ಮಂಗಳವಾರ, ಫೆಬ್ರವರಿ 18, 2020
20 °C
ಮತ್ತೆ ಐದು ಪ್ರದೇಶಗಳು ಕೊಳಚೆ ಪ್ರದೇಶ ಎಂದು ಘೋಷಣೆ

ಚಾಮರಾಜನಗರ: 21ಕ್ಕೆ ಏರಿದ ಕೊಳೆಗೇರಿಗಳ ಸಂಖ್ಯೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿರುವ ಆರು ಪ್ರದೇಶಗಳನ್ನು ಕೊಳೆಗೇರಿ ಎಂದು ಘೋಷಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಜಿಲ್ಲಾ ಕೇಂದ್ರದಲ್ಲಿರುವ ಕೊಳೆಗೇರಿಗಳ ಒಟ್ಟು ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 

ನಗರಸಭೆಯ ವ್ಯಾಪ್ತಿಯಲ್ಲಿ 15 ಪ್ರದೇಶಗಳನ್ನು ಕೊಳೆಗೇರಿ ಎಂದು 2009ರಲ್ಲೇ ಘೋಷಿಸಲಾಗಿತ್ತು. ಇದೇ ಅವಧಿಯಲ್ಲಿ, ಕನಿಷ್ಠ ಮೂಲಸೌಕರ್ಯಗಳಿಲ್ಲದ ಹಾಗೂ ಕೊಳಚೆ ಪ್ರದೇಶ ಎಂದು ಘೋಷಿಸಬಹುದಾದ 14 ಪ್ರದೇಶಗಳನ್ನು (ರಾಮಸಮುದ್ರದ ಕುರುಬರ ಬೀದಿ, ಗಂಗಾಮತದ ಬೀದಿ, ಅಗಸರಬೀದಿ, ಸೋಮವಾರ‍ಪೇಟೆ ಯಳವರ ಬೀದಿ, ಸೋಮವಾರಪೇಟೆ ಹರಿಜನ ಬೀದಿ, ಗಾಳಿಪುರ ಹರಿಜನ ಬೀದಿ, ಮುಬಾರಕ್‌ ಮೊಹಲ್ಲಾ, ಕೆಎಸ್‌ಆರ್‌ಟಿಸಿ ಹಿಂಭಾಗ, ಜಾಲಹಳ್ಳಿ ಹುಂಡಿ, ಮೇಗಲ ನಾಯಕರ ಬೀದಿ, ಉಪ್ಪಾರ ಬೀದಿ 2ನೇ ಕ್ರಾಸ್‌, ಅಗ್ರಹಾರ ಬೀದಿ, ಆರ್ಯನ ಬೀದಿ ಮತ್ತು ಚಿನ್ನಿಪುರದ ಮೋಳೆ) ಗುರುತಿಸಲಾಗಿತ್ತು. 

ಈ ಪೈಕಿ, ಏಳು ಪ್ರದೇಶಗಳು ತಕ್ಕಮಟ್ಟಿಗೆ ಅಭಿವೃದ್ಧಿ ಹೊಂದಿದ್ದರಿಂದ ಅವುಗಳನ್ನು ಬಿಟ್ಟು, ಉಳಿದ ರಾಮಸಮುದ್ರದ ಕುರುಬರ ಬೀದಿ, ಸೋಮವಾರ‍ಪೇಟೆ ಯಳವರ ಬೀದಿ, ಸೋಮವಾರಪೇಟೆ ಹರಿಜನ ಬೀದಿ, ಹೊಸ ಹರಿಜನ ಬೀದಿ (ಮುಬಾರಕ್‌ ಮೊಹಲ್ಲಾ), ಕೆಎಸ್‌ಆರ್‌ಟಿಸಿ ಹಿಂಭಾಗ, ಉಪ್ಪಾರ ಬೀದಿ 2ನೇ ಕ್ರಾಸ್‌ ಮತ್ತು ಜಾಲಹಳ್ಳಿ ಹುಂಡಿ ಪ್ರದೇಶಗಳನ್ನು ಕೊಳೆಗೇರಿ ಎಂದು ಘೋಷಿಸಬಹುದು ಎಂದು ನಗರಸಭೆ ಜುಲೈ ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು.

ಇವುಗಳಲ್ಲಿ ರಾಮಸಮುದ್ರದ ಕುರುಬರ ಬೀದಿಯನ್ನು ಬಿಟ್ಟು ಉಳಿದ ಪ್ರದೇಶಗಳನ್ನು ಕೊಳೆಗೇರಿ ಎಂದು ಘೋಷಿಸಿ  ಸೆಪ್ಟೆಂಬರ್‌ 5ರಂದು ರಾಜ್ಯ ಸರ್ಕಾರ ಕರಡು ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ 15 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಲೂ ಅವಕಾಶ ನೀಡಲಾಗಿತ್ತು. ಕಾಲಾವಕಾಶ ಮುಗಿದ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 

‘ಕೊಳೆಗೇರಿ ಎಂದು ಘೋಷಿಸಬಹುದಾದ 14 ಪ್ರದೇಶಗಳನ್ನು 2009ರಲ್ಲಿ ಗುರುತಿಸಲಾಗಿತ್ತು. ಈ ಪ್ರದೇಶಗಳಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು. ಏಳು ಪ್ರದೇಶಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿತ್ತು.  ಅಂತಿಮವಾಗಿ ಏಳು ಪ್ರದೇಶಗಳ ಹೆಸರುಗಳನ್ನು ಮಾತ್ರ ಕಳುಹಿಸಲಾಗಿತ್ತು’ ಎಂದು ನಗರಸಭಾ ಯೋಜನಾಧಿಕಾರಿ ಎಂ.ಎ.ವೆಂಕಟನಾಯ್ಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸೌಕರ್ಯಗಳಿಲ್ಲ: ನಿರ್ದಿಷ್ಟ ಪ್ರದೇಶವನ್ನು ಕೊಳೆಗೇರಿ ಎಂದು ಘೋಷಿಸುವುದಕ್ಕೆ ಹಲವು ಮಾನದಂಡಗಳು ಇವೆ. ಆ ಪ್ರದೇಶದ ಭೌತಿಕ ಸ್ಥಿತಿಗತಿ, ಪರಿಸರ, ಕನಿಷ್ಠ ಮೂಲಸೌಕರ್ಯಗಳನ್ನು ಪರಿಶೀಲಿಸಲಾಗುತ್ತದೆ. ಜನರಿಗೆ ವಾಸಿಸಲು ಬೇಕಾದ ವಾತಾವರಣ ಹಾಗೂ ಸೌಕರ್ಯಗಳು ಇಲ್ಲದಿದ್ದರೆ, ಆ ಪ್ರದೇಶವನ್ನು ಕೊಳೆಗೇರಿ ಎಂದು ಘೋಷಿಸಲಾಗುತ್ತದೆ. 

ಚಾಮರಾಜನಗರದಲ್ಲಿ ಈಗ ಘೋಷಿಸಲಾಗಿರುವ ಆರು ಪ‍್ರದೇಶಗಳು ಕೊಳಚೆಯಿಂದ ಕೂಡಿದ್ದು, ಮಾಲಿನ್ಯ ಹಾಗೂ ಅನಾರೋಗ್ಯ ವಾತಾವರಣದಿಂದ ಕೂಡಿರುವುದರಿಂದ ನಾಗರಿಕ ವಾಸಕ್ಕೆ ಅನುಕೂಲವಾಗಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಕುಡಿಯುವ ನೀರು, ಆರೋಗ್ಯಕರ ಗಾಳಿ, ಬೆಳಕು, ರಸ್ತೆ, ಸೌಕರ್ಯ, ಒಳಚರಂಡಿ ವ್ಯವಸ್ಥೆ, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳು ಇಲ್ಲದಿರುವುದು ದೃಢಪಟ್ಟ ಬಳಿಕ ಸರ್ಕಾರ ಈ ಘೋಷಣೆ ಮಾಡಿದೆ.

‘ಎರಡೂ ಸಂಸ್ಥೆಗಳಿಂದ ಅಭಿವೃದ್ಧಿ‌’
‘ಬೇರೆ ನಗರಗಳಿಗೆ ಹೋಲಿಸಿದರೆ, ನಗರಸಭಾ ವ್ಯಾಪ್ತಿಯಲ್ಲಿ ಘೋಷಿಸಲಾಗಿರುವ ಕೊಳೆಗೇರಿಗಳು ಅಷ್ಟೇನೂ ಕೊಳಚೆಯಿಂದ ಕೂಡಿಲ್ಲ. ಇಲ್ಲಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನು ನಗರಸಭೆ ಮಾಡಿದೆ. ನಿಗದಿತ ಮಾನದಂಡಗಳ ಆಧಾರದಲ್ಲಿ ಕೊಳೆಗೇರಿಗಳನ್ನು ಘೋಷಿಸಲಾಗಿದೆ’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ  ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಪ್ರದೇಶಗಳ ಅಭಿವೃದ್ಧಿಗಾಗಿ ನಗರಸಭೆ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆದ್ಯತೆ ನೀಡಲಿವೆ. ಇಲ್ಲಿನ ನಿವಾಸಿಗಳಿಗೆ ಮನೆ ಹಾಗೂ ಇನ್ನಿತರ ಮೂಲಸೌಕರ್ಯಗಳಿಗಾಗಿ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸರ್ಕಾರದಿಂದ ವಿಶೇಷ ಅನುದಾನ ಸಿಗುತ್ತದೆ. ನಗರಸಭೆಯೂ ಈ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದೆ’ ಎಂದು ಅವರು ಹೇಳಿದರು. 

ಹಿಂದೆ ಘೋಷಣೆಯಾಗಿದ್ದ ಕೊಳೆಗೇರಿಗಳು
ಗೌರಿಗೆರೆ, ರೈಲ್ವೆ ಬಡಾವಣೆ, ಕರಿನಂಜನಪುರ ಗಲ್ಲಿ, ಗಾಳಿಪುರ ಬಡಾವಣೆ, ಎ.ಜೆ.ಕಾಲೊನಿ– ರಾಮಸಮುದ್ರ, ಹಸನೂರು ಘಾಟ್‌, ಚಿಕ್ಕಹರಿಜನ ಬೀದಿ, ಬಳೆಗಾರ ಬೀದಿ, ಸೆಸ್ಕ್‌ ಕಚೇರಿ ಹಿಂಭಾಗ, ಉಪ್ಪರೆಗೆರೆ, ಹೊಸ ಕೊಳದ ಬೀದಿ, ಚಿಕ್ಕಪರಿವಾರ ಬೀದಿ, ದೊಡ್ಡ ಹರಿಜನ ಬೀದಿ, ನಾಯಕರ ಬೀದಿ ಮತ್ತು ಗೋಧಿ ಖಾನ್‌ ಮೊಹಲ್ಲಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು