ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯಕ್ಕೆ ಬಿದ್ದು ಬಾಲ್ಯ ವಿವಾಹ ಉತ್ತೇಜಿಸದಿರಿ: ಸಚಿವ ಸಿ.ಪುಟ್ಟರಂಗಶೆಟ್ಟಿ

ಭಗೀರಥ ಜಯಂತಿಯಲ್ಲಿ ಉಪ್ಪಾರ ಸಮುದಾಯದಕ್ಕೆ ಸಲಹೆ
Last Updated 23 ಅಕ್ಟೋಬರ್ 2018, 15:20 IST
ಅಕ್ಷರ ಗಾತ್ರ

ಚಾಮರಾಜನಗರ:‘ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದ ಗಡಿ–ಕಟ್ಟೆ ಯಜಮಾನರು ಮೌಢ್ಯಕ್ಕೆ ಒಳಗಾಗಿ ಯಾರಿಗೂ ತಿಳಿಯದಂತೆಬಾಲ್ಯ ವಿವಾಹ ಪದ್ಧತಿಯನ್ನು ಆಚರಿಸುತ್ತಿರುವುದು ವಿಷಾದನೀಯ ಸಂಗತಿ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮಂಗಳವಾರ ಅಭಿಪ್ರಾಯಪಟ್ಟರು.

ಪಟ್ಟಣದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದಭಗೀರಥಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉಪ್ಪಾರ ಸಮುದಾಯದಲ್ಲೇ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದನ್ನು ತಡೆಯದಿದ್ದರೆಸಮುದಾಯದ ಪ್ರಗತಿಗೆ ಪೆಟ್ಟು ಬೀಳುತ್ತದೆ. ಮೌಢ್ಯ, ಕಂದಾಚಾರ ಬಿಟ್ಟು ಸಮುದಾಯದವರು ತಮ್ಮ ಮಕ್ಕಳಶಿಕ್ಷಣಕ್ಕೆ ಆದ್ಯತೆ ನೀಡಿದರೆ ಅಭಿವೃದ್ಧಿ ಕಾಣಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಗೆ ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನಿಗೆ ಮದುವೆ ಮಾಡಲು ಗಡಿ–ಕಟ್ಟೆ ಯಜಮಾನರು ಅನುಮತಿ ನೀಡಬಾರದು’ ಎಂದು ಅವರು ಹೇಳಿದರು.

ಎಸ್‌ಟಿ ವರ್ಗಕ್ಕೆ ಸೇರ್ಪಡೆ: ‘ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗಿದೆ. ಈಗಾಗಲೇ ನಡೆಸಿರುವ ಜಾತಿಗಣತಿ ವರದಿ ಹೊರಬಂದ ಬಳಿಕ ಎಸ್‌ಟಿ ವರ್ಗಕ್ಕೆ ಸೇರಿಸುವ ಪ್ರಯತ್ನ ನಡೆಯಬಹುದು’ ಎಂದರು.

ರಾಜಕೀಯ ಸ್ಥಾನಮಾನ: ಸಂಸದ ಆರ್.ಧ್ರುವನಾರಾಯಣ ಅವರು ಮಾತನಾಡಿ, ‘ಸರ್ಕಾರ ಹಾಗೂ ಸಮುದಾಯಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಸಮುದಾಯದ ಬೆಳವಣಿಗೆಗೆ ರಾಜಕೀಯ ಸ್ಥಾನಮಾನ ಕೂಡ ಮುಖ್ಯವಾಗುತ್ತದೆ. ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮುದಾದವರು ರಾಜಕೀಯವಾಗಿ ಹೆಚ್ಚು ಸ್ಥಾನಮಾನ ಹೊಂದಿಲ್ಲ.ಆದರೆ, ಈಗನಿಮ್ಮವರೇ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದಾರೆ. ಅವರಿಂದ ಹೆಚ್ಚಿನ ಸೌಲಭ್ಯಗಳನ್ನು ಸಮುದಾಯದವರು ಭರಿಸಿಕೊಳ್ಳಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಕಾರ್ಯದಲ್ಲಿ ನಿರತರಾಗಬೇಕು’ ಎಂದರು.

‘ಹಿಂದುಳಿದ ಸಮುದಾಯಗಳಿಗೆ ಹಿಂದಿನ ಸರ್ಕಾರ ಹೆಚ್ಚು ಅನುದಾನ ನೀಡಿದೆ. ಶೈಕ್ಷಣಿಕ, ಆರ್ಥಿಕವಾಗಿ ಹಾಗೂ ಭವನಗಳ ನಿರ್ಮಾಣಕ್ಕೂ ಹೆಚ್ಚು ಆದ್ಯತೆ ನೀಡಿದೆ. ಎಲ್ಲ ಸೌಲಭ್ಯಗಳನ್ನು ಸಮುದಾಯದವರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಎಣ್ಣೆ ಮಜ್ಜನ ಸೇವೆಗೆ ಅವಕಾಶ ಬೇಕು: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ.ಯೋಗೀಶ್ ಮಾತನಾಡಿ, ‘ ಮಹದೇಶ್ವರ ಬೆಟ್ಟದಲ್ಲಿ ಉಪ್ಪಾರ ಸಮುದಾಯಕ್ಕೆಎಣ್ಣೆ ಮಜ್ಜನಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದ್ದೆವು.ಆದರೆ, ಈವರೆಗೂ ಅನುಮತಿ ನೀಡಿಲ್ಲ. ಅಮಾವಾಸ್ಯೆ ದಿನದಂದು ನಡೆಸಲು ಅನುಮತಿ ನೀಡಬೇಕು. ಜೊತೆಗೆ ನಮ್ಮ ಸಮುದಾಯದ ಮಠ ನಿರ್ಮಾಣಕ್ಕೆ ಜಾಗ ಗುರುತಿಸಬೇಕು’ ಎಂದು ಹೇಳಿದರು.

ಮುಖ್ಯ ಭಾಷಣಕಾರರಾದ ಪ್ರೊ.ನೀ.ಗಿರಿಗೌಡ ಮಾತನಾಡಿ, ‘ರಾಜಕಾರಣಿಗಳು ಜಾತ್ಯತೀತರಾದರೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲುಸಾಧ್ಯ. ದಾರ್ಶನಿಕರ ಜಯಂತಿ ಆಚರಣೆಗೆ ಒಂದು ಮೌಲ್ಯವಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ್,ಶಶಿಕಲಾ, ಸದಾಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರು, ಮುಖಂಡರಾದ ಚಿಕ್ಕಮಾದೇವು, ಹನುಮಾನ್ ಶೆಟ್ಟಿ, ಮಂಗಲ ಶಿವಕುಮಾರ್, ಮಧುವನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ.ಹರೀಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಇದ್ದರು.

ಅದ್ಧೂರಿ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮೊದಲುಪಟ್ಟಣದ ಪ್ರವಾಸಿ ಮಂದಿರದಿಂದ ಭಗೀರಥ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಸಿ.ಪುಟ್ಟರಂಗ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೀರಗಾಸೆ, ನಂದಿಧ್ವಜ, ಹುಲಿ ವೇಷ, ದೇವರ ಸತ್ತಿಗೆ, ಸುರಪಾನಿ, ಹೆಣ್ಣು ಮಕ್ಕಳು ಪೂರ್ಣ ಕುಂಭ ಹೊತ್ತು ಮೆರವಣಿಗೆಗೆ ಮೆರಗು ತಂದರು. ಸಮುದಾಯದ ಜನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರವಾಸಿ ಮಂದಿರದಿಂದ ಗುಂಡ್ಲುಪೇಟೆ ವೃತ್ತದ ಮಾರ್ಗವಾಗಿ ಭುವನೇಶ್ವರಿ ವೃತ್ತ ನಂತರ ಮೆರವಣಿಗೆಯು ಪೇಟೆ ಪ್ರೈಮರಿ ಶಾಲೆಯ ಆವರಣ ಸೇರಿತು. ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಶಕ್ತಿ ಪ್ರದರ್ಶನ: ಭಗೀರಥ ಜಯಂತಿ ಕಾರ್ಯಕ್ರಮವು ಒಂದರ್ಥದಲ್ಲಿ ಪುಟ್ಟರಂಗಶೆಟ್ಟಿ ಅವರ ಶಕ್ತಿಪ್ರದರ್ಶನದ ಕಾರ್ಯಕ್ರಮವಾಯಿತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಚಾಮರಾಜನಗರ ಅಲ್ಲದೇ ಯಳಂದೂರು, ಕೊಳ್ಳೇಗಾಲ ತಾಲ್ಲೂಕಿನಿಂದಲೂ ಉಪ್ಪಾರ ಸಮುದಾಯದವರು ಬಂದಿದ್ದರು.ಕಾರ್ಯಕ್ರಮದಲ್ಲಿ ಪುಟ್ಟರಂಗಶೆಟ್ಟಿ ಅವರ ಹೆಸರು ಹೇಳುವಾಗಲೆಲ್ಲ, ಅವರ ಅಭಿಮಾನಿಗಳು ಶಿಳ್ಳೆ ಹಾಕಿ ಚಪ್ಪಾಳೆ ಹೊಡೆಯುತ್ತಿದ್ದರು. ಸಂಸದ ಆರ್‌.ಧ್ರುವನಾರಾಯಣ ಅವರಿಗೂ ಚಪ್ಪಾಳೆಯ ಸುರಿಮಳೆ ಬಿದ್ದಿತು.

‘ಹೆಂಡ, ಸಾರಾಯಿಒಮ್ಮೆಗೆ ಮಾತ್ರ ಸೀಮಿತಗೊಳಿಸಿ’

‘ಉಪ್ಪಾರ ಮೌಢ್ಯ, ಕಂದಾಚಾರ ಆಚರಣೆಗಳು ತುಂಬಿ ತುಳುಕುತ್ತಿವೆ. ಜನರು ಕುಡಿತಕ್ಕೆ ದಾಸ್ಯರಾಗುತ್ತಿದ್ದಾರೆ.ರಾಮನವಮಿಯಂದು ಮಾತ್ರವೇ ಸಂತೋಷದ ಆಚರಣೆಗೆ ಹನುಮಂತ ರಾಮರಸ ಸೇವಿಸಿದ್ದು. ಆದರೆ, ನೀವು ಪ್ರತಿದಿನ ದುಡಿದ ಹಣವನ್ನು ಇದಕ್ಕೆ ಸುರಿದರೆಕುಟುಂಬ ಬೀದಿಗೆ ಬರುತ್ತದೆ. ಸಮುದಾಯದ ಅಭಿವೃದ್ಧಿಗೂಪೆಟ್ಟು. ಆದ್ದರಿಂದ, ವರ್ಷಕ್ಕೆ ಒಮ್ಮೆ ಮಾತ್ರವೇ ಹೆಂಡ–ಸಾರಾಯಿ ಸೇವನೆಯನ್ನು ಸೀಮಿತಗೊಳಿಸಿಕೊಳ್ಳಿ’ ಎಂದು ಧ್ರುವನಾರಾಯಣ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT