ಶನಿವಾರ, ಜುಲೈ 31, 2021
25 °C
ಸಕ್ರಿಯ ಕೋವಿಡ್‌–19 ಪ್ರಕರಣಗಳ ಸಂಖ್ಯೆ 106ಕ್ಕೆ ಏರಿಕೆ, ಹೆಣ್ಣುಮಗುವಿಗೆ ಜನ್ಮ ನೀಡಿದ ಸೋಂಕಿತೆ

ಕೋವಿಡ್ -19| ಚಾಮರಾಜನಗರದಲ್ಲಿ ಒಂದೇ ದಿನ 38 ಪ್ರಕರಣ, 13 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 38 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೂ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಖಚಿತವಾಗಿರಲಿಲ್ಲ. 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 

ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳ ಸಂಖ್ಯೆ 297ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 188ಕ್ಕೆ ಹೆಚ್ಚಿದೆ. 106 ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಕೋವಿಡ್‌ ಆಸ್ಪತ್ರೆ/ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಭಾನುವಾರ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ 471 ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, 432 ವರದಿಗಳು ನೆಗೆಟಿವ್‌ ಬಂದಿದೆ (ಒಂದು ಪ್ರಕರಣ ಹೊರ ಜಿಲ್ಲೆಯದು). ಇನ್ನು 98 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. 

ಕೊಳ್ಳೇಗಾಲದ ಪಾಲು ಹೆಚ್ಚು: ಭಾನುವಾರ ದೃಢಪಟ್ಟ ಪ್ರಕರಣಗಳಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಪಾಲು ಹೆಚ್ಚಿದೆ. ಕೊಳ್ಳೇಗಾಲ ನಗರ ಸೇರಿದಂತೆ ತಾಲ್ಲೂಕಿನ 18 ಮಂದಿಗೆ ಸೋಂಕು ತಗುಲಿದೆ. 

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 10, ಚಾಮರಾಜನಗರ ತಾಲ್ಲೂಕಿನಲ್ಲಿ ಐವರು, ಹನೂರು ತಾಲ್ಲೂಕಿನಲ್ಲಿ ಮೂವರು, ಯಳಂದೂರು ತಾಲ್ಲೂಕಿನಲ್ಲಿ ಇಬ್ಬರು ಕೋವಿಡ್‌–19ಗೆ ತುತ್ತಾಗಿದ್ದಾರೆ. 

ಇಂದು ವರದಿಯಾಗಿರುವ ಪ್ರಕರಣಗಳಲ್ಲಿ ಸೋಂಕು ಹೇಗೆ ತಗುಲಿದೆ ಎಂಬುದೇ ತಿಳಿಯದ ಪ್ರಕರಣಗಳೇ ಹೆಚ್ಚು ಇರುವುದು ಆತಂಕಕಾರಿಯಾಗಿದೆ. ಹೆಚ್ಚಿನ ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಬೇಕಾಗಿದೆ.

ಒಟ್ಟು 471 ಮಾದರಿಗಳ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ಪ್ರಕರಣಗಳಿವು. ಇಂದು 13 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದುವರೆಗೆ ಒಟ್ಟು 188 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು ಕೇವಲ 98 ಮಾದರಿಗಳ ಫಲಿತಾಂಶವಷ್ಟೇ ಬಾಕಿಯಿದೆ.

ಇಂದು ವರದಿಯಾಗಿರುವ ಪ್ರಕರಣಗಳ ಪೈಕಿ ಕೊಳ್ಳೇಗಾಲ ತಾಲೂಕಿನದು ಸಿಂಹ ಪಾಲು. ಅಲ್ಲಿ 18 ಪ್ರಕರಣಗಳು ವರದಿಯಾಗಿವೆ.

ಮೂಲ ಗೊತ್ತಾಗದ್ದೇ ಹೆಚ್ಚು: 38 ಸೋಂಕಿತರ ಪೈಕಿ 17 ಮಂದಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಗೊತ್ತಾಗಿಲ್ಲ. ಆರೋಗ್ಯ ಇಲಾಖೆ ಸೋಂಕಿನ ಮೂಲವನ್ನು ಪತ್ತೆ ಹಚ್ಚುತ್ತಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿರುವ ಎಂಟು ಮಂದಿ ಕೋವಿಡ್‌ಗೆ ತುತ್ತಾಗಿದ್ದಾರೆ. ಬೆಂಗಳೂರಿನಿಂದ ಬಂದ ಏಳು ಮಂದಿ, ತುಮಕೂರಿನಿಂದ ಬಂದ ಒಬ್ಬರು, ಐಎಲ್‌ಐ ರೋಗ ಲಕ್ಷಣ ಹೊಂದಿದ್ದ ಮೂವರು, ಕಂಟೈನ್‌ಮೆಂಟ್‌ ವಲಯದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. 

ಮಹದೇಶ್ವರ ಬೆಟ್ಟದಲ್ಲಿ ಮೊದಲ ಪ್ರಕರಣ: ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಅಲ್ಲಿನ ಪೊಲೀಸ್‌ ಠಾಣೆ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದ್ದು, ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. 

5,364 ಜನರ ಮೇಲೆ ನಿಗಾ: ಸೋಂಕಿತರ 2,449 ಪ್ರಾಥಮಿಕ ಸಂರ್ಕಿತರು ಹಾಗೂ 2,915 ದ್ವಿತೀಯ ಸಂಪರ್ಕಿತರು ಸೇರಿ ಒಟ್ಟಾರೆಯಾಗಿ 5,364 ಮಂದಿ ಮನೆ ಕ್ವಾರಂಟೈನ್‌ನಲ್ಲಿದ್ದು, ಜಿಲ್ಲಾಡಳಿತ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. 

ಹೆಣ್ಣುಮಗುವಿಗೆ ಜನ್ಮ ನೀಡಿದ ಸೋಂಕಿತೆ

ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತ ಗರ್ಭಿಣಿಯೊಬ್ಬರು ಭಾನುವಾರ ಸಂಜೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮಗು 3.2 ಕೆಜಿ ತೂಕ ಇದ್ದು, ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 

ಹನೂರು ತಾಲ್ಲೂಕಿನ ಗಾಣಿಗ ಮಂಗಲ ಗ್ರಾಮದ 21 ವರ್ಷ ವಯಸ್ಸಿನ ಗರ್ಭಿಣಿ ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಅವರ ಗಂಟಲ ಮಾದರಿ ಸಂಗ್ರಹಿಸಿ ಕೋವಿಡ್‌–19 ಪರೀಕ್ಷೆ ಮಾಡಿಸಿದ್ದರು. ಭಾನುವಾರ ಬೆಳಿಗ್ಗೆ ಸೋಂಕು ಇರುವುದು ಖಚಿತವಾಯಿತು.

‘ಹೆರಿಗೆಗಾಗಿ ನಿಗದಿ ಪಡಿಸಿದ್ದ ದಿನ (40 ವಾರಗಳ ಅವಧಿ) ಕಳೆದಿತ್ತು. ಹಾಗಿದ್ದರೂ ಗರ್ಭಿಣಿಗೆ ಹೆರಿಗೆ ನೋವು ಬಂದಿರಲಿಲ್ಲ. ಈ ಕಾರಣದಿಂದ ಸಿಸೇರಿಯನ್‌ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೋವಿಡ್‌ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಆಪರೇಷನ್‌ ಥಿಯೇಟರ್‌ನಲ್ಲಿ ಹೆರಿಗೆ ಮಾಡಿಸಲಾಗಿದೆ. ಪ್ರಸೂತಿ ತಜ್ಞೆ ಡಾ.ಸ್ವಾತಿ, ಅರಿವಳಿಕೆ ತಜ್ಞ ಡಾ.ಸಮರ್ಥ್‌, ಮಕ್ಕಳ ತಜ್ಞೆ ಡಾ.ಲಕ್ಷ್ಮಿ ಹಾಗೂ ಸ್ಟಾಫ್‌ ನರ್ಸ್‌ ಪುಟ್ಟಲಿಂಗಮ್ಮ ಹಾಗೂ ಸಿಬ್ಬಂದಿಯ ತಂಡ ಹೆರಿಗೆ ಮಾಡಿಸಿದೆ. ತಾಯಿ ಮಗು ಆರೋಗ್ಯದಿಂದ ಇದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು