ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ 42 ಪ್ರಕರಣ ದೃಢ: ಯಳಂದೂರು ತಾಲ್ಲೂಕು ಕಚೇರಿ ಸೀಲ್‌ಡೌನ್

ಸೋಂಕಿತರ ಸಂಖ್ಯೆ 571ಕ್ಕೆ ಏರಿಕೆ, ಸೋಂಕು ಮುಕ್ತರಾದವರು 340
Last Updated 28 ಜುಲೈ 2020, 14:35 IST
ಅಕ್ಷರ ಗಾತ್ರ

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 42 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 571ಕ್ಕೆ ಏರಿದೆ.

ಮಂಗಳವಾರ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ವರೆಗೆ ಸೋಂಕುಮುಕ್ತರಾದವರ ಸಂಖ್ಯೆ 340ಕ್ಕೆ ಹಿಗ್ಗಿದೆ. 225 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಕೋವಿಡ್‌ ಆಸ್ಪತ್ರೆ ಹಾಗೂ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐಸಿಯುನಲ್ಲಿ ಸದ್ಯ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಏಳು ಮಂದಿ ಇದ್ದರು. ಚೇತರಿಸಿಕೊಂಡ ಇಬ್ಬರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

20 ಸಾವಿರ ದಾಟಿದ ಪರೀಕ್ಷೆ: ಈ ಮಧ್ಯೆ, ಜಿಲ್ಲೆಯಲ್ಲಿ ಇದುವರೆಗೆ ನಡೆಸಲಾದ ಕೋವಿಡ್‌–19 ಪರೀಕ್ಷೆಗಳ ಸಂಖ್ಯೆ 20 ಸಾವಿರ ದಾಟಿದೆ.

ಮಂಗಳವಾರ 700 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ನಡೆಸಿರುವ ಪರೀಕ್ಷೆಗಳ ಸಂಖ್ಯೆ 20,571ಕ್ಕೆ ತಲುಪಿದೆ. 19,990 ವರದಿಗಳು ನೆಗೆಟಿವ್‌ ಬಂದಿವೆ.

ಬುಧವಾರ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ ಮೂಲಕ 679 ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 37 ಮಂದಿಗೆ ಸೋಂಕು ಕಂಡು ಬಂದಿದೆ. 21 ಗಂಟಲು ದ್ರವ ಮಾದರಿಗಳನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಐವರಲ್ಲಿ ಕೋವಿಡ್‌–19 ದೃಢಪಟ್ಟಿದೆ.

ಮಂಗಳವಾರ ಸೋಂಕು ದೃಢಪಟ್ಟ 42 ಜನರಲ್ಲಿ ಆರು ಮಂದಿ ನೆರೆಯ ಮೈಸೂರು ಜಿಲ್ಲೆಯವರು (ಮೂವರು ಮೈಸೂರು, ತಿ.ನರಸೀಪುರ ತಾಲ್ಲೂಕಿನ ಇಬ್ಬರು ಮತ್ತು ನಂಜನಗೂಡು ತಾಲ್ಲೂಕಿನ ಒಬ್ಬರು).

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು, 14 ಪ್ರಕರಣಗಳು ವರದಿಯಾಗಿವೆ. ಯಳಂದೂರು ತಾಲ್ಲೂಕಿನಲ್ಲಿ 10, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎಂಟು ಹಾಗೂ ಚಾಮರಾಜನಗರದಲ್ಲಿ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ.ಸೋಂಕಿತರಲ್ಲಿ ಎರಡು ವರ್ಷ ಗಂಡು ಮಗು, ನಾಲ್ಕು ವರ್ಷದ ಒಬ್ಬ ಬಾಲಕ ಹಾಗೂ ಬಾಲಕಿ ಇದ್ದಾರೆ.

ಸೋಂಕಿತರ ಸಂಪರ್ಕ ಹೊಂದಿದ್ದ 26 ಮಂದಿ, ಐಎಲ್‌ಐ ರೋಗ ಲಕ್ಷಗಳಿರುವ 11, ಬೆಂಗಳೂರಿನಿಂದ ಬಂದಿರುವ ಇಬ್ಬರು, ಮೈಸೂರಿನಿಂದ ಬಂದಿರುವ ಒಬ್ಬರು ಕೋವಿಡ್‌–19ಗೆ ತುತ್ತಾಗಿದ್ದಾರೆ. ಇಬ್ಬರ ಸೋಂಕಿನ ಮೂಲ ತಿಳಿದು ಬಂದಿಲ್ಲ.

ಕೊಳ್ಳೇಗಾಲ ತಾಲ್ಲೂಕಿನ ಎಂಟು ಮಂದಿ, ಗುಂಡ್ಲುಪೇಟೆ ತಾಲ್ಲೂಕಿನ ಐವರು, ಚಾಮರಾಜನಗರ ತಾಲ್ಲೂಕಿನ ಮೂವರು ಹಾಗೂ ಯಳಂದೂರಿನ ಇಬ್ಬರು ಗುಣಮುಖರಾಗಿದ್ದಾರೆ.

ಯಳಂದೂರು ತಾಲ್ಲೂಕು ಕಚೇರಿ ಸೀಲ್‌ಡೌನ್‌

ಯಳಂದೂರುಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಇರುವ ಸರ್ಕಾರಿ ಖಜಾನೆ ಕಚೇರಿಗಳ ನೌಕರರಲ್ಲಿ ಸೋಂಕು ದೃಢಪಟ್ಟಿರುವುದರಿಂದ ಮೂರು ದಿನಗಳ ಕಾಲ ಕಚೇರಿ ಸುತ್ತಮುತ್ತಲ ಆವರಣಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಗಣಕ ಕೇಂದ್ರದಲ್ಲಿ ಹೊರ ಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ದ್ವಿತೀಯ ದರ್ಜೆ ನೌಕರರೊಬ್ಬರಿಗೆ ಸೋಮವಾರ ದೃಢಪಟ್ಟಿತ್ತು.

‘ಮುಂಜಾಗ್ರತಾ ಕ್ರಮವಾಗಿ ಕಚೇರಿಗಳನ್ನು ಸೀಲ್‌‌ಡೌನ್ ಮಾಡಲಾಗಿದೆ. ಕಚೇರಿಯನ್ನು ಸ್ವಚ್ಛಗೊಳಿಸಲಾಗುವುದು. ಕಚೇರಿಯ ಸುತ್ತಮುತ್ತ ಸ್ವಚ್ಛತೆ ಮತ್ತು ಅಕ್ಕಪಕ್ಕದ ಕಚೇರಿಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT