ಭಾನುವಾರ, ಅಕ್ಟೋಬರ್ 2, 2022
18 °C
1997ರ ಆಗಸ್ಟ್‌ 15ರಂದು ಮೈಸೂರಿನಿಂದ ಬೇರ್ಪಟ್ಟ ಚಾಮರಾಜನಗರ

ಚಾಮರಾಜನಗರ ಜಿಲ್ಲೆಗೆ 25 ವರ್ಷ: ಮೌಢ್ಯವೇ ಅಭಿವೃದ್ಧಿಗೆ ಅಡ್ಡಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 1997, ಆಗಸ್ಟ್‌ 15. ಗಡಿ ಜಿಲ್ಲೆ ಚಾಮರಾಜನಗರದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಕರ್ನಾಟಕದ ದಕ್ಷಿಣದ ತುದಿಯಲ್ಲಿ ನಾಲ್ಕು ತಾಲ್ಲೂಕುಗಳನ್ನೊಳಗೊಂಡಂತೆ ಅವಿಭಜಿತ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಅಧಿಕೃತವಾಗಿ ಪ್ರತ್ಯೇಕ ಜಿಲ್ಲೆಯಾಯಿತು.

ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ 1997ರ ಯುಗಾದಿ ಹಬ್ಬದಂದು ಸಂಪುಟ ಸಭೆ ಬಳಿಕ ಚಾಮರಾಜನಗರ ಸೇರಿದಂತೆ ಏಳು ಜಿಲ್ಲೆ ರಚಿಸುವ ಘೋಷಣೆ ಮಾಡಿದ್ದರು. ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನದಂದು ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆ ಉದ್ಘಾಟಿಸಿದರು. ಅದೇ ದಿನ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಭಾಗವಹಿಸಿದ್ದರು. ಶಾಸಕರಾಗಿದ್ದ ವಾಟಾಳ್‌ ನಾಗ‌ರಾಜ್‌ ಪ್ರತ್ಯೇಕ ಕಾರ್ಯಕ್ರಮ ಮಾಡಿದ್ದರು.

ಮೈಸೂರು ಜಿಲ್ಲೆಗೆ ಸೇರಿದ್ದ ಗಡಿಭಾಗ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಕೂಗು 1980ರ ದಶಕದ ಮಧ್ಯಭಾಗದಲ್ಲೇ ಆರಂಭವಾಗಿತ್ತು. ಇದಕ್ಕಾಗಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ರಚನೆಯಾಗಿತ್ತು. ಮಹದೇವನಾಯಕ್‌, ರಾಜಶೇಖರಾಚಾರ್ಯ, ಮಾಜಿ ಶಾಸಕರಾದ ಎಸ್‌.ಪುಟ್ಟಸ್ವಾಮಿ ಸೇರಿದಂತೆ ಹಲವು ನಾಯಕರು ಇದರಲ್ಲಿದ್ದರು. ಪ್ರತ್ಯೇಕ ಜಿಲ್ಲೆಯಾಗಲು ಶ್ರಮಿಸಿದವರಲ್ಲಿ ಮಾಜಿ ಶಾಸಕರಾಗಿದ್ದ ಬೆಂಕಿ ಮಹದೇವ್‌, ಶಾಸಕರಾಗಿದ್ದ ವಾಟಾಳ್‌ ನಾಗರಾಜ್‌, ಸಚಿವರಾಗಿದ್ದ ಬಿ.ರಾಚಯ್ಯ, ಸ್ಥಳೀಯ ಮುಖಂಡರು, ಹೋರಾಟಗಾರರು ಸೇರಿ ಹಲವರು ಸೇರಿದ್ದಾರೆ.   

ಮೂಢನಂಬಿಕೆಯೇ ಶಾಪ: ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷಗಳಾದರೂ, ಅದೇ ಸಮಯದಲ್ಲಿ ರಚನೆಗೊಂಡ ಜಿಲ್ಲೆಗಳ ಮಟ್ಟಿಗೆ ಚಾಮರಾಜನಗರ ಅಭಿವೃದ್ಧಿಯಾಗಿಲ್ಲ. ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಜೋತು ಬಿದ್ದಿದೆ. ಸದ್ಯಕ್ಕಂತೂ ಈ ಪಟ್ಟಿ ಕಳಚುವ ಸಾಧ್ಯತೆ ಕಾಣುತ್ತಿಲ್ಲ. 

ಅಭಿವೃದ್ಧಿ ಪಥದಲ್ಲಿ ಸಾಗಲು ಯಾವುದೇ ಜಿಲ್ಲೆಗೆ 25 ವರ್ಷಗಳು ಬೇಡ. ಆದರೆ, ಅಧಿಕಾರದಲ್ಲಿರುವವರ ‘ಮೌಢ್ಯ’ ಜಿಲ್ಲೆಯ ಪ್ರಗತಿಗೆ ಅಡ್ಡಿಯಾಗಿದೆ ಎಂಬುದು ಜಿಲ್ಲೆಯ ಪ್ರಜ್ಞಾವಂತರ, ಪ್ರಗತಿಪರರ ಅಭಿಪ್ರಾಯ.

ಚಾಮರಾಜನಗರಕ್ಕೆ ಭೇಟಿ ನೀಡಿದರೆ, ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮೌಢ್ಯಕ್ಕೆ ಬಲಿಯಾಗಿರುವ ರಾಜಕಾರಣಿಗಳು, ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರು ಜಿಲ್ಲಾ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವುದು ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂಬುದು ಅವರ ವಾದ.

1992ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ಕಾವೇರಿ ನೀರು ಸರಬರಾಜು ಕಾರ್ಯಕ್ರಮದ ಉದ್ಘಾಟನೆಗೆ ಬಂದ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಧಿಕಾರ ಕಳೆದುಕೊಂಡರು. ಈ ಒಂದು ಘಟನೆ ಈಗಲೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವವರ ಎದೆ ನಡುಗಿಸಿದಂತೆ ಕಾಣುತ್ತದೆ. 

ಹೊಸ ಜಿಲ್ಲೆ ಉದ್ಘಾಟನೆಗಾಗಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಜಿಲ್ಲಾ ಕೇಂದ್ರ ಚಾಮರಾಜಕ್ಕೆ ಬರಲಿಲ್ಲ! ಮಹದೇಶ್ವರ ಬೆಟ್ಟಕ್ಕೆ ಬಂದು ಉದ್ಘಾಟನೆ ಮಾಡಿದರು. ಆ ಬಳಿಕ ಎಸ್‌.ಎಂ.ಕೃಷ್ಣ ಅವರು ಮಹದೇಶ್ವರ ಬೆಟ್ಟಕ್ಕೆ ಆಗಾಗ ಬರುತ್ತಿದ್ದರೂ, ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಬಂದಿರಲಿಲ್ಲ. ನಂತರದ ಮುಖ್ಯಮಂತ್ರಿ ಧರ್ಮಸಿಂಗ್‌ ಅವರೂ ಬರಲಿಲ್ಲ.

1992ರಲ್ಲಿ ವೀರೇಂದ್ರ ‍ಪಾಟೀಲರು ಬಂದು ಹೋದ ನಂತರ 16 ವರ್ಷ ಯಾವೊಬ್ಬ ಮುಖ್ಯಮಂತ್ರಿಯೂ ನಗರಕ್ಕೆ ಬಂದಿರಲಿಲ್ಲ. 2007ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಂದು ಈ ಮೌಢ್ಯವನ್ನು ಮುರಿದರು. 2007ರ ಮೇ 28ರಂದು ನಗರಕ್ಕೆ ಭೇಟಿ ನೀಡಿದ್ದರು. ಆರು ತಿಂಗಳ ಅವಧಿಯಲ್ಲಿ ಮೂರು ಬಾರಿ ಕುಮಾರಸ್ವಾಮಿ ಭೇಟಿ ನೀಡಿದ್ದರು. 

ಆ ಬಳಿಕ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸದಾನಂದಗೌಡ ಅವರು ಚಾಮರಾಜನಗರಕ್ಕೆ ಬರಲು ಹಿಂದೇಟು ಹಾಕಿದ್ದರು. ಜಗದೀಶ ಶೆಟ್ಟರು ಬಂದಿದ್ದರು. ಅಷ್ಟೊತ್ತಿಗೆ ಅಧಿಕಾರವಧಿ ಮುಗಿಯುತ್ತಾ ಬಂದಿತ್ತು. 

ಆ ನಂತರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಐದು ವರ್ಷಗಳ ಅವಧಿಯಲ್ಲಿ 12ಕ್ಕೂ ಹೆಚ್ಚು ಬಾರಿ ನಗರಕ್ಕೆ ಬಂದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ, ಮೌಢ್ಯವನ್ನು ಮುರಿದರು. ಕಾಂಗ್ರೆಸ್‌ ಅವಧಿ ಮುಗಿದ ಬಳಿಕ, ಈ ಮೂಢನಂಬಿಕೆ ಮುಂದುವರಿಯಿತು. 

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಸಿ ಎಂ. ಯಡಿಯೂರಪ್ಪ ಬರಲಿಲ್ಲ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬೋಧನಾ ಆಸ್ಪತ್ರೆ ಉದ್ಘಾಟನೆಗೆ ಯಡಬೆಟ್ಟಕ್ಕೆ ಬಂದಿದ್ದರೂ, ನಗರಕ್ಕೆ ಬರಲಿಲ್ಲ. ಬೆಳ್ಳಿ ಹಬ್ಬದ ಸಮಾರಂಭಕ್ಕೆ ಮುಖ್ಯಮಂತ್ರಿ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹೇಳಿದ್ದಾರೆ. ಸಮಾರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹಾಗಾಗಿ ಕಾದು ನೋಡಬೇಕಿದೆ. 

ಮೂಢನಂಬಿಕೆಯಿಂದ ಜಿಲ್ಲೆಗೆ ನಷ್ಟ: ವಾಟಾಳ್‌

ಜಿಲ್ಲೆ ರಚನೆಯಾದ ಸಂದರ್ಭದಲ್ಲಿ ಶಾಸಕರಾಗಿದ್ದ ವಾಟಾಳ್‌ ನಾಗರಾಜ್‌  ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘40 ವರ್ಷಗಳಿಂದ ಚಾಮರಾಜನಗರದೊಂದಿಗೆ ಬಾಂಧವ್ಯ ಹೊಂದಿದ್ದೇನೆ. 1989ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗಿನಿಂದಲೂ ಪ್ರತ್ಯೇಕ ಜಿಲ್ಲೆಯ ಬಗ್ಗೆ ಸರ್ಕಾರದ ಹಂತದಲ್ಲಿ ಒತ್ತಡ ಹಾಕುತ್ತಿದೆ. ನನಗೆ ಅತ್ಯಂತ ಆತ್ಮೀಯರಾಗಿದ್ದ ಜೆ.ಎಚ್‌.ಪಟೇಲ್‌ ಅವರು ಎರಡು ತಾಲ್ಲೂಕುಗಳಿದ್ದರೂ ಪರವಾಗಿಲ್ಲ. ನಿನಗೆ ಪ್ರತ್ಯೇಕ ಜಿಲ್ಲೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಜಿಲ್ಲೆಯನ್ನು ಘೋಷಿಸಿದ್ದರು’ ಎಂದರು.  

‘ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆ ಅಧಿಕಾರದಲ್ಲಿರುವವರಿಗೆ ಇದೆ. ಸಮಾಜವಾದಿಯಾಗಿದ್ದಂತಹ ಜೆ.ಎಚ್‌.ಪಟೇಲರೇ ಜಿಲ್ಲಾ ಕೇಂದ್ರಕ್ಕೆ ಬಂದು ಉದ್ಘಾಟನೆ ಮಾಡಲಿಲ್ಲ. ಆ ಬಳಿಕವೂ ಮುಖ್ಯಮಂತ್ರಿಗಳು ಇಲ್ಲಿಗೆ ಬರಲಿಲ್ಲ. ಇದರಿಂದ ಜಿಲ್ಲೆಗೆ ನಷ್ಟವಾಗಿದೆ’ ಎಂದರು. 

‘ಅಭಿವೃದ್ಧಿಗೆ ವಿಪುಲ ಅವಕಾಶ’

‘1986ರಲ್ಲಿ ಮಾಜಿ ಶಾಸಕರಾಗಿದ್ದ ಬೆಂಕಿ ಮಹದೇವ್‌ ಅವರು ಪ್ರತ್ಯೇಕ ಜಿಲ್ಲೆಯ ಪ್ರಸ್ತಾವ ಮುಂದಿಟ್ಟಿದ್ದರು. ನಂಜನಗೂಡನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಪ್ರತ್ಯೇಕ ಜಿಲ್ಲೆ ಆಗಬೇಕು ಎಂಬುದು ಅವರ ಪರಿಕಲ್ಪನೆಯಾಗಿತ್ತು.  ಸ್ಥಳೀಯ ಮಟ್ಟದಲ್ಲಿ ಮುಖಂಡರು, ಮಾಜಿ ಶಾಸಕರೆಲ್ಲ ಸೇರಿಕೊಂಡು ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡಿದ್ದರು. ಚಾಮರಾಜನಗರವೇ ಜಿಲ್ಲಾ ಕೇಂದ್ರ ಆಗಬೇಕು ಎಂಬ ಒತ್ತಾಯವೂ ಇತ್ತು. ಅಂತಿಮವಾಗಿ ಎಲ್ಲರ ಶ್ರಮದ ಭಾಗವಾಗಿ ಜಿಲ್ಲೆ ಘೋಷಣೆಯಾಯಿತು. ಆದರೆ, ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಯಾಗಲಿಲ್ಲ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ. ವಿಪುಲ ಅವಕಾಶ ಇದ್ದರೂ ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ಸರ್ಕಾರ, ಜಿಲ್ಲಾಡಳಿತ ವಿಫಲವಾಗಿದೆ’ ಎಂದು ಬರಹಗಾರ ಲಕ್ಷ್ಮಿ ನರಸಿಂಹ ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು