ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಬಂದೂಕಿಗೆ ಬೀಳಲಿದೆಯೇ ಕಡಿವಾಣ?

ಬಂಡೀಪುರ: ಕಳ್ಳಬೇಟೆಗಾರರ ಜಾಡು ಪತ್ತೆಗೆ ಬಲೆ ಬೀಸಿದ ಅರಣ್ಯ, ಪೊಲೀಸ್‌ ಇಲಾಖೆ
Last Updated 1 ಮೇ 2020, 20:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳ ಬೇಟೆಗಾರರ ಜಾಲ ಸಕ್ರಿಯವಾಗಿದ್ದು, ‌ಲಾಕ್‌ಡೌನ್‌ ಅವಧಿಯಲ್ಲಿ ವನ್ಯಜೀವಿಗಳನ್ನು ಬೇಟೆಯಾಡುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಸಿದ ಬೆನ್ನಲ್ಲೇ ಅರಣ್ಯ ಇಲಾಖೆಯು ಪೊಲೀಸರ ನೆರವಿನಿಂದ ಕಳ್ಳಬೇಟೆಗಾರರ ಪತ್ತೆಗೆ ಬಲೆ ಬೀಸಿದೆ. ಇದರ ನಡುವೆಯೇ ಕಾಡಂಚಿನ ಪ್ರದೇಶದಲ್ಲಿ ಗಸ್ತಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದೆ.

ತಿಂಗಳ ಅವಧಿಯಲ್ಲಿ ಬಂಡೀಪುರದ ಸುತ್ತಮುತ್ತ ಮೂರು ಕಳ್ಳಬೇಟೆ ಪ್ರಕರಣಗಳು ವರದಿಯಾಗಿದ್ದವು. ಎರಡು ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದರೆ, ಏಪ್ರಿಲ್‌ 28ರಂದು ಗುಂಡ್ಲುಪೇಟೆ ಬಫರ್‌ ವಲಯದಲ್ಲಿ ಬರುವ ಪಾರ್ವತಿ ಬೆಟ್ಟದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಎಲ್ಲ ಪ್ರಕರಣಗಳಲ್ಲೂ ಆರೋಪಿಗಳು ನಾಡ ಬಂದೂಕುಗಳನ್ನು ಬಳಸಿರುವುದು ಅರಣ್ಯ ಇಲಾಖೆಗೆ ತಲೆನೋವು ತಂದಿದ್ದು, ಬಂಡೀಪುರದ ಸುತ್ತಮುತ್ತ ನಾಡ ಬಂದೂಕುಗಳ ತಯಾರಿಕೆ, ಮಾರಾಟ ಜಾಲ ಸಕ್ರಿಯವಾಗಿರುವುದನ್ನು ಪುಷ್ಟೀಕರಿಸುತ್ತದೆ.

ತಾಲ್ಲೂಕಿನ ಕೋಡಹಳ್ಳಿ, ಅಣ್ಣೂರುಕೇರಿ, ಹಗ್ಗದಹಳ್ಳ, ಬನ್ನಿತಾಳಪುರ, ಭೀಮನಬೀಡು, ಕೋಟೆಕೆರೆ ಗ್ರಾಮದಲ್ಲಿ ಬೇಟೆಯಾಡುವ ಪದ್ಧತಿ ಇದೆ. ಕಳ್ಳಬೇಟೆಗಾರರು ಇಲ್ಲಿ ಸಕ್ರಿಯರಾಗಿದ್ದಾರೆ ಎಂಬುದು ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿರುವ ತನಿಖೆಯಿಂದ ದೃಢಪಟ್ಟಿದೆ. ಕೋಡಹಳ್ಳಿಯಲ್ಲಿ ನಾಡ ಬಂದೂಕುಗಳನ್ನು ತಯಾರಿಸಲಾಗುತ್ತಿದೆ ಎಂಬ ಬಲವಾದ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಕೋಡಹಳ್ಳಿ ಹಾಗೂ ಸುತ್ತಮುತ್ತಲಿನ ಕೆಲವು ಊರುಗಳಲ್ಲಿ ನಾಡಬಂದೂಕು ಸುಲಭವಾಗಿ ಸಿಗುತ್ತಿದೆ. ಬೇಟೆಯಾಡುವವರ ಸ‌ಂಖ್ಯೆಯೂ ಇಲ್ಲಿ ಹೆಚ್ಚಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸರಿಗೆ ಹಸ್ತಾಂತರ: ನಾಡಬಂದೂಕುಗಳ ಪತ್ತೆ ಹಾಗೂ ಅವುಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಅರಣ್ಯ ಇಲಾಖೆಯು ಪೊಲೀಸರ ಸಹಾಯ ಕೇಳಿದೆ. ನಾಡ ಬಂದೂಕುಗಳ ಪ್ರಕರಣಗಳನ್ನು ಅದು ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಲಿದೆ.

‘ಪಾರ್ವತಿ ಬೆಟ್ಟದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬ ನಾಡ ಬಂದೂಕು ಬಳಕೆ ಹಾಗೂ ಅದು ಸಿಗುವ ಸ್ಥಳದ ಬಗ್ಗೆ ವಿಚಾರಣೆಯ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದಾನೆ. ಹೆಚ್ಚಿನ ತನಿಖೆಗೆ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಲಾಗುವುದು. ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ‍ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದಾರೆ. ಈ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ’ ಎಂದು ಬಾಲಚಂದ್ರ ಮಾಹಿತಿ ನೀಡಿದರು.

ದೊಡ್ಡ ಜಾಲದ ಶಂಕೆ: ಕಳ್ಳಬೇಟೆ ಪ್ರಕರಣದಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಹೊರಗಡೆ ಹೋಗುವುದಕ್ಕೆ ಅವಕಾಶ ಇಲ್ಲದಿರುವುದರಿಂದ ಕಾಡುಗಳಲ್ಲಿ ಬೇಟೆಯಾಡುತ್ತಿದ್ದಾರೆ ಎಂಬುದು ಅಧಿಕಾರಿಗಳ ಮಾತು.

‘ಈ ಹಿಂದೆ ನಾಲ್ಕೈದು ತಿಂಗಳಿಗೆ ಇಂತಹ ಪ್ರಕರಣಗಳು ಅಪರೂಪವಾಗಿ ನಡೆಯುತ್ತಿದ್ದವು. ಲಾಕ್‌ಡೌನ್‌ ಆಗಿರುವುದರಿಂದ ಬೇಟೆಗಾರರು ಸಕ್ರಿಯರಾಗಿದ್ದಾರೆ. ಮಾರುಕಟ್ಟೆಯಲ್ಲಿ ಮಾಂಸದ ಬೆಲೆ ಹೆಚ್ಚಾಗಿದೆ. ಆಡು, ಕುರಿ ಮಾಂಸದ‌ ಬೆಲೆ ₹800ರ ಗಡಿ ದಾಟಿದೆ. ಜಿಂಕೆಯ ಮಾಂಸವನ್ನು ಕೆ.ಜಿ.ಗೆ ₹300 ದರದಲ್ಲಿ ಮಾರಾಟ ಮಾಡುತ್ತಿದ್ದಾರೆ’ ಎಂದು ಬಾಲಚಂದ್ರ ವಿವರಿಸಿದರು.

ನಾಡಬಂದೂಕುಗಳ ನಿಯಂತ್ರಣಕ್ಕೆ ಕ್ರಮ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌, ‘ಕೋವಿಡ್‌–19ರ ಕರ್ತವ್ಯದಲ್ಲಿ ಎಲ್ಲ ಸಿಬ್ಬಂದಿ ನಿರತರಾಗಿದ್ದಾರೆ. ಹಾಗಾಗಿ, ಬೇರೆ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸಲಾಗಿಲ್ಲ. ಕಾಡಂಚಿನ ಪ್ರದೇಶಗಳಲ್ಲಿ ನಾಡ ಬಂದೂಕುಗಳ ಹಾವಳಿ ವಿಚಾರ ನಮ್ಮ ಗಮನದಲ್ಲಿದೆ. ಲಾಕ್‌ಡೌನ್‌ ತೆರವಾದ ನಂತರ ಎಲ್ಲ ಕಡೆಗಳಲ್ಲಿಯೂ ದಾಳಿ ನಡೆಸಿ, ನಾಡ ಬಂದೂಕು ತಯಾರಿಕೆ ಹಾಗೂ ಬಳಕೆ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಹೇಳಿದರು.

ಬಾಲಚಂದ್ರ

ಮಳೆ ಚೆನ್ನಾಗಿ ಬಂದಿರುವುದರಿಂದ ಈಗ ಕಾಳ್ಗಿಚ್ಚಿನ ಭಯ ನಮಗಿಲ್ಲ. ಹಾಗಾಗಿ, ಕಾಡಂಚಿನ ಪ್ರದೇಶಗಳಲ್ಲಿ ಸಿಬ್ಬಂದಿ ಗಸ್ತು ತಿರುಗುವುದನ್ನು ಹೆಚ್ಚಿಸಿದ್ದೇವೆ.
-ಟಿ.ಬಾಲಚಂದ್ರ, ಹುಲಿ ಯೋಜನೆ ನಿರ್ದೇಶಕ

ನಾಡ ಬಂದೂಕು ಪ್ರಕರಣವನ್ನು ಅರಣ್ಯ ಇಲಾಖೆ ಇನ್ನೂ ಹಸ್ತಾಂತರ ಮಾಡಿಲ್ಲ. ನಮಗೆ ವಹಿಸಿದ ನಂತರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.
-ಎಚ್‌.ಡಿ.ಆನಂದ ಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT