ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸಾ ಮಾರ್ಗದಿಂದ ಸುಜ್ಞಾನ ಪ್ರಾಪ್ತಿ: ರಾಮಚಂದ್ರ

ಜಿಲ್ಲಾಡಳಿತಯಿಂದ ಭಗವಾನ್‌ ಮಾಹಾವೀರ ಜಯಂತಿ ಆಚರಣೆ
Last Updated 17 ಏಪ್ರಿಲ್ 2022, 16:19 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭಗವಾನ್ ಮಹಾವೀರರು ಪ್ರತಿಪಾದಿಸಿದ ಅಹಿಂಸಾ ಮಾರ್ಗವುಮಾನವನನ್ನು ಶಾಂತಿ, ಸಹನೆ, ಪ್ರೀತಿಯ ಮೂಲಕ ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುತ್ತದೆ’ ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ಭಾನುವಾರ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಗವಾನ್ ವರ್ಧಮಾನ ಮಹಾವೀರರ ಜಯಂತಿಯಲ್ಲಿ ಮಾತನಾಡಿದರು.

‘ದೇಶದ ಎಲ್ಲಾ ಧರ್ಮಗಳು ಹಾಗೂ ಸಂಸ್ಕೃತಿಗಳುವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಅಡಿಪಾಯಗಳು. ಜೈನಧರ್ಮ ಬೋಧಿಸಿದ ಅಹಿಂಸಾ ಮಾರ್ಗ ಅವುಗಳಲ್ಲಿ ಪ್ರಮುಖವಾದುದು. ಯಾವುದೇ ಜೀವಿಗೆ ಕೆಡುಕನ್ನು ಬಯಸದೇ ಸತ್ಯ, ಅಹಿಂಸೆಯಿಂದ, ಸರ್ವರನ್ನು ಶಾಂತಿ, ಪ್ರೀತಿಯಿಂದ ಕಾಣುವುದೇ ಜೈನ ಧರ್ಮದ ಸಾರ. ಮಹಾವೀರರ ನಡೆ-ನುಡಿ, ಆಚಾರ-ವಿಚಾರ, ತಾತ್ವಿಕ ಚಿಂತನೆಗಳು, ಮಾನವೀಯ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ, ಉಪನ್ಯಾಸಕ ಸುರೇಶ್ ಎನ್‌. ಋಗ್ವೇದಿ ಮಾತನಾಡಿ, ‘ಪ್ರತಿಯೊಬ್ಬರೂ ಮಹಾವೀರರ ಜೀವನ, ಇತಿಹಾಸ, ಜಿನ ಪರಂಪರೆಯನ್ನು ಅಧ್ಯಯನ ಮಾಡಿದಾಗ ಸತ್ಯ ಮತ್ತು ಅಹಿಂಸೆಯ ಸಾರ ಅರಿವಾಗುತ್ತದೆ. ಮಾನವನ ಪರಿಪೂರ್ಣತೆಗೆ ಅಹಿಂಸೆಯೇ ಮೂಲ. ಮನುಷ್ಯನು ತನ್ನ ಜೀವಿತ ಕಾಲದಲ್ಲಿ ಎಲ್ಲ ಇಂದ್ರಿಯಗಳನ್ನು ನಿಗ್ರಹಿಸಿ ಅತ್ಮ ಸಾಕ್ಷಾತ್ಕಾರ ಹೊಂದಬೇಕೆಂಬ ಶ್ರೇಷ್ಠ ಚಿಂತನೆಯನ್ನು ಭಗವಾನ್ ಮಹಾವೀರರು ಭಾರತದ ಮೂಲಕ ಇಡೀ ವಿಶ್ವಕ್ಕೆ ತೋರಿಸಿಕೊಟ್ಟರು’ ಎಂದರು.

‘ಜಿಲ್ಲೆಗೂ ಜೈನ ಪರಂಪರೆಯ ಕೊಡುಗೆ ಸಾಕಷ್ಟಿದೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ಉತ್ತಮ ಶಿಲ್ಪಕಲೆ ಹೊಂದಿರುವ ಜೈನ ದೇಗುಲಗಳು, ತೀರ್ಥಂಕರರ ಬಸದಿಗಳು ಅಹಿಂಸಾ ಮಾರ್ಗದ ಪ್ರಸಾರಕ್ಕೆ ನಾಂದಿ ಹಾಡಿವೆ. ಕನಕಗಿರಿ ಕ್ಷೇತ್ರ ಜೈನಧರ್ಮದ ಪ್ರಮುಖ ಪ್ರಸಾರ ಕೇಂದ್ರವಾಗಿತ್ತು. ಜೈನಧರ್ಮವು ಸೇರಿದಂತೆ ಎಲ್ಲಾ ಧರ್ಮಗಳ ಸಮಗ್ರತೆಯ ಮೂಲಕ ಭಾರತ ಇಂದು ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಿದೆ’ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಅವರು, ‘ಮಹಾವೀರರ ಸತ್ಯ ಮತ್ತು ಅಹಿಂಸೆಯನ್ನು ಎಲ್ಲರೂ ಅನುಸರಿಸಬೇಕು. ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ಸುಳ್ಳು, ಅಸತ್ಯ ಎಲ್ಲೆಡೆ ಅವರಿಸಿಕೊಂಡಿವೆ. ಪ್ರತಿಯೊಬ್ಬರೂ ಸತ್ಯವನ್ನೇ ನುಡಿಯಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಗಂಗಾಧರ್, ಜೈನ ಸಮಾಜದ ಜಿಲ್ಲಾಧ್ಯಕ್ಷ ನಿರ್ಮಲ್‌ಕುಮಾರ್ ಜೈನ್, ಉಪಾಧ್ಯಕ್ಷ ಸತೀಶ್‌ಕುಮಾರ್, ಜಿನ ಉಪಾಸಕಿ ಇಂಧುಮತಿ, ಕೆಲೆ ನಟರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT