ಬುಧವಾರ, ಸೆಪ್ಟೆಂಬರ್ 22, 2021
29 °C
20ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಚಾಮರಾಜನಗರ: ಮಾಸಿಕ ₹12 ಸಾವಿರ ಗೌರವ ಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಾಸಿಕ ಗೌರವ ಧನ ₹12 ಸಾವಿರ ನೀಡಬೇಕು ಹಾಗೂ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಅಗತ್ಯ ಸಲಕರಣೆಗಳನ್ನು ನೀಡಬೇಕು ಎಂದು ಒತ್ತಾಯಿಸಿ ಆ‌ಶಾ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 

ಆಶಾ ಕಾರ್ಯಕರ್ತರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, 20 ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದಾರೆ. 

ಬುಧವಾರ ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಕಾರ್ಯಕರ್ತೆಯರು, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. 

‘ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ಇದುವರೆಗೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಅನಿವಾರ್ಯವಾಗಿ ಜುಲೈ 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದೇವೆ’ ಎಂದು ಪ್ರತಿಭಟನನಿರತರು ಹೇಳಿದರು. 

‘ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಪಣಕ್ಕಿಟ್ಟು ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ದುಡಿತಕ್ಕೆ ತಕ್ಕ ಪ್ರತಿಫಲವಿಲ್ಲದೇ ಕಾರ್ಯಕರ್ತೆಯರು ಅನಿಶ್ಚಿತ ವೇತನದಿಂದ ಹೈರಾಣರಾಗಿದ್ದಾರೆ. ಸರ್ಕಾರ ತಕ್ಷಣವೇ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿಸಿ ಮಾಸಿಕ ₹12 ಸಾವಿರ ವೇತನ ನೀಡಬೇಕು. ಜೊತೆಗೆ ಸೋಂಕು ನಿಯಂತ್ರಣದ ಕರ್ತವ್ಯದಲ್ಲಿರುವ ಕಾರ್ಯಕರ್ತೆಯರ ಆರೋಗ್ಯವನ್ನು ರಕ್ಷಿಸಲು ಅಗತ್ಯವಿರುವ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು’ ಎಂದು  ಒತ್ತಾಯಿಸಿದರು.

‘ಆಗಾಗ ಎಲ್ಲ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಬೇಕು. ಸೋಂಕು ದೃಢಪಟ್ಟವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಈ ಅವಧಿಯಲ್ಲಿ ಗೌರವಧನ ಹಾಗೂ ಪ್ರೋತ್ಸಾಹ ಧನವನ್ನೂ ನೀಡಬೇಕು. ಸೋಂಕಿತ ಕಾರ್ಯಕರ್ತೆಯರಿಗೆ  ಪರಿಹಾರವನ್ನೂ ನೀಡಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು. 

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತ, ಸದಸ್ಯರಾದ ರಾಣಿ, ಶಭಾನ, ಉಮಾ ಮಹೇಶ್ವರಿ, ಲೀಲಾವತಿ, ಶಮ್ಮಾ, ಶಶಿಕಲಾ, ಲೀಲಾವತಿ ಭಾಗ್ಯ, ಸಿದ್ದರಾಜಮ್ಮ ಮತ್ತಿತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು