ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್‌ ಕಾರ್ಡ್‌ ನೋಂದಣಿ; ಈವರೆಗೆ 23 ಸಾವಿರ ಮಂದಿಗೆ ಪ್ರಯೋಜನ

ಆಯುಷ್ಮಾನ್‌ ಕಾರ್ಡ್‌ ನೋಂದಣಿ; ವಿತರಣೆಗೆ ಜಿ.ಪಂ. ಸಿಇಒ ಚಾಲನೆ
Last Updated 14 ಫೆಬ್ರುವರಿ 2022, 16:56 IST
ಅಕ್ಷರ ಗಾತ್ರ

ಚಾಮರಾಜನಗರ: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ವಿತರಣಾ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಸೋಮವಾರ ಚಾಲನೆ ನೀಡಿದರು.

ಗಾಯತ್ರಿ ಆರೋಗ್ಯ ಕಾರ್ಡ್ ವಿತರಣಾ ಕೇಂದ್ರದಲ್ಲಿ ಸ್ವತಃ ತಾವೇ ಫಲಾನುಭವಿಯೊಬ್ಬರಿಗೆ ಆರೋಗ್ಯ ಕಾರ್ಡ್ ಮುದ್ರಿಸಿ ಸಾಂಕೇತಿಕವಾಗಿ ವಿತರಿಸಿದರು.

ನಂತರ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಡ್ ನೊಂದಣಿ ಹಾಗೂ ವಿತರಣಾ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯು ಕೇಂದ್ರ–ರಾಜ್ಯ ಸರ್ಕಾರದ ಸಂಯೋಜಿತ ಆರೋಗ್ಯ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೇವಾಸಿಂಧು, ಬಾಪೂಜಿ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಸಾಕಷ್ಟು ಆರೋಗ್ಯ ಕಾರ್ಡ್‌ ವಿತರಿಸಲಾಗಿದೆ’ ಎಂದು ಹೇಳಿದರು.

‘ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯೊಂದಿಗೆ ಅರ್ಹ ಫಲಾನುಭವಿಗಳು ಆರೋಗ್ಯ ಕಾರ್ಡ್ ವಿತರಣಾ ಕೇಂದ್ರದಲ್ಲಿ ನೋಂದಾಯಿಸಿ ಕಾರ್ಡ್ ಪಡೆಯಬಹುದಾಗಿದೆ. ಆರೋಗ್ಯ ಕಾರ್ಡ್ ಹೊಂದಿರುವ ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ ₹ 5 ಲಕ್ಷ ಹಾಗೂ ಎಪಿಎಲ್ ಕುಟುಂಬಕ್ಕೆ ₹ 1.50 ಲಕ್ಷದವರೆಗೆ ಉಚಿತ ಆರೋಗ್ಯ ಸೇವಾಚಿಕಿತ್ಸೆಯನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಕಪ್ಪು-ಬಿಳುಪು ಕಾರ್ಡ್‌ಗಾಗಿ ₹ 10 ಮತ್ತು ವರ್ಣಮಯ (ಕಲರ್) ಕಾರ್ಡ್‌ಗೆ ₹ 35 ಶುಲ್ಕ ನಿಗದಿ ಮಾಡಲಾಗಿದೆ’ ಎಂದರು.

‘ಜಿಲ್ಲಾಸ್ಪತ್ರೆಯಲ್ಲಿ ಇದುವರೆಗೆ 23,038 ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದಿದ್ದು, ಈ ಪೈಕಿ 3,180 ರೋಗಿಗಳಿಗೆ ಕ್ಯಾನ್ಸರ್, ಹೃದ್ರೋಗ ಹಾಗೂ ಮೂತ್ರನಾಳದ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ’ ಎಂದು ಗಾಯತ್ರಿ ತಿಳಿಸಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಸಂಜೀವ್, ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ, ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್, ನೋಡೆಲ್ ಅಧಿಕಾರಿ ಡಾ.ಮಹೇಶ್, ಶುಶ್ರೂಷಕ ಸೂಪರಿಂಟೆಂಡೆಂಟ್‌ ಗೀತಾ, ಮಹದೇವ, ಮಹದೇವಸ್ವಾಮಿ, ಚಂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT