ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳು ಅಮಾವಾಸ್ಯೆ ಆಹಾರ ಸಂಸ್ಕೃತಿಯ ಪ್ರತೀಕ

ಪ್ರಾಚಾರ್ಯ ಬಸವರಾಜ ಬಲ್ಲೂರ ಅಭಿಮತ
Last Updated 12 ಜನವರಿ 2021, 14:16 IST
ಅಕ್ಷರ ಗಾತ್ರ

ಬೀದರ್‌: ‘ಎಳ್ಳು ಅಮಾವಾಸ್ಯೆ ನಾಡಿನ ಆಹಾರ ಸಂಸ್ಕೃತಿಯ ಪ್ರತೀಕ’ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ನಗರದ ಹೊರ ವಲಯದಲ್ಲಿರುವ ದೇವ ವನದಲ್ಲಿ ಮಂಗಳವಾರ ಆಯೋಜಿಸಿದ್ದ ಎಳ್ಳು ಅಮಾವಾಸ್ಯೆ ಸರಳ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಋತುಮಾನಗಳು ಬದಲಾಗುತ್ತಿದ್ದಂತೆಯೇ ಆಹಾರ ಸೇವನೆಯ ಪ್ರಕ್ರಿಯೆಯಲ್ಲೂ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗುತ್ತದೆ. ಜನಪದರು ಆಹಾರ ಸೇವನೆಯ ವಿಧಾನವನ್ನೇ ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದಾರೆ. ಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಹೇರಳ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ದೊರೆಯಲಿ ಎನ್ನುವುದೇ ಅದರ ಮೂಲ ಉದ್ದೇಶವಾಗಿದೆ’ ಎಂದರು.

‘ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಭಜ್ಜಿ, ಕಾಳು, ಎಣ್ಣೆಗಾಯಿ, ಎಳ್ಳು, ಶೇಂಗಾ ಹೋಳಿಗೆ ಮಾಡಿಕೊಂಡು ಕುಟುಂಬದ ಸದಸ್ಯರೆಲ್ಲ ಹೊಲಗಳಿಗೆ ಹೋಗಿ ಸಾಮೂಹಿಕ ಭೋಜನ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಟಿ.ಎ.ಮಚ್ಛೆ ಮಾತನಾಡಿ, ‘ಎಳ್ಳು ಅಮಾವಾಸ್ಯೆ ಹಬ್ಬ ರೈತರ ಹಬ್ಬ. ಒಕ್ಕಲುತನದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮುದಾಯದವರೂ ಎಳ್ಳು ಅಮಾವಾಸ್ಯೆಗೆ ಹೊಲಕ್ಕೆ ಹೋಗಿ ಸಾಮೂಹಿಕ ಊಟ ಸವಿದು ಆತ್ಮೀಯತೆ ಮೆರೆಯುತ್ತಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕಸ್ತೂರಿ ಪಟ‍‍ಪಳ್ಳಿ ಮಾತನಾಡಿ, ‘ಯಾಂತ್ರಿಕ ಬದುಕಿನಲ್ಲಿ ಸಿಲುಕಿಕೊಂಡಿರುವ ಕುಟುಂಬಗಳು ಹೊಲಗಳಿಗೆ ಹೋಗಿ ಹಬ್ಬ ಆಚರಣೆ ಮಾಡಲಾಗದಿದ್ದರೂ, ಸಮೀಪದ ಉದ್ಯಾನಗಳಿಗೆ ತೆರಳಿ ಕುಟುಂಬದ ಸದಸ್ಯರೊಂದಿಗೆ ಒಂದಿಷ್ಟು ಸಮಯ ಕಳೆಯಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳ ಜತೆಗೂಡಿ ಇಂತಹ ಹಬ್ಬಗಳ ಆಚರಿಸುವುದರಿಂದ ಅವರಿಗೂ ನಾಡಿನ ಸಂಸ್ಕೃತಿ-ಸಂಪ್ರದಾಯಗಳ ಮಹತ್ವ ತಿಳಿವಳಿಕೆ ನೀಡಿದಂತೆ ಆಗುತ್ತದೆ’ ಎಂದು ಹೇಳಿದರು,

ಶಿವಕುಮಾರ ಪಟಪಳ್ಳಿ, ರೂಪಾ ಎಂ, ಉಪಸ್ಥಿತರಿದ್ದರು. ಜಗನ್ನಾಥ ಕಮಲಾಪುರೆ ಸ್ವಾಗತಿಸಿದರು. ವಿದ್ಯಾವತಿ ಬಲ್ಲೂರ ನಿರೂಪಿಸಿದರು.

ಕೋವಿಡ್‌ ನಂತರ ಮೊದಲ ಬಾರಿಗೆ ಸಾಮೂಹಿಕವಾಗಿ ಸೇರಿದ ಕುಟುಂಬಗಳು
ಎಳ್ಳು ಅಮಾವಾಸ್ಯೆಯ ಪ್ರಯುಕ್ತ ಜಿಲ್ಲೆಯ ಗ್ರಾಮೀಣ ರೈತರು ಕುಟುಂಬದ ಸದಸ್ಯರೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಭೂದೇವಿಗೆ ವಿಶೇಷ ಪೂಜೆ ಸಲ್ಲಿಸಿದರೆ, ನಗರ ಪ್ರದೇಶದ ಜನ ಸಮೀಪದ ತೋಟ ಹಾಗೂ ಉದ್ಯಾನಗಳಿಗೆ ತೆರಳಿ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಭೋಜನ ಮಾಡಿದರು.

ರೈತರು ಹೊಲದಲ್ಲಿ ಜೋಳದ ಕಣಿಕೆಯಿಂದ ಕೊಂಪೆ ಸಿದ್ಧಪಡಿಸಿ ಅದರ ಮೇಲೆ ಹೊಸ ಬಟ್ಟೆಯನ್ನು ಹಾಕಿ ಒಳಗೆಪಾಂಡವರ ಪ್ರತಿಮೆಗಳ ರೂಪದಲ್ಲಿ ಐದು ಕಲ್ಲುಗಳನ್ನು ಇಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಬರುವ ದಿನಗಳಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಬೆಳೆಯುವಂತೆ ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸಿದರು.

ಹಳ್ಳಿಗಳಲ್ಲಿ ಮಹಿಳೆಯರು ಜನಪದ ಹಾಡುಗಳನ್ನು ಹಾಡಿ ಜನಮನ ರಂಜಿಸಿದರು. ಮಕ್ಕಳು ಮರಗಳಿಗೆ ಕಟ್ಟಿದ್ದ ಜೋಕಾಲಿಗಳಲ್ಲಿ ಕುಳಿತು ಉಯ್ಯಾಲೆ ಆಡಿ ಸಂಭ್ರಮಿಸಿದರು. ನಂತರ ಮನೆಯಿಂದ ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆ ಸೇವಿಸಿದರು.

ಅನೇಕ ಕುಟುಂಬಗಳ ಸದಸ್ಯರು ದಿನವಿಡೀ ಹೊಲದಲ್ಲೇ ಸಮಯ ಕಳೆದರು. ಹಿರಿಯರು ಮರದ ಕೆಳಗೆ ಚಾಪೆ ಹಾಸಿ ವಿಶ್ರಾಂತಿ ಪಡೆದರು. ಯುವಕರು ಅಲ್ಲಲ್ಲಿ ಬೆಳೆದಿದ್ದ ಹಸಿ ಕಡಲೆ ಗಿಡಗಳನ್ನು ಕಿತ್ತುಕೊಂಡು ಬಂದು ಗುಂಪಿನಲ್ಲಿ ಕುಳಿತು ಕಡಲೆ ಸವಿ ಸವಿದರು. ಕೆಲವರು ಚಕ್ಕಡಿಗಳಲ್ಲೇ ತೋಟಕ್ಕೆ ಬಂದು ಮತ್ತೆ ಸಂಜೆ ಮನೆಗೆ ಮರಳಿದರು.

ನಗರಪ್ರದೇಶದ ನಿವಾಸಿಗಳು ರೊಟ್ಟಿ ಅಂಗಡಿಗಳಲ್ಲಿ ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ ಚಟ್ನಿ ಖರೀದಿಸಿ, ಮನೆಯಲ್ಲಿ ಸಿದ್ಧಪಡಿಸಿದ್ದ ಮೊಸರು ಹಾಗೂ ಶೇಂಗಾ ಹೋಳಿಗೆಯನ್ನು ತಂದು ಉದ್ಯಾನದಲ್ಲಿ ಕುಳಿತು ಪರಿಸರ ಮಧ್ಯೆ ಒಂದಿಷ್ಟು ಸಮಯ ಕಳೆದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT