ಮಂಗಳವಾರ, ಮಾರ್ಚ್ 9, 2021
19 °C

23ರಂದು ರೈತರೊಂದಿಗೆ ಒಂದು ದಿನ: ಕೃಷಿ ಸಚಿವ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಸಮ್ಮುಖದಲ್ಲಿ ಇದೇ 23ರಂದು ಗುಂಡ್ಲುಪೇಟೆ ತಾಲ್ಲೂಕಿನ ಬರಗಿಯಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ವೈಶಿಷ್ಟ್ಯಪೂರ್ಣವಾಗಿರುವ ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಪದ್ಧತಿ, ಪ್ರಾತ್ಯಕ್ಷಿಕೆಗಳು, ವಿಶೇಷ ಉಪನ್ಯಾಸ, ವಸ್ತುಪ್ರದರ್ಶನ ಸೇರಿದಂತೆ ಹಲವಾರು ಕೃಷಿ ಸಂಬಂಧಿತ ಚಟುವಟಿಕೆಗಳು ನಡೆಯಲಿವೆ.

ಬೆಳಿಗ್ಗೆ ಬರಗಿ ಗ್ರಾಮದ ವ್ಯಾಪ್ತಿಯಲ್ಲಿರುವ ರೈತರಾದ ರಾಜಶೇಖರ್ ಅವರ ಜಮೀನಿನಲ್ಲಿ ನಾನಾ ಸಮಗ್ರ ಕೃಷಿ ಚಟುವಟಿಕೆಗಳು ಕೃಷಿ ಸಚಿವರ ನೇತೃತ್ವದಲ್ಲಿ ನಡೆಯಲಿವೆ. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.

ಉಳುಮೆ, ಬಿತ್ತನೆ, ಕೃಷಿ ಹೊಂಡಕ್ಕೆ ಮೀನುಮರಿ ಬಿಡುವುದು, ಮೇವಿನ ಬೀಜ ಬಿತ್ತನೆ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಮೆಣಸು, ಈರುಳ್ಳಿ, ಟೊಮೆಟೊ ಮತ್ತಿತ್ತರ ಬೆಳೆ ಕೊಯ್ಲು ಸಹ ನಡೆಸಲಾಗುತ್ತದೆ. ಅರಣ್ಯ ಸಸಿಗಳನ್ನು ನೆಡುವುದು, ಬಾಳೆ ತೋಟಕ್ಕೆ ಲಘು ಪೋಷಕಾಂಶ ಸಿಂಪಡಣೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ನಡೆಸಲು ಯೋಜಿಸಲಾಗಿದೆ.

ಜಮೀನಿನಲ್ಲಿ ಕೃಷಿ ಸಂಬಂಧಿತ ವೈವಿಧ್ಯ ಚಟುವಟಿಕೆಗಳು ನಡೆಸಿದ ಬಳಿಕ ಬರಗಿ ಜೆ.ಎಸ್.ಎಸ್. ಪ್ರೌಢಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲು ನಿರ್ಧರಿಸಲಾಗಿದೆ. ಕೃಷಿ ಪ್ರಶಸ್ತಿ ವಿತರಣೆಯು ನಡೆಯಲಿದೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಸೇರಿದಂತೆ ರೈತರಿಗೆ ಮಾಹಿತಿ ಒದಗಿಸುವ ವಸ್ತು ಪ್ರದರ್ಶನ ಸಹ ಏರ್ಪಾಡು ಮಾಡಲಾಗುತ್ತಿದೆ. ರೈತರೊಂದಿಗೆ ಸಂವಾದ ಏರ್ಪಡಿಸಿ ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರುವ ಉಪನ್ಯಾಸಗಳನ್ನು ಆಯೋಜಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.

ಸಿದ್ಧತೆಗೆ ಸೂಚನೆ: ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಸಂಬಂಧ, ಎಲ್ಲ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿರುವ ಅವರು, ‘ಎಲ್ಲ ರೈತ ಮುಖಂಡರು, ಪ್ರತಿನಿಧಿಗಳು, ರೈತ ಮಹಿಳೆಯರು ಸೇರಿದಂತೆ ಎಲ್ಲರನ್ನೂ ಒಳಗೊಂಡಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕು. ಸಾವಯವ ಉತ್ಪನ್ನಗಳ ಪ್ರದರ್ಶನಕ್ಕೂ ಅವಕಾಶವಿರಬೇಕು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಆಯ್ಕೆಯಾಗಿರುವ ಅರಿಸಿನ ಬೆಳೆ ಬಗ್ಗೆ ವಿಶೇಷ ಗಮನಸೆಳೆಯುವ ಚಟುವಟಿಕೆಗಳು ನಡೆಯಬೇಕು. ಒಟ್ಟಾರೆ ಎಲ್ಲರ ಸಹಕಾರ ನೆರವಿನೊಂದಿಗೆ ರೈತರೊಂದಿಗೊಂದು ದಿನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಸೂಚಿಸಿದ್ದಾರೆ.

ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರು ಸೋಮವಾರ ಗುಂಡ್ಲುಪೇಟೆಯ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾರ್ಯಕ್ರಮ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು