ಶನಿವಾರ, ಅಕ್ಟೋಬರ್ 16, 2021
22 °C
ಕಾಣದ ಆಯುಧ ಪೂಜೆ ಖರೀದಿಯ ಅತ್ಯುತ್ಸಾಹ; ಬೂದು ಕುಂಬಳಕಾಯಿ, ಬಾಳೆ ಕಂದಿಗೆ ಬೇಡಿಕೆ ಕಡಿಮೆ

ಚಾಮರಾಜನಗರ: ಹೂವಿನ ಮಳಿಗೆಯಲ್ಲಿ ಜನಸಂದಣಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಜನರು ಆಯುಧ ಪೂಜೆ, ವಿಜಯ ದಶಮಿ ಆಚರಣೆಗೆ ಸಿದ್ಧತೆ ನಡೆಸಿದ್ದು, ಪೂಜೆಗೆ ಅಗತ್ಯವಾದ ವಸ್ತುಗಳ ಖರೀದಿಯಲ್ಲಿ ಬುಧವಾರ ತೊಡಗಿದ್ದರು. 

ಆದರೆ, ಕೋವಿಡ್‌ ಹಾವಳಿ ಆರಂಭಕ್ಕೂ ಮುನ್ನ ಹಬ್ಬಗಳ ಸಮಯದಲ್ಲಿ ಇರುತ್ತಿದ್ದ ಖರೀದಿ ಭರಾಟೆ ಕಂಡು ಬರಲಿಲ್ಲ. ಜನರಲ್ಲಿ ಖರೀದಿ ಉತ್ಸಾಹವೂ ಕಾಣಲಿಲ್ಲ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯ ಕಡೆ ಧಾವಿಸಿದ್ದರು. ಹೂವಿನ ಅಂಗಡಿಗಳಲ್ಲಿ ಹೆಚ್ಚು ಗ್ರಾಹಕರು ಕಂಡು ಬಂದರು. 

ನಗರದಲ್ಲಿ ಮಾರುಕಟ್ಟೆ, ಅಂಗಡಿ ಬೀದಿಗಳಲ್ಲಿ ಮಾಮೂಲಿ ದಿನಕ್ಕಿಂತ ಜನರ ಸಂಖ್ಯೆ ಹೆಚ್ಚು ಕಂಡು ಬಂದರೂ, ವ್ಯಾಪಾರ ಹೆಚ್ಚು ಬಿರುಸಿನಿಂದ ಕೂಡಿರಲಿಲ್ಲ. ಯಾಕೋ ಗ್ರಾಹಕರೇ ಬರುತ್ತಿಲ್ಲ ಎಂದು ಹಲವು ವ್ಯಾಪಾರಿಗಳು ಹೇಳುತ್ತಿದ್ದರು. 

ಆಯುಧ ಪೂಜೆಯಲ್ಲಿ ಬಳಕೆಯಾಗುವ ಬೂದು ಕುಂಬಳಕಾಯಿ, ನಿಂಬೆ ಹಣ್ಣು, ಬಾಳೆ ಕಂದು, ಮಾವಿನ ಸೊಪ್ಪು, ಕಬ್ಬಿನ ಸೋಗೆಗಳನ್ನು ವ್ಯಾಪಾರಿಗಳು ಬೀದಿ ಬದಿಗಳಲ್ಲಿ ದೊಡ್ಡ ದೊಡ್ಡ ರಾಶಿ ಹಾಕಿದ್ದರೂ, ಖರೀದಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಹೂವುಗಳಿಗೆ ಮಾತ್ರ ಕೊಂಚ ಬೇಡಿಕೆ ಇತ್ತು. ಹಾಗಾಗಿ, ಹೂವಿನ ಅಂಗಡಿಗಳು ಅಥವಾ ತಳ್ಳುಗಾಡಿಗಳನ್ನು ಇಟ್ಟು ಹೂವಿನ ವ್ಯಾಪಾರ ಮಾಡುತ್ತಿದ್ದವರ ಮುಂದೆ ಜನಸಂದಣಿ ಕಂಡು ಬಂತು. 

ಬಾಳೆ ಕಂದು, ಬೂದು ಕುಂಬಳ ಕಾಯಿಯನ್ನು ನಗರದ ಗ್ರಾಹಕರೇ ಖರೀದಿಸಬೇಕು. ಗ್ರಾಮೀಣ ಭಾಗಗಳಲ್ಲಿ ಇವು ಜನರ ಮನೆಯಲ್ಲೇ ಲಭ್ಯವಿರುತ್ತವೆ. ಹೂವು ಹಾಗಲ್ಲ; ಗ್ರಾಮೀಣ ಭಾಗದವರೂ, ನಗರದವರೂ ಖರೀದಿಸುತ್ತಾರೆ. ಅದಕ್ಕಾಗಿ ಹೂವುಗಳಿಗೆ ಸ್ವಲ್ಪ ಹೆಚ್ಚಿಗೆ ಬೇಡಿಕೆ ಇದೆ ಎಂದು ವ್ಯಾಪಾರಿಗಳು ಹೇಳಿದರು. 

ಹೂವು ಕೊಂಚ ದುಬಾರಿ: ಹಬ್ಬದ ಅಂಗವಾಗಿ ಹೂವುಗಳ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಹೂವಿನ ಮಾರುಕಟ್ಟೆಯಲ್ಲಿ ₹ 100ರಿಂದ ₹ 1000 ಬೆಲೆ ಬಾಳುವ ಹೂವಿನ ಹಾರಗಳು ಮಾರಾಟಕ್ಕಿದ್ದವು.

ಗುಲಾಬಿ ಹೂವಿಗೆ ಕೆ.ಜಿ.ಗೆ ₹ 400ರಿಂದ ₹ 800ರವರೆಗೂ ದರ ಇತ್ತು. ಬಿಳಿ ಹೂವಿಗೆ ₹ 100ರಿಂದ ₹ 400, ಕನಕಾಂಬರಕ್ಕೆ ₹800ರವರೆಗೆ ಬೇಡಿಕೆ ಇತ್ತು. ಸೇವಂತಿಗೆ ಬೆಲೆಯೂ ಹೆಚ್ಚಳವಾಗಿದ್ದು, ಹೂವಿನ ಗುಣಮಟ್ಟ ಆಧಾರವಾಗಿ ವ್ಯಾಪಾರಿಗಳು ಕೆಜಿಗೆ ₹ 100ರಿಂದ ಮಾರಾಟ ಮಾಡುತ್ತಿದ್ದರು. 

ವ್ಯಾಪಾರಿಗಳು ಬೂದು ಕುಂಬಳವನ್ನು ಕೆಜಿಗೆ ₹ 20ರಿಂದ ₹ 30ರವರೆಗೆ ಮಾರಾಟ ಮಾಡಿದರು. ನಿಂಬೆ ಹಣ್ಣಿನ ಬೆಲೆ ಒಂದಕ್ಕೆ ₹ 4ರಿಂದ ₹ 10ರವರೆಗೂ ಇತ್ತು. ಜೋಡಿ ಬಾಳೆ ಕಂದಿಗೆ ₹ 20 ಬೆಲೆ ಇತ್ತು. ನೈವೇದ್ಯಕ್ಕೆ ಬಳಸುವ ಏಲಕ್ಕಿ ಬಾಳೆಹಣ್ಣಿಗೆ ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ.ಗೆ ₹ 50 ಇದ್ದರೆ, ಹೊರಗಡೆ ₹ 60ರವರೆಗೆ ಇತ್ತು. ಹಬ್ಬದ ವಾತಾವರಣ ತರಕಾರಿಯ ಬೆಲೆಯಲ್ಲಿ ಏನೂ ವ್ಯತ್ಯಾಸ ಉಂಟು ಮಾಡಿಲ್ಲ.

ಮನೆಗಳಲ್ಲಿ ಸಂಭ್ರಮದ ಆಚರಣೆಗೆ ಸಿದ್ಧತೆ 

ಮಾರುಕಟ್ಟೆಯಲ್ಲಿ ಆಯುಧಪೂಜೆ ಖರೀದಿ ಸಂಭ್ರಮ ಕಾಣಿಸದಿದ್ದರೂ, ಮನೆಗಳಲ್ಲಿ ಜನರು ಸಂಭ್ರಮದಿಂದಲೇ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸಿದ್ದಾರೆ. 

ಬಹುತೇಕ ಎಲ್ಲ ಹಿಂದೂಗಳ ಮನೆಯಲ್ಲಿ ಆಯುಧಪೂಜೆಯನ್ನು ಆಚರಿಸಲಾಗುತ್ತದೆ. ಹಬ್ಬಕ್ಕೆ ಮೂರ್ನಾಲ್ಕು ದಿನಗಳು ಇರುವಾಗಲೇ ಮನೆಯ ಪಾತ್ರೆ ಪಗಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗುತ್ತದೆ. ಆಯುಧಪೂಜೆಯ ಮುನ್ನಾ ದಿನದ ಹೊತ್ತಿಗೆ ಹಬ್ಬವನ್ನು ಆಚರಿಸಲು ಮನೆಗಳು ಸಜ್ಜುಗೊಂಡಿರುತ್ತವೆ. 

ಆಯುಧಪೂಜೆಯಂದು ಮನೆ ಮುಂದೆ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ, ವಾಹನಗಳು, ಕಂಪ್ಯೂಟರ್‌ಗಳು, ಆಯುಧಗಳು, ಯಂ‌ತ್ರೋಪಕರಣಗಳಿಗೆ ಹೂವುಗಳಿಂದ ಸಿಂಗಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬದ ಅಡುಗೆ ಸಿದ್ಧಪಡಿಸಿ ಕುಟುಂಬದವರೆಲ್ಲ ಒಟ್ಟಾಗಿ ಭೋಜನ ಸವಿಯುತ್ತಾರೆ.

ಬುಧವಾರವೇ ಆಚರಣೆ

ಆಯುಧಪೂಜೆ ಅಂಗವಾಗಿ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಕಾರ್ಖಾನೆಗಳು, ಖಾಸಗಿ ಸಂಸ್ಥೆಗಳಿಗೆ ರಜಾ ಇರುವುದರಿಂದ ಇಲ್ಲೆಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರವೇ ಆಯುಧ ಪೂಜೆ ನೆರವೇರಿಸಿದರು. 

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಹಬ್ಬದ ಕಳೆ ಇತ್ತು. ಸಾರ್ವಜನಿಕರ ಓಡಾಟ ಕಡಿಮೆ ಇದ್ದುದರಿಂದ ಸಿಬ್ಬಂದಿ, ಕಚೇರಿಗಳ ಮುಂದೆ ರಂಗೋಲಿ ಬಿಡಿಸುವುದು, ಬಾಳೆ ಕಂದು, ಮಾವಿನ ಸೊಪ್ಪು, ಬಲೂನುಗಳನ್ನು ಕಟ್ಟಿ ಸಿಂಗರಿಸಿದರು. ಮಹಿಳಾ ಸಿಬ್ಬಂದಿ ಹೊಸ ದಿರಿಸು ಧರಿಸಿ ಕಂಗೊಳಿಸುತ್ತಿದ್ದರು.

ಸರ್ಕಾರಿ ವಾಹನಗಳ ಚಾಲಕರು ವಾಹನಗಳನ್ನು ಸ್ವಚ್ಛಗೊಳಿಸಿ, ತೊಳೆದು ವಿಶೇಷ ಅಲಂಕಾರ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು