ಶನಿವಾರ, ಏಪ್ರಿಲ್ 1, 2023
29 °C
ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಕಲಾವಿದ ನಾಗರಾಜ್‌ ಕೈಚಳಕ

ಚಾಮರಾಜನಗರ: ಕೆ.ಗುಡಿಯಲ್ಲೀಗ ಪ್ರಾಣಿ ಚಿತ್ರಗಳ ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಇದೀಗ ಪ್ರವಾಸಿಗರನ್ನು ಬಣ್ಣಗಳಲ್ಲಿ ಮೂಡಿರುವ ಪ್ರಾಣಿಗಳ ಚಿತ್ರಗಳು ಆಕರ್ಷಿಸುತ್ತಿವೆ.

ಸಫಾರಿಗೆ ಬರುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ಉದ್ದೇಶದಿಂದ ಹಾಗೂ ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಅರಣ್ಯ ಇಲಾಖೆ ವಿವಿಧ ಪ್ರಾಣಿಗಳ ಚಿತ್ರಗಳನ್ನು ಗೋಡೆಗಳಲ್ಲಿ ಮೂಡಿಸಿದೆ.

ಕೆ.ಗುಡಿಯಲ್ಲಿರುವ ಸಫಾರಿ ಕೌಂಟರ್‌ ಕಟ್ಟಡ, ವಿವಿಧ ಗೋಡೆಗಳು, ದಾರಿ ಮಧ್ಯೆ ಸಿಗುವ ಫಲಕಗಳಲ್ಲಿ ಬಿಆರ್‌ಟಿ ವ್ಯಾಪ್ತಿಯಲ್ಲಿ ಕಂಡು ಬರುವ ಹುಲಿ, ಆನೆ, ಚಿರತೆ, ಕಾಡೆಮ್ಮೆ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳನ್ನು ಬಿಡಿಸಲಾಗಿದೆ.

ಬಿಆರ್‌ಟಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನೂ ಬರೆಯಲಾಗಿದೆ. ಚಿತ್ರದುರ್ಗದ ಕಲಾವಿದ ನಾಗರಾಜು ಬಣ್ಣಗಳಲ್ಲಿ ಪ್ರಾಣಿಗಳಿಗೆ ಜೀವ ತುಂಬಿದ್ದಾರೆ. 

‘ಕೆ.ಗುಡಿಗೆ ಸಫಾರಿಗಾಗಿ ಅಸಂಖ್ಯಾತ ಪ್ರವಾಸಿಗರು ಬರುತ್ತಾರೆ. ಅವರನ್ನು ಇನ್ನಷ್ಟು ಹೆಚ್ಚು ಆಕರ್ಷಿಸುವುದು ಇದರ ಉದ್ದೇಶ. ಕಲಾವಿದ ನಾಗರಾಜ್‌ ಸುಂದರವಾಗಿ ಚಿತ್ರಗಳನ್ನು ಬಿಡಿಸಿದ್ದು, ಜನರನ್ನು ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತಿಂಗಳಿನಿಂದ ಕೆಲಸ: ಚಿತ್ರಗಳನ್ನು ಬಿಡಿಸಿರುವ ಕಲಾವಿದ ನಾಗರಾಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಹಲವು ಕಡೆಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದೇನೆ. ದಕ್ಷಿಣ ಭಾಗದಲ್ಲಿ ಬಿಆರ್‌ಟಿಯಲ್ಲಿ ಚಿತ್ರಗಳನ್ನು ರಚಿಸಿದ್ದೇನೆ. ಒಂದು ತಿಂಗಳಿನಿಂದ ನಿರಂತರವಾಗಿ ಚಿತ್ರಗಳನ್ನು ಬಿಡಿಸುತ್ತಿರುವೆ’ ಎಂದು ಮಾಹಿತಿ ನೀಡಿದರು. 

‘ಒಂದು ಚಿತ್ರ ಬಿಡಿಸಲು ಕನಿಷ್ಠ ನಾಲ್ಕು ದಿನ ಬೇಕು. ನಾನೊಬ್ಬನೇ ಚಿತ್ರ ರಚಿಸಿದ್ದೇನೆ. ಇದೊಂದು ಉತ್ತಮ ಅನುಭವ’ ಎಂದರು.  

ಜಾಗೃತಿಗಾಗಿ: ‘ಮೊದಲ ಹಂತದಲ್ಲಿ ಕೆ.ಗುಡಿಯಲ್ಲಿರುವ ಸಫಾರಿ ಮಾಹಿತಿ ಕೇಂದ್ರದ ಕಟ್ಟಡ, ಚೆಕ್‌ಪೋಸ್ಟ್‌ ಹಾಗೂ ರಸ್ತೆ ಮಧ್ಯದ ಕೆಲವು ಕಡೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಜನರು ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ರಸ್ತೆ ಮಧ್ಯೆ ಜನರು ವಾಹನಗಳನ್ನು ನಿಲ್ಲಿಸುವ ಸ್ಥಳಗಳಲ್ಲಿ ಎಚ್ಚರಿಕೆ ನೀಡುವ ಚಿತ್ರಗಳನ್ನೂ ಬಿಡಿಸಲಾಗಿದೆ’ ಎಂದು  ವಲಯ ಅರಣ್ಯ ಅಧಿಕಾರಿ ಶಾಂತಪ್ಪ ಪೂಜಾರ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.