ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ಮಂದಿ ಗುಣಮುಖ, 10 ಜನಕ್ಕೆ ಸೋಂಕು

ಜಿಲ್ಲೆಯ ಕೋವಿಡ್‌ ಪ್ರಕರಣಗಳ ಸಂಖ್ಯೆ 173ಕ್ಕೆ ಹೆಚ್ಚಳ, ಸೋಂಕು ಮುಕ್ತರ ಸಂಖ್ಯೆ 77
Last Updated 12 ಜುಲೈ 2020, 15:06 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆಯ ನಾಲ್ಕು ವರ್ಷದ ಹೆಣ್ಣು ಮಗು ಸೇರಿದಂತೆ 28 ಮಂದಿಕೋವಿಡ್‌–19ನಿಂದ ಗುಣಮುಖರಾಗಿ ಭಾನುವಾರ ಮನೆಗೆ ತೆರಳಿದ್ದಾರೆ. ಜೊತೆಗೆ, ಹೊಸದಾಗಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ವೈದ್ಯಕೀಯ ಕಾಲೇಜಿನ ಕೋವಿಡ್‌–19 ಪ್ರಯೋಗಾಲಯದಲ್ಲಿ 300 ಮಂದಿಯ ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆಸಿದ್ದು, 290 ಮಂದಿಯ ವರದಿ ನೆಗೆಟಿವ್‌ ಬಂದಿದೆ.

10 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 173ಕ್ಕೆ ಏರಿದೆ. ಭಾನುವಾರ 28 ಮಂದಿ ಸೇರಿದಂತೆ ಇದುವರೆಗೆ 77 ಮಂದಿ ಸೋಂಕು ಮುಕ್ತರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 96 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ.

ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದ ರೋಗಿಯೊಬ್ಬರು ಚೇತರಿಸಿಕೊಂಡು ವಾರ್ಡ್‌ಗೆ ಸ್ಥಳಾಂತರಗೊಂಡಿದ್ದಾರೆ. ಇದರಿಂದಾಗಿ ಐಸಿಯುನಲ್ಲಿ ಇರುವವರ ಸಂಖ್ಯೆ ಮೂರಕ್ಕೆ ಇಳಿದಿದೆ.

ಭಾನುವಾರ ದಾಖಲಾದ ಹೊಸ ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕಿತರು ಐವರಿದ್ದರೆ, ಬೆಂಗಳೂರಿನಿಂದ ಬಂದವರು ನಾಲ್ವರಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಹನೂರು ತಾಲ್ಲೂಕಿನ ಕೊಂಗರಹಳ್ಳಿಯ 58 ವರ್ಷದ ವ್ಯಕ್ತಿಯೊಬ್ಬರಲ್ಲೂ ಸೋಂಕು ದೃಢಪಟ್ಟಿದೆ.

ಯಳಂದೂರು ತಾಲ್ಲೂಕಿನ ಮೂವರಿಗೆ ಸೋಂಕು ತಗುಲಿದ್ದು, ಈ ಪೈಕಿ 32 ವರ್ಷದ ಪುರುಷರೊಬ್ಬರು ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಸಿಬ್ಬಂದಿಯಾಗಿದ್ದಾರೆ. ತಾಲ್ಲೂಕು ಆರೋಗ್ಯಾಧಿಕಾರಿ ಕ್ವಾಟ್ರಸ್‌ನಲ್ಲಿರುವ 40 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ. ಇವರಿಬ್ಬರೂ ರೋಗಿ ಸಂಖ್ಯೆ 28,911ರ ಸಂಪರ್ಕಿತರಾಗಿದ್ದಾರೆ. ಇದೇ ರೋಗಿಯ ಸಂಪರ್ಕಿತರಾಗಿರುವ ಮಾಂಬಳ್ಳಿಯ 39 ವರ್ಷದ ವ್ಯಕ್ತಿಯಲ್ಲೂ ಸೋಂಕು ಕಂಡು ಬಂದಿದೆ.

ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದ ನಿವಾಸಿ, ಬೆಂಗಳೂರಿಗೆ ಹೋಗಿ ಬಂದಿದ್ದ 27 ವರ್ಷದ ಯುವಕ, ಭುಜಗನಪುರ ಗ್ರಾಮದ 55 ವರ್ಷದ ಮಹಿಳೆ ಕೋವಿಡ್‌ಗೆ ತುತ್ತಾಗಿದ್ದಾರೆ. ಈ ಮಹಿಳೆ ರೋಗಿ ಸಂಖ್ಯೆ 11,024ರ ಸಂಪರ್ಕಿತರಾಗಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಇಕ್ಕಡಹಳ್ಳಿಯ 19 ವರ್ಷ ಹಾಗೂ ಸತ್ತೇಗಾಲದ 25 ವರ್ಷದ ಯುವಕರಲ್ಲಿ ಸೋಂಕು ಕಂಡು ಬಂದಿದ್ದು, ಇಬ್ಬರೂ ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಬಂದಿದ್ದರು.

ಹನೂರು ತಾಲ್ಲೂಕಿನ ಕೊಂಗರಹಳ್ಳಿಯ 58 ವರ್ಷದ ಪುರುಷ (ಉಸಿರಾಟದ ತೊಂದರೆ ಸಮಸ್ಯೆ) ಹಾಗೂ ಬೆಂಗಳೂರಿನಿಂದ ಬಂದಿದ್ದ ಕಣ್ಣೂರಿನ 26 ವರ್ಷದ ಯುವಕನಲ್ಲಿ ಕೋವಿಡ್‌–19 ದೃಢಪಟ್ಟಿದೆ.

ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡತುಪ್ಪೂರು ಗ್ರಾಮದಲ್ಲಿ 35 ವರ್ಷದ ಪುರುಷರೊಬ್ಬರು ಸೋಂಕಿಗೆ ತುತ್ತಾಗಿದ್ದು, ಇವರು ರೋಗಿ ಸಂಖ್ಯೆ 25,130ರ ಸಂಪರ್ಕಿತ.

ಗುಣಮುಖರಾದವರಲ್ಲಿ ಗುಂಡ್ಲುಪೇಟೆಯ ಹೌಸಿಂಗ್‌ ಬೋರ್ಡ್‌‌ನ ನಾಲ್ಕು ವರ್ಷದ ಕಂದಮ್ಮ, ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರೆ, ಚಾಮರಾಜನಗರದ ಸೋಮವಾರಪೇಟೆಯ 62 ವರ್ಷದ‍ಪುರುಷರೊಬ್ಬರು ಹಿರಿಯ ವ್ಯಕ್ತಿ.

ಗುಂಡ್ಲುಪೇಟೆ ಹಾಗೂ ಆ ತಾಲ್ಲೂಕಿನ 13 ಮಂದಿ, ಚಾಮರಾಜನಗರ ತಾಲ್ಲೂಕಿನ ಎಂಟು ಮಂದಿ, ಮೂವರು ಕೊಳ್ಳೇಗಾಲ, ಇಬ್ಬರು ಹನೂರು ಹಾಗೂ ಒಬ್ಬರು ಹನೂರು ತಾಲ್ಲೂಕಿನವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

2,485 ಮಂದಿಯ ಮೇಲೆ ನಿಗಾ

ಜಿಲ್ಲೆಯಲ್ಲಿರುವ ಸೋಂಕಿತರ ಪ್ರಾಥಮಿಕ ಸಂಪರ್ಕಿತರು 1,141 ಹಾಗೂ ದ್ವಿತೀಯ ಸಂಪರ್ಕಿತರು 1,344 ಸೇರಿದಂತೆ ಒಟ್ಟು 2,485 ಮಂದಿ ಮನೆ ಕ್ವಾರಂಟೈನ್‌ನಲ್ಲಿದ್ದು, ಅವರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ.

ಭಾನುವಾರ ಹೊ‌ಸದಾಗಿ 145 ಪ್ರಾಥಮಿಕ ಸಂಪರ್ಕಿತರು ಹಾಗೂ 197 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT