ಮಂಗಳವಾರ, ಡಿಸೆಂಬರ್ 6, 2022
21 °C
ಕೆಲವೆಡೆ ಕಾಮಗಾರಿಗೆ ಚಾಲನೆ, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣ ನಿರೀಕ್ಷೆ

ಚಾಮರಾಜನಗರ ಜಿಲ್ಲೆಯ 115 ಶಾಲೆಗಳಲ್ಲಿ ‘ವಿವೇಕ’ ಕೊಠಡಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ‘ವಿವೇಕ’ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 115 ಸರ್ಕಾರಿ ಶಾಲೆಗಳಲ್ಲಿ ತಲಾ ಒಂದೊಂದು ಕೊಠಡಿ ನಿರ್ಮಾಣವಾಗಲಿದೆ. 

ಈ ಪೈಕಿ 105 ಪ್ರಾಥಮಿಕ ಶಾಲೆಗಳಾದರೆ, 10 ಪ್ರೌಢ ಶಾಲೆಗಳು. ಈಗಾಗಲೇ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು, ಕೊಠಡಿಗಳ ನಿರ್ಮಾಣಕ್ಕೆ ಸಾಂಕೇತಿಕವಾಗಿ ಚಾಲನೆಯನ್ನೂ ನೀಡಿದ್ದಾರೆ. 

105 ಕೊಠಡಿಗಳ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು, ಇನ್ನು 10 ಕೊಠಡಿಗಳ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಸ್ತಾವ ಕಳುಹಿಸಿದ್ದು, ಶೀಘ್ರ ಅನುಮತಿ ದೊರೆಯಲಿದೆ. 

ಯೋಜನೆಯ ಅಡಿಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 20, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ 35 ಹಾಗೂ ಹನೂರು ಕ್ಷೇತ್ರದಲ್ಲಿ 20 ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣವಾಗಲಿದೆ. ಐದು ಶಾಲೆಗಳನ್ನು ಆಯ್ಕೆ ಮಾಡುವ ಅಧಿಕಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಇದೆ.  

ಪ್ರಾಥಮಿಕ ಶಾಲೆಯ ಕೊಠಡಿಯ ನಿರ್ಮಾಣಕ್ಕೆ ₹13.90 ಲಕ್ಷ ನಿಗದಿ ಪಡಿಸಲಾಗಿದೆ. ಪ್ರೌಢ ಶಾಲಾ ಕೊಠಡಿ ನಿರ್ಮಾಣಕ್ಕೆ ₹16.40 ಲಕ್ಷ ನಿಗದಿಯಾಗಿದೆ.  

ಹೆಚ್ಚುವರಿ ಕೊಠಡಿಗಳು ಅಗತ್ಯವಿರುವ ಶಾಲೆಗಳನ್ನು ಗುರುತಿಸಿ, ಅಲ್ಲಿ ವಿವೇಕ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಕೊಠಡಿಗಳ ಅಳತೆಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದ್ದು, ಅದಕ್ಕೆ ತಕ್ಕಂತೆ ಕಾಂಕ್ರೀಟ್‌ ಚಾವಣಿಯ ಕಟ್ಟಡಗಳು ನಿರ್ಮಾಣವಾಗಲಿದೆ. ಆರು ತಿಂಗಳೊಳಗೆ ಕೆಲಸ ಪೂರ್ಣವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಾದಯಂತ ಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 7,601 ವಿವೇಕ ಕೊಠಡಿಗಳ ನಿರ್ಮಾಣಕ್ಕೆ ಇದೇ 15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು. 

ಬಣ್ಣದ ವಿವಾದ: ವಿವೇಕ ಕೊಠಡಿಗಳಿಗೆ ಬಣ್ಣ ಬಳಿಯುವ ವಿಚಾರವಾಗಿ ವಿವಾದ ಉಂಟಾಗಿದೆ. ಕೇಸರಿ ಬಣ್ಣ ಬಳಿಯಲು ಸರ್ಕಾರ ಸೂಚನೆ ನೀಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಆದರೆ, ಇಲಾಖೆಯಿಂದ ಬಣ್ಣದ ಬಗ್ಗೆ ಸೂಚನೆ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ದುರಸ್ತಿಗೆ ₹1.20 ಕೋಟಿ: ಈ ಮಧ್ಯೆ ತೀವ್ರವಾಗಿ ಶಿಥಿಲಗೊಂಡಿರುವ ಶಾಲೆಗಳ ದುರಸ್ತಿಗಾಗಿ ಇಲಾಖೆ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲೆಗೆ ₹1.20 ಕೋಟಿ ಬಂದಿದೆ. 

ಜಿಲ್ಲೆಯಾದ್ಯಂತ ದುರಸ್ತಿಗಾಗಿ 66 ಶಾಲೆಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಪಿಯು ಕಾಲೇಜಿಗೆ ಇಲ್ಲ ಕೊಠಡಿ

ವಿವೇಕ ಯೋಜನೆ ಅಡಿಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲೂ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಜಿಲ್ಲೆಗೆ ಒಂದು ಕೊಠಡಿಯೂ ಮಂಜೂರಾಗಿಲ್ಲ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪದವಿಪೂರ್ವ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ‘ಎಷ್ಟು ಕಾಲೇಜುಗಳಿಗೆ ಕೊಠಡಿ ಅಗತ್ಯವಿದೆ ಎಂದು ಪ್ರಸ್ತಾವ ಕಳುಹಿಸಲು ಸೂಚನೆ ಬಂದಿತ್ತು. ಅದರಂತೆ 12 ಕಾಲೇಜುಗಳ ಪಟ್ಟಿ ಕಳುಹಿಸಿದ್ದೆವು. ರಾಜ್ಯದಾದ್ಯಂತ 142 ಕಾಲೇಜುಗಳಿಗೆ ಕೊಠಡಿ ಮಂಜೂರಾಗಿದೆ. ನಮಗೆ ಸಿಕ್ಕಿಲ್ಲ’ ಎಂದರು.

   ವಿವೇಕ ಕಟ್ಟಡಗಳ ನಿರ್ಮಾಣ ಮಾಡುವಂತೆ ನಿರ್ದೇಶನ ಬಂದಿದೆ. ಕೊಠಡಿಗೆ ಯಾವ ಬಣ್ಣ ಬಳಿಯಬೇಕು ಎಂಬುದರ ಬಗ್ಗೆ ಸೂಚನೆ ಬಂದಿಲ್ಲ
–ಎಸ್‌.ಎನ್‌.ಮಂಜುನಾಥ್‌, ಶಿಕ್ಷಣ ಇಲಾಖೆ ಉಪನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು