್ಥೆ: ಕ್ರೀಡಾಪಟುಗಳ ಅಸಮಾಧಾನ
Last Updated 3 ಅಕ್ಟೋಬರ್ 2022, 12:57 IST
ಅಕ್ಷರ ಗಾತ್ರ

ಬೀದರ್: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಡೆದ ದಸರಾ ಕ್ರೀಡಾಕೂಟ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸಿದ 2022-23ನೇ ಸಾಲಿನ ಬೀದರ್ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ವಿಜೇತರಿಗೆ ಸಕಾಲದಲ್ಲಿ ಪ್ರಮಾಣಪತ್ರ ನೀಡದಿರುವುದು ಕ್ರೀಡಾಪಟುಗಳಲ್ಲಿ ಅಸಮಾಧಾನ ಮೂಡಿಸಿದೆ.

ಜಿಲ್ಲಾ ಪಂಚಾಯಿತಿ ಮೂಲಕವೇ ಕ್ರೀಡಾಕೂಟ ಆಯೋಜಿಸಿದ್ದರೂ ಸರಿಯಾದ ವ್ಯವಸ್ಥೆಯೇ ಇರಲಿಲ್ಲ. ಯಾವ ಕ್ರೀಡೆಗಳನ್ನು ಯಾವ ಸಮಯಕ್ಕೆ ಆಡಿಸಬೇಕು ಎನ್ನುವ ಕನಿಷ್ಠ ಜ್ಞಾನವೂ ಆಯೋಜಕರಿಗೆ ಇರಲಿಲ್ಲ. ಹೀಗಾಗಿ ಕ್ರೀಡಾಪಟುಗಳು ಹಸಿವಿನಿಂದ ಬಳಲಿ ಆಯೋಜಕರಿಗೆ ಹಿಡಿಶಾಪ ಹಾಕಿದ್ದು, ಕಂಡು ಬಂದಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ ಆಶ್ರಯದಲ್ಲಿ ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಹಾಗೂ ಭಾನುವಾರ ನಡೆದ 2022-23ನೇ ಸಾಲಿನ ಬೀದರ್ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ವಿಜೇತರು ಪ್ರಮಾಣಪತ್ರ ಪಡೆಯಲು ಆಯೋಜಕರ ಹಿಂದೆ ಅಲೆದಾಡಬೇಕಾಯಿತು.

ವೇದಿಕೆಯಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಯಾವುದೇ ಶಿಸ್ತು ಇರಲಿಲ್ಲ. ಬಾಲಕ, ಬಾಲಕಿಯರು ಪ್ರಮಾಣಪತ್ರ ಪಡೆಯಲು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಅಂಪೈರ್‌ಗಳನ್ನು ಹುಡುಕಬೇಕಾಯಿತು. ಕೊನೆಯ ಗಳಿಗೆಯಲ್ಲಿ ಪ್ರಮಾಣಪತ್ರ ಕೊಟ್ಟರೂ ಕ್ರೀಡಾಪಟುಗಳಲ್ಲಿ ಉತ್ಸಾಹ ಉಳಿದಿರಲಿಲ್ಲ.

‘ಅಥ್ಲೆಟಿಕ್ಸ್‌ನಲ್ಲಿ ವಿಜೇತ ಬಸವಕಲ್ಯಾಣ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕಿನ ಬಾಲಕ, ಬಾಲಕಿಯರು ಮಧ್ಯಾಹ್ನದವರೆಗೆ ಆಯೋಜಕರ ಹಿಂದೆ ಬಿದ್ದು ಪ್ರಮಾಣಪತ್ರ ಪಡೆಯಬೇಕಾಯಿತು. ನಾನು ಬೆಳಿಗ್ಗೆಯೇ ಓಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದೇನೆ. ಪ್ರಮಾಣಪತ್ರ ಕೊಡಲು ಮಧ್ಯಾಹ್ನ 3.30ರ ವರೆಗೂ ಅಲೆದಾಡಿಸಿದರು’ ಎಂದು ಬಾಲಕಿಯೊಬ್ಬರು ಮಾಧ್ಯಮ ಪ್ರತಿನಿಧಿಗಳ ಎದುರು ಬೇಸರ ತೋಡಿಕೊಂಡರು.

ಆಯೋಜಕರು ಕ್ರೀಡಾಂಗಣದ ವೇದಿಕೆಯಲ್ಲಿ ಲ್ಯಾಟ್‌ಟಾಪ್‌ ಇಟ್ಟುಕೊಂಡು ಕುಳಿತು ಒಂದು ಕ್ರೀಡೆ ಮುಗಿದ ತಕ್ಷಣ ದಾಖಲಿಸಿಕೊಳ್ಳಬೇಕು. ಲಿಖಿತ ದಾಖಲೆಗಳನ್ನು ಫೈಲ್‌ ಮಾಡಬೇಕು. ಲ್ಯಾಟ್‌ಟಾಪ್‌ನಲ್ಲೂ ವಿಜೇತರ ಹೆಸರು ದಾಖಲಿಸಿಕೊಳ್ಳಬೇಕು. ಕ್ರೀಡೆ ನಡೆಸಿದ ಅಂಪೈರ್‌ಗಳು 24 ಗಂಟೆ ಕಳೆದರೂ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಲಿಲ್ಲ.

‘ಓಟ, ಎತ್ತರ ಜಿಗಿತ, ಉದ್ದ ಜಿಗಿತ ಅಥವಾ ಗುಂಪು ಆಟ ಯಾವುದೇ ಇರಲಿ ನಾವು ತಕ್ಷಣ ವರದಿ ಕೊಡುವುದಿಲ್ಲ. ಎಲ್ಲವನ್ನೂ ಸಂಜೆ ಸಂಬಂಧಪಟ್ಟವರಿಗೆ ಕೊಡುತ್ತೇವೆ. ನಿನ್ನೆ ನಡೆದ ಕ್ರೀಡೆಗಳು ಹಾಗೂ ಇಂದು ನಡೆದ ಕ್ರೀಡೆಗಳ ಪಟ್ಟಿ ತಯಾರಿಸಿ ಕೊನೆಗೆ ಕ್ರೀಡಾಪಟುಗಳಿಗೆ ಕೊಡುತ್ತೇವೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಸಮಜಾಯಿಸಿ ನೀಡಿದರು.

‘ವಾಸ್ತವದಲ್ಲಿ ಜಿಲ್ಲಾಡಳಿತ ಕಾರ್ಯವೈಖರಿಯೇ ಸರಿ ಇಲ್ಲ. ಜಿಲ್ಲಾ ಪಂಚಾಯಿತಿ ಸಿಇಒ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ ಉಪ ನಿರ್ದೇಶಕರು ಪೂರ್ವಭಾವಿ ಸಭೆ ಸೇರಿ ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಿಕೊಡಬೇಕು. ಆದರೆ, ಅವರೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ’ ಎಂದು ಪಾಲಕರಾದ ಮಹೇಶ ಗೋರನಾಳಕರ್ ಬೇಸರ ವ್ಯಕ್ತಪಡಿಸಿದರು.

‘ಸರಿಯಾಗಿ ಕನ್ನಡ ಬರೆಯಲು ಬಾರದ, ವಾಟ್ಸ್‌ಆ್ಯಪ್‌ ಬಳಕೆ ಹಾಗೂ ಲ್ಯಾಪ್‌ಟ್ಯಾಪ್‌ ಉಪಯೋಗಿಸುವುದು ಗೊತ್ತಿಲ್ಲದವರು ಎರಡೂ ಇಲಾಖೆಗಳಲ್ಲಿ ಇದ್ದಾರೆ. ಓಬಿರಾಯನ ಕಾಲದ ವ್ಯವಸ್ಥೆ ಮುಂದುವರಿದಿದೆ. ಈ ಇಲಾಖೆಗಳ ಮೇಲ್ವಿಚಾರಣೆ ನಡೆಸುವವರೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಇದುವೇ ಅವ್ಯವಸ್ಥೆಗೆ ಕಾರಣ’ ಎಂದು ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT