ಬುಧವಾರ, ಜನವರಿ 22, 2020
25 °C
ಚಾಮರಾಜನಗರ: ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರಿಂದ ಪ್ರತಿಭಟನೆ

ಬಾಬರಿ ಮಸೀದಿ ಧ್ವಂಸ: ಶಿಕ್ಷೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ದುಷ್ಕರ್ಮಿಗಳಿಗೆ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. 

ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಮೀಪವಿರುವ ಲಾರಿ ನಿಲ್ದಾಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಆರ್‌ಎಸ್‌ಎಸ್‌, ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಬಾಬರಿ ಮಸೀದಿಯ ಜಾಗ ಮಾಲೀಕತ್ವದ ವಿಚಾರದಲ್ಲಿ ಸುಪ್ರೀಂ ತೀರ್ಪು ಗೊಂದಲವಾಗಿದೆ. ಸಾಮಾಜಿಕ ನ್ಯಾಯ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ತತ್ವಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ದೂರಿದರು.

‘ಬಾಬರಿ ಮಸೀದಿ ವಕ್ಫ್‌ ಭೂಮಿಯ ಬಗ್ಗೆ ಎಲ್ಲ ದಾಖಲೆಗಳು, ಸಾಕ್ಷ್ಯಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಸಾಬೀತುಪಡಿಸಿದ ಮೇಲೆ ವಕ್ಫ್‌ ಭೂಮಿಯನ್ನು ಹಿಂದೂ ಗುಂಪಿಗೆ ನೀಡಿದ ತೀರ್ಪಿನ ಬಗ್ಗೆ ದೇಶದಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಊಹೆ ಹಾಗೂ ನಂಬಿಕೆ ಆಧಾರದಡಿ ನೀಡಿದ ತೀರ್ಪು ದೇಶದ ಜಾತ್ಯತೀತ ಹಾಗೂ ಸಮಗ್ರತೆ ಸಿದ್ಧಾಂತಕ್ಕೆ ವಿರುದ್ಧವಾಗಿದೆ’ ಎಂದರು. 

‘ಬಾಬರಿ ಮಸೀದಿಯಲ್ಲಿ ರಾತ್ರಿ ಸಮಯದಲ್ಲಿ ವಿಗ್ರಹಗಳನ್ನು ಅಕ್ರಮವಾಗಿ ಇಡಲಾಗಿದೆ ಮತ್ತು 1992ರ ಡಿಸೆಂಬರ್‌ 6ರಂದು ಮಸೀದಿ ಧ್ವಂಸ ಮಾಡಿರುವುದು ಅಕ್ರಮ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೂ, ಧ್ವಂಸ ನಡೆಸಿದ ದುಷ್ಕರ್ಮಿಗಳಿಗೆ ಶಿಕ್ಷೆ ಪ್ರಕಟಪಡಿಸಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್‌ ಅಹಮದ್‌, ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಆರೀಫ್‌, ಉಪಾಧ್ಯಕ್ಷ ಸಮೀಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಕಾರ್ಯದರ್ಶಿ ಜಬೀನೂರ್‌, ಮುಖಂಡರಾದ ಖಲೀಲ್‌ ಉಲ್ಲಾ, ಮಹಮದ್‌ ಅಮೀಕ್‌, ಸಯಯದ್‌ ಇಮ್ರಾನ್ ಭಾಗವಹಿಸಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು