ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಕೈ ತೋಟ, ವಿವಿಧ ಹೂವಿನ ಸಸಿಗಳು, ಗಮನ ಸೆಳೆಯುವ ಗಡಿನಾಡ ಶಾಲೆ

Last Updated 20 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ತಿಕೋಟಾ: ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡ ಮತ್ತು ಮರಾಠಿ ಹಾಗೂ ಲಂಬಾಣಿ ಜನಾಂಗದ ಪ್ರದೇಶದಲ್ಲಿ ಸರ್ಕಾರಿ ಶಾಲೆಯೊಂದು ಗುಣಾತ್ಮಕ ಶಿಕ್ಷಣದಿಂದ ಗಮನ ಸೆಳೆಯುತ್ತಿದೆ.

ಇದು, ತಾಲ್ಲೂಕಿನ ಜಾಧವನಗರ ಟಕ್ಕಳಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ. 1996ರಲ್ಲಿ ಚಪ್ಪರದಲ್ಲಿ 18 ವಿಧ್ಯಾರ್ಥಿಗಳಿಂದ ಈ ಶಾಲೆ ಪ್ರಾರಂಭವಾಯಿತು. ಈಗ 140 ವಿದ್ಯಾರ್ಥಿಗಳು, 5 ಜನ ಸಿಬ್ಬಂದಿ ಇದ್ದಾರೆ. ಈ ಶಾಲೆಗೆ ಸ್ಥಳದ ಅಭಾವವನ್ನು ಅರಿತ ಊರಿನ ಮಧುಕರ ಜಾಧವ ಅವರು ಅಣ್ಣಪ್ಪ ಜಾಧವ ಹಾಗೂ ದಶರಥ ಜಾಧವ ಸ್ಮರಣಾರ್ಥ ಒಂದು ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ.

ಶಾಲೆಗೆ ದೇಣಿಗೆ ರೂಪವಾಗಿ ಹಳೆಯ ವಿದ್ಯಾರ್ಥಿಗಳು ಮಕ್ಕಳಿಗೆ ಊಟದ ತಟ್ಟೆಗಳನ್ನು ನೀಡಿದ್ದಾರೆ. ಗ್ರಾಮಸ್ಥರಾದ ಅಶೋಕ ದುಧಾಳೆ ₹10 ಸಾವಿರ ವೆಚ್ಚದ ಡ್ರಮ್ ಸೆಟ್, ಜಾಲೀಂದ್ರ ಉತ್ತಮ ಅವರು ₹20,500 ವೆಚ್ಚದ ಮೈಕ್‌ ಸೆಟ್‌, ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಪವಾರ ₹80 ಸಾವಿರ ವೆಚ್ಚದಲ್ಲಿ ಶಾಲೆಗೆ ಪೇಂಟ್ ಮಾಡಿಸಿದ್ದಾರೆ.

ಶಾಲೆಯು ಡಿಜಿಟಲ್‌ ವರ್ಗಕೋಣೆ ಹೊಂದಿದ್ದು, ಶಾಸಕ ಎಂ.ಬಿ.ಪಾಟೀಲ ಕಂಪ್ಯೂಟರ್ ನೀಡಿದ್ದಾರೆ. ಇನ್ಫೊಸಿಸ್‌ ವತಿಯಿಂದ 4 ಕಂಪ್ಯೂಟರ್ ದೇಣಿಗೆಯಾಗಿ ನೀಡಿದೆ. ಎಲ್ಲಾ ತರಗತಿಗಳಲ್ಲಿ ಫ್ಯಾನ್‌, ಫಿಲ್ಟರ್‌ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿಭಾ ಕಾರಂಜಿ ಹಾಗೂ ಆಟೋಟಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದವರೆಗೆ ಭಾಗವಹಿಸಿದ್ದಾರೆ. ಪವನ ಪವಾರ, ಗೋಪಾಲ ಪವಾರ, ಮಿಥುನ್‌ ಪವಾರ, ಮಲ್ಲಾರಿ ಘಾಟಕೆ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿ, ಈಗ ಪ್ರೌಢ ಶಾಲೆಯ ಆನಂದ ಝಂಡೆ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಶಾಲೆಯಲ್ಲಿ ಪ್ರತಿನಿತ್ಯ ಯೋಗ, ವ್ಯಾಯಾಮ, ಪ್ರಾರ್ಥನೆ, ಚಿಂತನ, ಭಗವದ್ಗೀತೆ ಪಠಣ, ವಚನಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ರಂಗೋಲಿ ಮೂಲಕ ವಿಜ್ಞಾನ ಮಾದರಿಗಳ ತಯಾರಿಕೆ, ಶಾಲಾ ಸಂತೆಗಳನ್ನು ಏರ್ಪಡಿಸಿ ಮಕ್ಕಳಿಗೆ ನೈಜ ವ್ಯವಹಾರ ಜ್ಞಾನ ಕಲ್ಪಿಸಿದ್ದಾರೆ.

ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಕೊಡಿಸಲು ಎ.ಎಂ.ಇನಾಮದಾರ, ಡಿ.ಎನ್.ಘೋಣಸಗಿ, ಎಸ್.ಜಿ.ಬಗಲಿ, ಎಸ್.ಆರ್.ಅನಂತಪುರ, ಎಸ್.ಜಿ.ಹಂಜಿ ಸಿಬ್ಬಂದಿ ವರ್ಗವು ಶ್ರಮಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT