ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮನ ಅಮಾವಾಸ್ಯೆ | ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ; ಸಾವಿರಾರು ಭಕ್ತರ ಭೇಟಿ

Published 17 ಜುಲೈ 2023, 12:28 IST
Last Updated 17 ಜುಲೈ 2023, 12:28 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಭೀಮನ ಅಮಾವಾಸ್ಯೆಯ ಅಂಗವಾಗಿ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು. 

ಸೋಮವಾರ ಮುಂಜಾನೆ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ 6 ಗಂಟೆ ತನಕ ಮಹದೇಶ್ವರಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಗಂಧಾಭಿಷೇಕ, ಕ್ಷೀರಾಭಿಷೇಕವನ್ನು ನೆರವೇರಿಸಿ ಮಹಾಮಂಗಳರಾರತಿ ಬೆಳಗಲಾಯಿತು. ನಂತರ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು. 

ವಿವಿಧ ಸೇವೆ ಸಲ್ಲಿಕೆ: ಜಿಲ್ಲೆ, ಹೊರ ಜಿಲ್ಲೆಗಳು ಮತ್ತು ತಮಿಳುನಾಡಿನಿಂದ ಬಂದಿದ್ದ ಸಾವಿರಾರು ಭಕ್ತರು ಅಂತರಗಂಗೆಯಲ್ಲಿ ಮಿಂದು, ದೇವಾಲಯದ ಸುತ್ತ ಉರುಳುಸೇವೆ, ಪಂಜಿನ ಸೇವೆ, ಬೆಳ್ಳಿ ತೇರು, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. 

ಭೀಮನ ಅಮಾವಾಸ್ಯೆ ಅಂಗವಾಗಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ಸರತಿ ಸಾಲು, ನೆರಳಿಗೆ ಶಾಮಿಯಾನ ಅಳವಡಿಕೆ, ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. 

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದುದರಿಂದ ಲಕ್ಷಕ್ಕೂ ಅಧಿಕ ಲಾಡು ತಯಾರಿಸಲಾಗಿತ್ತು. 

ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ ಅವರು ವಿವಿಧ ವಿಭಾಗಗಳಿಗೆ ಖುದ್ದು ಪರಿಶೀಲನೆ ನಡೆಸಿ, ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಿದರು.

ವಿಶೇಷ ಅಲಂಕಾರ: ಅಮಾವಾಸ್ಯೆ ‍ಪ್ರಯುಕ್ತ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಭಾಗದಲ್ಲೂ ಹಣ್ಣು, ತರಕಾರಿ, ಪುಷ್ಪಗಳಿಂದ ಶೃಂಗರಿಸಲಾಗಿತ್ತು. ರಾಜಗೋಪುರದ ಮುಂಭಾಗದಲ್ಲಿ ಹೂವುಗಳಿಂದ ತಯಾರಿಸಿದ ಶಿವಲಿಂಗ ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT