ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆಗೆ 116 ರೈತರಿಂದ ನೋಂದಣಿ

ಇನ್ನು ಎರಡು ಮೂರು ದಿನಗಳಲ್ಲಿ ಖರೀದಿ ಆರಂಭ– ಅಧಿಕಾರಿಗಳ ಹೇಳಿಕೆ
Last Updated 17 ಜನವರಿ 2020, 20:00 IST
ಅಕ್ಷರ ಗಾತ್ರ

ಚಾಮರಾಜನಗರ: 2019–20ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ ಖರೀದಿಸಲು ಇದುವರೆಗೆ ಜಿಲ್ಲೆಯಲ್ಲಿ 116 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.

ರಾಗಿ ಖರೀದಿಸುವ ಸಂಬಂಧ ಒಬ್ಬರೂ ನೋಂದಣಿ ಮಾಡಿಕೊಂಡಿಲ್ಲ. ರಾಗಿ ಬೆಳೆದಿರುವ 80 ರೈತರು ಮಾರಾಟಕ್ಕೆ ಮುಂದೆ ಬಂದಿದ್ದು, ತಾಂತ್ರಿಕ ಕಾರಣಗಳಿಂದಾಗಿ ನೋಂದಣಿಯಾಗಿಲ್ಲ.

ಭತ್ತ ಹಾಗೂ ರಾಗಿಯನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸುವುದಕ್ಕಾಗಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಆರು ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಡಿಸೆಂಬರ್‌ 30ರಿಂದ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.

ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ವ್ಯವಸ್ಥೆ (ಫ್ರುಟ್ಸ್‌–ಫಾರ್ಮರ್ ರಿಜಿಸ್ಟ್ರೇಷನ್ ಅಂಡ್‌ ಯುನಿಫೈಡ್ ಬೆನಿಫಿಷಿಯರಿ ಇನ್ಫಾರ್ಮೇಷನ್‌ ಸಿಸ್ಟಮ್‌) ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಯ‌ಳಂದೂರಿನ ಕೇಂದ್ರದಲ್ಲಿ 95 ಮಂದಿ, ಕೊಳ್ಳೇಗಾಲದಲ್ಲಿ 20 ಮಂದಿ ಹಾಗೂ ಸಂತೇಮರಹಳ್ಳಿಯಲ್ಲಿ ಒಬ್ಬರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು 2019–20ನೇ ಸಾಲಿಗೆಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ₹1,815, ಗ್ರೇಡ್ ‘ಎ’ ಭತ್ತಕ್ಕೆ ₹ 1,835 ಹಾಗೂ ಪ್ರತಿ ಕ್ವಿಂಟಲ್ ರಾಗಿಗೆ ₹ 3,150ರಂತೆ ಬೆಂಬಲ ಬೆಲೆ ನಿಗದಿ ಪಡಿಸಿತ್ತು. ಇದರ ಜೊತೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ವತಿಯಿಂದ ಪ್ರತಿ ಕ್ವಿಂಟಲ್‌ ಭತ್ತಕ್ಕೆ ₹200 ಹೆಚ್ಚುವರಿಯಾಗಿ ನೀಡುವುದಾಗಿ ಕಳೆದ ವಾರ ಘೋಷಿಸಿದ್ದರು.

ಕನಿಷ್ಠ 16 ಕ್ವಿಂಟಲ್‌: ನೋಂದಣಿ ಮಾಡಿದ ರೈತರಿಂದ ನಿಗದಿ ಅಕ್ಕಿ ಗಿರಣಿಗಳು ಭತ್ತ ಖರೀದಿಸಿ ತಮ್ಮಲ್ಲಿ ಸಂಗ್ರಹಿಸಿಟ್ಟುಕೊಳ್ಳಲಿವೆ.‌ಪ್ರತಿ ಎಕರೆಗೆ 16 ಕ್ವಿಂಟಲ್‌ನಂತೆ ಒಟ್ಟು 40 ಕ್ವಿಂಟಲ್‌ವರೆಗೆ ಭತ್ತ ಖರೀದಿಸಲು ಅವಕಾಶ ಇದೆ. ರಾಗಿ ವಿಚಾರದಲ್ಲಿ ಪ್ರತಿ ಎಕರೆಗೆ 15 ಕ್ವಿಂಟಲ್‌ಗಳಂತೆ ಗರಿಷ್ಠ 75 ಕ್ವಿಂಟಲ್‌ವರೆಗೆ ಖರೀದಿಸಲು ಸರ್ಕಾರ ಅವಕಾಶ ನೀಡಿದೆ.

ಖರೀದಿ ವಿಳಂಬಕ್ಕೆ ರೈತರ ಆಕ್ರೋಶ

ಖರೀದಿ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತ ಮುಖಂಡರು, ಕನಿಷ್ಠ ಬೆಂಬಲ ಬೆಲೆ ಯೋಜನೆಯಿಂದ ರೈತರಿಗೆ ಏನೂ ಅನುಕೂಲವಾಗಿಲ್ಲ ಎಂದು ದೂರಿದ್ದಾರೆ.

‘ಶೇ 80ರಷ್ಟು ರೈತರು ಈಗಾಗಲೇ ಭತ್ತವನ್ನು ಕಡಿಮೆ ಬೆಲೆ ಮಾರಾಟ ಮಾಡಿದ್ದಾರೆ. ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳು ವಷ್ಟು ಜಾಗ, ಚೀಲಗಳು ಯಾವ ರೈತರ ಬಳಿಯೂ ಇಲ್ಲ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಭತ್ತಕ್ಕೆ ₹1,400–₹1,450 ಬೆಲೆ ಇದೆ. ಈ ಮೊತ್ತಕ್ಕೆ ಎಲ್ಲರೂ ಮಾರಿದ್ದಾರೆ. ಇನ್ನು ಶೇ 20ರಷ್ಟು ರೈತರ ಬಳಿ ಮಾತ್ರ ಭತ್ತವಿದೆ. ಜಿಲ್ಲಾಡಳಿತ ಇನ್ನೂ ಖರೀದಿ ಪ್ರಕ್ರಿಯೆ ಆರಂಭಿಸುವ ಲಕ್ಷಣ ಕಾಣುತ್ತಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಬಲ ಬೆಲೆ ಅಡಿಯಲ್ಲಿ ರಾಗಿ ಮಾರಾಟ ಮಾಡಲು ರೈತರು ಮುಂದಾದರೂ, ಒಬ್ಬರ ಹೆಸರೂ ನೋಂದಣಿಯಾಗಿಲ್ಲ. ಫ್ರುಟ್ಸ್‌ ತಂತ್ರಾಂಶದಲ್ಲಿ ರಾಗಿ ಬೆಳೆಯ ಉಲ್ಲೇಖವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾದರೆ, ರೈತರಿಗೆ ಯೋಜನೆಯ ಲಾಭ ಎಲ್ಲಿಂದ ಸಿಗುತ್ತದೆ. ದಲ್ಲಾಳಿಗಳಿಗೆ ಲಾಭವಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ಕಿ ಗಿರಣಿಗಳೊಂದಿಗೆ ನಡೆಯದ ಒಪ್ಪಂದ

ಅಕ್ಕಿ ಗಿರಣಿಗಳು ರೈತರಿಂದ ನೇರವಾಗಿ ಭತ್ತ ಖರೀದಿಸಿ ಸಂಗ್ರಹಿಸಬೇಕು. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಯಾವ ಗಿರಣಿಗಳೊಂದಿಗೂ ಒಪ್ಪಂದ ನಡೆದಿಲ್ಲ.

‘ಚಾಮರಾಜನಗರದ ಒಂದು ಹಾಗೂ ಕೊಳ್ಳೇಗಾಲದ ಎರಡು ಗಿರಣಿಗಳು ಭತ್ತ ಖರೀದಿಸಲು ಆಸಕ್ತಿ ತೋರಿವೆ. ಅವುಗಳೊಂದಿಗೆ ಶೀಘ್ರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಆರ್‌.ರಾಚಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಡಿ.30ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಭತ್ತ ಖರೀದಿ ಆರಂಭವಾಗಲಿದೆ. ಮಾರ್ಚ್‌ 31ರೆವಗೂ ಖರೀದಿಗೆ ಅವಕಾಶವಿದೆ ಎನ್ನುತ್ತಾರೆಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಆರ್. ರಾಚಪ್ಪ.

ಕ್ಚಿಂಟಲ್‌ ಸಾಮಾನ್ಯ ಭತ್ತಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ₹1,1815

ಕ್ವಿಂಟಲ್‌ ಗ್ರೇಡ್‌–ಎ ಭತ್ತಕ್ಕೆನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ₹1,835

ಕ್ವಿಂಟಲ್‌ ರಾಗಿಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ಬೆಂಬಲ ಬೆಲೆ₹3,150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT