ಬುಧವಾರ, ಜುಲೈ 28, 2021
20 °C
ಲಾಕ್‌ಡೌನ್‌ ನಿರ್ಬಂಧ ಸಡಿಲ; ಹೆಚ್ಚಿದ ಜನರ ಸಂಚಾರ, ಗ್ರಾಹಕರ ಸಂಖ್ಯೆ ಕಡಿಮೆ

ಚಾಮರಾಜನಗರ: 2 ತಿಂಗಳ ಬಳಿಕ ತೆರೆದ ಅಂಗಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ 2ನೇ ಅಲೆ ಕಾರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಡಿದ್ದರಿಂದ ಎರಡು ತಿಂಗಳುಗಳಿಂದ ಮುಚ್ಚಿದ್ದ ಅಂಗಡಿಗಳು ಬುಧವಾರ ತೆರೆದವು. 

ಏಪ್ರಿಲ್‌ 21ರಿಂದ ತರಕಾರಿ, ಹಣ್ಣು, ಮಾಂಸ, ದಿನಸಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಮಾತ್ರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು.

ಕೋವಿಡ್‌ ಪ್ರಕರಣಗಳು ಕಡಿಮೆಯಾಗಿರುವ ಕಾರಣದಿಂದ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಮಳಿಗೆಗಳು ಹಾಗೂ ಮಾಲ್‌ಗಳನ್ನು ಬಿಟ್ಟು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿತ್ತು.

ಜವಳಿ, ಆಭರಣ, ಗಿರವಿ ಅಂಗಡಿಗಳು, ಪಾದರಕ್ಷೆ, ಗ್ಯಾರೇಜ್‌, ಸೆಲೂನ್‌ಗಳು, ಮೊಬೈಲ್‌, ಪುಸ್ತಕದ ಅಂಗಡಿಗಳು, ಪಾತ್ರೆ ಅಂಗಡಿಗಳು, ಎಲೆಕ್ಟ್ರಾನಿಕ್ಸ್‌ ಮಳಿಗೆಗಳು, ವಾಹನಗಳ ಶೋರೂಂಗಳು ಎರಡು ತಿಂಗಳ ಬಳಿಕ ಬುಧವಾರ ವಹಿವಾಟು ನಡೆಸಿದವು. 

ಬಹುತೇಕ ಎಲ್ಲ ವ್ಯಾಪಾರಕ್ಕೂ ಅವಕಾಶ ನೀಡಿದ್ದರಿಂದ ನಗರದಲ್ಲಿ ವಾಹನಗಳ ಸಂಚಾರ, ಜನರ ಓಡಾಟ ಹೆಚ್ಚಿತ್ತು. ಆದರೆ, ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. 

ಬ್ಯಾರಿಕೇಡ್‌ ತೆರವು: ಲಾಕ್‌ಡೌನ್‌ ನಿರ್ಬಂಧದ ಕಾರಣಕ್ಕೆ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ನಗರದ ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆಗಳನ್ನು ಮುಚ್ಚಿದ್ದರು. ನಿರ್ಬಂಧ ಸಡಿಲಿಕೆಯಾಗಿರುವುದರಿಂದ ದೊಡ್ಡಂಗಡಿ ಬೀದಿಯ ಸುತ್ತಮುತ್ತ ಸೇರಿದಂತೆ ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದರು. 

ಮಧ್ಯಾಹ್ನ ಒಂದು ಗಂಟೆಯಾಗುತ್ತಲೇ ಪೊಲೀಸರು ಎಲ್ಲ ರಸ್ತೆಗಳಲ್ಲಿ ಸಂಚರಿಸಿ, ಅಂಗಡಿಗಳನ್ನು ಮುಚ್ಚಿಸಿದರು. 

ಗ್ರಾಹಕರು ಕಡಿಮೆ: ‘ಎರಡು ತಿಂಗಳುಗಳಿಂದ ಮಳಿಗೆಯನ್ನು ಮುಚ್ಚಿದ್ದೆ. ಲಾಕ್‌ಡೌನ್‌ ನಿಯಮ ಸಡಿಲಿಕೆ ಮಾಡಿರುವುದರಿಂದ ವಹಿವಾಟು ಮತ್ತೆ ಆರಂಭಿಸಿದ್ದೇನೆ. ಮೊದಲ ದಿನ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆ ಇತ್ತು. ವ್ಯಾಪಾರ ಸಹಜ ಸ್ಥಿತಿಗೆ ಮರಳಲು ಇನ್ನೂ ಹಲವು ದಿನಗಳು ಬೇಕಾಗಬಹುದು’ ಎಂದು ದೊಡ್ಡಂಗಡಿ ಬೀದಿಯಲ್ಲಿ ಸ್ಟೇಷನರಿ ಅಂಗಡಿ ಇಟ್ಟುಕೊಂಡಿರುವ ಮುರಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು