ಮಂಗಳವಾರ, ಆಗಸ್ಟ್ 3, 2021
21 °C
12 ಸಾವಿರ ಗೌರವ ಧನ, ಅಗತ್ಯ ರಕ್ಷಣಾ ಸಾಮಗ್ರಿ ಒದಗಿಸಲು ಆಶಾ ಕಾರ್ಯಕರ್ತೆಯರ ಆಗ್ರಹ

ಚಾಮರಾಜನಗರ: ಆಶಾ ಕಾರ್ಯಕರ್ತೆಯರಿಂದ ಅನಿರ್ದಿಷ್ಟಾವಧಿ ಆರೋಗ್ಯ ಸೇವೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಾಸಿಕ ₹12 ಸಾವಿರ ಗೌರವ ಧನ ಖಾತ್ರಿಪಡಿಸಬೇಕು ಹಾಗೂ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು ಎಂಬ ಮನವಿಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯರು ಜಿಲ್ಲೆಯಲ್ಲಿ ಶುಕ್ರವಾರದಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿದ್ದಾರೆ. 

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಶುಕ್ರವಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು. 

‘ಜೂನ್‌ 30ರಂದು  ಹಾಗೂ ಒಂದು ವಾರದಿಂದ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅನಿವಾರ್ಯವಾಗಿ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸಬೇಕಾಗಿದೆ’ ಎಂದು ಪ್ರತಿಭಟನಕಾರರು ಹೇಳಿದರು. 

‘ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿರುವುದರಲ್ಲಿ ಆಶಾ ಕಾರ್ಯಕರ್ತರ ಕೊಡುಗೆ ಅಪಾರವಾಗಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆಶಾ ಕಾರ್ಯಕರ್ತರು ಎಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ಕಾರ್ಯನಿರ್ವಹಿಸುತ್ತಿದ್ದಾರೆ. ಚಪ್ಪಾಳೆ, ಹೂಮಳೆಯ ಮೂಲಕ ನೀಡಲಾಗುತ್ತಿರುವ ಮೆಚ್ಚುಗೆ ಬಗ್ಗೆ ಎಲ್ಲರಿಗೂ ಸಂತಸ ಇದೆ. ಆದರೆ, ಕೋವಿಡ್‌–19 ನಿಯಂತ್ರಣ ಕಾರ್ಯದಲ್ಲಿ ದುಡಿಯುತ್ತಿರುವ ಕಾರ್ತಕರ್ತೆಯರು ವೇತನ ಇಲ್ಲದೆ, ಸರಿಯಾಗಿ ರಕ್ಷಣೆ ಇಲ್ಲದೆ ಬಳಲಿ ಬೆಂಡಾಗಿದ್ದಾರೆ’ ಎಂದು ಅವರು ಅಳಲು ತೋಡಿಕೊಂಡರು. 

‘ದುಡಿತಕ್ಕೆ ತಕ್ಕ ಫಲ ಸಿಗುತ್ತಿಲ್ಲ. ಅನಿಶ್ಚಿತ ವೇತನದಿಂದ ಹೈರಾಣರಾಗಿದ್ದಾರೆ. ಸರ್ಕಾರ ಕೂಡಲೇ ಗೌರವಧನ ಹಾಗೂ ಪ್ರೋತ್ಸಾಹಧನ ಎರಡನ್ನೂ ಸೇರಿಸಿ ಮಾಸಿಕವಾಗಿ ಕನಿಷ್ಠ ₹12 ಸಾವಿರ ವೇತನ ನಿಗದಿ ಪಡಿಸಬೇಕು. ಹಾಗೂ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ಆಶಾ ಕಾರ್ಯಕರ್ತೆಯರಿಂದ ಮನವಿ ಸ್ವೀಕರಿಸಿದರು. 

‘ಶುಕ್ರವಾರದಿಂದ ಅನಿರ್ದಿಷ್ಟಾವಧಿವರೆಗೆ ಸೇವೆ ಸ್ಥಗಿತಗೊಳಿಸಿದ್ದೇವೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸುವವರೆಗೂ ಹೋರಾಟ ಮುಂದುವರೆಸುತ್ತೇವೆ’ ಎಂದು ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷೆ ಕವಿತಾ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂಘದ ಕಾರ್ಯದರ್ಶಿ ಶ್ಯಾಮಲಾ, ಮುಖಂಡರಾದ ರಾಣಿ, ಸುಂದ್ರಮ್ಮ, ಮಂಜುಳಾ, ರೂಪರಾಣಿ, ಚಿಕ್ಕತಾಯಮ್ಮ, ಕೆಂ‍ಪಮ್ಮ, ಗೀತಾ ಮತ್ತಿತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು