ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭು ಚವಾಣ್‌ಗೆ ನನ್ನ ತಂದೆ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ: ರಾಜಶೇಖರ ಪಾಟೀಲ

Last Updated 5 ಡಿಸೆಂಬರ್ 2021, 6:02 IST
ಅಕ್ಷರ ಗಾತ್ರ

ಬೀದರ್: ‘ನನ್ನ ತಂದೆ ಬಸವರಾಜ ಪಾಟೀಲ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗಿಲ್ಲ. ಅವರ ಕುರಿತು ಮಾತನಾಡಿದರೇ, ಸಚಿವರ ಬಂಡವಾಳ ಬಯಲು ಮಾಡುವೆ’ ಎಂದು ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರು ಎಚ್ಚರಿಕೆ ನೀಡಿದರು.

‘ಹುಮನಾಬಾದ್‍ನಲ್ಲಿ ನಡೆದ ಸಭೆಯಲ್ಲಿ ಚವಾಣ್ ಅವರು ನನ್ನ ತಂದೆಯ ಬಗ್ಗೆ ಮಾತನಾಡಿದ್ದಾರೆ. ಜೀವಂತ ಇಲ್ಲದವರ ಬಗ್ಗೆ ಪ್ರಸ್ತಾಪಿಸುವುದು ಸರಿಯಲ್ಲ. ನಾವು ನಾಲ್ವರು ಸಹೋದರರು ಇದ್ದೇವೆ. ನಮ್ಮ ಜತೆ ರಾಜಕೀಯ ಹೋರಾಟ ಮಾಡಲಿ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ತಂದೆ ಒಮ್ಮೆ ಶಾಸಕ, ಮೂರು ಬಾರಿ ವಿಧಾನ ಪರಿಷತ್ ಸದಸ್ಯ ಮತ್ತು ಎರಡು ಬಾರಿ ಸಚಿವರಾಗಿದ್ದು ತಮ್ಮದೇ ಆದ ಹೆಸರು ಗಳಿಸಿದ್ದರು. ಅವರು ರಾಜಕೀಯ ಜೀವನ ಆರಂಭಿಸಿದಾಗ ಚವಾಣ್ ಅವರು ಮುಂಬೈನಲ್ಲಿ ಕೆಲಸದ‌ಲ್ಲಿದ್ದರು. ಈಗ ಅನಾಯಾಸವಾಗಿ ಅಧಿಕಾರ ಸಿಕ್ಕಿದ್ದು, ಮೂರು ಸಲ ಶಾಸಕರಾದರೂ ಅನುಭವ ಸಾಲದು’ ಎಂದು ಅವರು ಹೇಳಿದರುರು.

‘ತಂದೆಯವರ ಬಗ್ಗೆ ಮಾತನಾಡು ವುದನ್ನು ಮುಂದುವರಿಸಿ ದರೇ, ಅವರು ಮುಂಬೈಯಲ್ಲಿ ಏನು ಮಾಡುತ್ತಿದ್ದರು? ಔರಾದ್‍ಗೆ ಬಂದದ್ದು ಹೇಗೆ? ರಾಜಕೀಯ ಜೀವನ ಆರಂಭಿಸಿದ್ದ ಬಗ್ಗೆ ಬಹಿರಂಗಪಡಿಸುವೆ’ ಎಂದರು.

‘ಬ್ರಿಮ್ಸ್ ನಿರ್ದೇಶಕ ಸ್ಥಾನಕ್ಕಾಗಿ ಅವರಿಗೆ ನೈವೇದ್ಯ ಕೊಡಲಾಗಿದೆ. ಪಿಡಬ್ಲ್ಯೂಡಿ ಇಇ ಕೂಡ ಕೊಡುಗೆ ನೀಡಿದ್ದಾರೆ. ಚಿಟಗುಪ್ಪದಲ್ಲಿ 2 ತಿಂಗಳಲ್ಲಿ 3 ಇಒಗಳ ಬದಲಾವಣೆ ಆಗಿದ್ದಾರೆ. ಅವರ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ’ ಎಂದು ಅವರು ಆರೋಪಿಸಿದರು.

‘ಚುನಾವಣೆಯಲ್ಲಿ ಚವಾಣ್, ಖೂಬಾಗೆ ಹೆದರುವುದಿಲ್ಲ. ನಾವೂ ಎಲ್ಲದಕ್ಕೂ ಸಿದ್ಧರಿದ್ದೇವೆ. ಈಶ್ವರ ಖಂಡ್ರೆ, ನಾವು ಸಹೋದರರಂತೆ ಇದ್ದೇವೆ’ ಎಂದುರಾಜಶೇಖರ ಪಾಟೀಲ ಹೇಳಿದರು.

‘₹5 ಲಕ್ಷ ಇದ್ದರೇ ರಾಜಕೀಯ ಸನ್ಯಾಸ’

‘ನಾನು ಧರಿಸುವ ಕನ್ನಡಕದ ಬೆಲೆ ₹5 ಲಕ್ಷ ಇರುವುದು ಸಾಬೀತಾದರೆ, ನಾನು ರಾಜಕೀಯ ಸನ್ಯಾಸ ಪಡೆಯುವೆ.ಇಲ್ಲದಿದ್ದರೆ, ಕೇಂದ್ರ ಸಚಿವ ಭಗವಂತ ಖೂಬಾ ಮನೆಯಲ್ಲಿ ಕೂರಲಿ’ ಎಂದು ರಾಜಶೇಖರ ಪಾಟೀಲ ಸವಾಲು ಹಾಕಿದರು.

‘ಕನ್ನಡಕವನ್ನು ನನ್ನ ಮಗಳು ಉಡುಗೊರೆಯಾಗಿ ನೀಡಿದ್ದಾಳೆ. ಇದರ ಬೆಲೆ ₹50 ಸಾವಿರದಿಂದ ₹57 ಸಾವಿರ ಇದೆ. ಅದನ್ನು ಖರೀದಿಸಿದ್ದು ಯುಬಿ ಸಿಟಿಯಲ್ಲಿ’ ಎಂದು ಸ್ಪಷ್ಟನೆ ನೀಡಿದರು.

‘ಜಿಲ್ಲೆಗೆ ಮೊದಲ ಬಾರಿ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ. ಖೂಬಾ ಅವರು ಒಳ್ಳೆಯ ಕೆಲಸ ಮಾಡಲಿ’ ಎಂದರು.

ಬಸವರಾಜ ಪಾಟೀಲ ತಂದೆ ಸಮಾನ; ಪ್ರಭು ಚವಾಣ್

ಬೀದರ್: ‘ಮಾಜಿ ಸಚಿವ ದಿ. ಬಸವ ರಾಜ ಪಾಟೀಲ ಹುಮನಾಬಾದ್ ಅವರು ನನಗೆ ತಂದೆ ಸಮಾನರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುವ ರೀತಿ ನಾನು ಎಲ್ಲಿಯೂ ಮಾತನಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸ್ಪಷ್ಟನೆ ನೀಡಿದ್ದಾರೆ.

ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ವಿರುದ್ಧ ಮಾಡಿದ್ದ ಆರೋಪಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಬಸವರಾಜ ಪಾಟೀಲ ಅವರು ಶಾಸಕರು, ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರು ಬಿಜೆಪಿಗೆ ಬಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದ ಮೊದಲಿಗರು. ಆ ವೇಳೆ ನಾನೂ ಅವರ ಗೆಲುವಿಗೆ ಹಗಲಿರುಳು ಶ್ರಮಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ನನ್ನ ಕ್ಷೇತ್ರದ ಅಭಿವೃದ್ಧಿಗೆ ಅವರು ನನಗೆ ಅನೇಕ ಬಾರಿ ಮಾರ್ಗದರ್ಶನ ಮಾಡಿದ್ದರು. ನಾನು ಅವರ ವಿರುದ್ಧ ಮಾತನಾಡುವ ಸಂದರ್ಭ ಬರುವುದಿಲ್ಲ. ಯಾರೋ ಅವರ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

‘ಜನರ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿ ಮತ್ತು ಸದ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ್ದೇನೆ. ಇದು ಇಡೀ ರಾಜ್ಯಕ್ಕೆ ತಿಳಿದಿದೆ. ಅಭಿವೃದ್ಧಿಯ ವಿಷಯಗಳನ್ನು ಇರಿಸಿಕೊಂಡು ಪಕ್ಷದ ತತ್ವ ಮತ್ತು ಸಿದ್ಧಾಂತಗಳಡಿ ಚುನಾವಣೆ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ರಾಜಕೀಯದಲ್ಲಿ ವೈಯಕ್ತಿಕ ವಿಷಯಗಳನ್ನು ಎಳೆದು ತರುವುದು ಯಾರಿಗೂ ಶೋಭೆ ತರುವುದಿಲ್ಲ. ರಾಜಕೀಯ ಯಶಸ್ಸು ಹೇಗೆ ಸಾಧಿಸಬೇಕು, ಚುನಾವಣೆಯಲ್ಲಿ ಗೆಲ್ಲುವ ತಂತ್ರಗಳು ಚೆನ್ನಾಗಿ ತಿಳಿದಿವೆ. ರಾಜಶೇಖರ ಪಾಟೀಲ ಅವರು ನನ್ನ ವಿರುದ್ಧ ಮಾಡಿದ ಭ್ರಷ್ಟಾಚಾರದ ಆರೋಪಗಳಲ್ಲಿ ಹುರುಳಿಲ್ಲ. ಅವು ಸತ್ಯಕ್ಕೆ ದೂರವಾಗಿವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT