ಮಂಗಳವಾರ, ಏಪ್ರಿಲ್ 13, 2021
30 °C
ಭೂಮಾಪನಾ ಇಲಾಖೆ ಆಯುಕ್ತರಿಂದ ಜಿಲ್ಲಾಧಿಕಾರಿಗೆ ಅಭಿನಂದನಾ ಪತ್ರ

‘ಭೂಮಿ ಯೋಜನೆ’: ಚಾಮರಾಜನಗರ ಜಿಲ್ಲೆಗೆ ಎರಡನೇ ಸ್ಥಾನ

ಸೂರ್ಯನಾರಾಯಣ ವಿ, Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕಂದಾಯ ಇಲಾಖೆಯ ಭೂಮಿ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಗಡಿ ಜಿಲ್ಲೆಯು ಫೆಬ್ರುವರಿ ತಿಂಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದೆ. 

ಕೆಲವು ತಿಂಗಳ ಹಿಂದಿನವರೆಗೂ ಜಿಲ್ಲೆಯು 26, 27ನೇ ಸ್ಥಾನದಲ್ಲಿದ್ದು, 2021ರ ಆರಂಭದಿಂದ ಗಣನೀಯವಾಗಿ ಸ್ಥಾನವನ್ನು ಹೆಚ್ಚಿಕೊಂಡಿದೆ. ಈ ಸಾಧನೆಯನ್ನು ಪ್ರಶಂಸಿಸಿ ಭೂಮಿ ಯೋಜನೆಯ ಉಸ್ತುವಾರಿ ಹೊತ್ತಿರುವ ಭೂಮಾಪನಾ ಇಲಾಖೆಯ ಆಯುಕ್ತ ವೈ.ಎಸ್‌.ಪಾಟೀಲ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರಿಗೆ ಅಭಿನಂದನಾ ಪತ್ರ ಕಳುಹಿಸಿದ್ದಾರೆ. 

ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಭೂಮಿ ತಂತ್ರಾಂಶದ ಮೂಲಕ ನೀಡಲಾಗುತ್ತಿದೆ. ಸಾರ್ವಜನಿಕರಿಂದ ಬಂದ ಅರ್ಜಿಗಳ ಪರಿಣಾಮಕಾರಿ ವಿಲೇವಾರಿಗೆ ಅನುಗುಣವಾಗಿ ಸಿಗ್ಮಾ ಮೌಲ್ಯಗಳನ್ನು ನೀಡಲಾಗುತ್ತಿದ್ದು, ಇದರ ಅಡಿಯಲ್ಲಿ ಜಿಲ್ಲೆಯಗಳ ಸ್ಥಾನವನ್ನು ನಿರ್ಧರಿಸಲಾಗುತ್ತದೆ. ನಿಗದಿತ ಅವಧಿಗಿಂತಲೂ ಮೊದಲೇ ವಿಲೇವಾರಿಯಾದ ಅರ್ಜಿಗಳಿಗೆ ಅನುಗುಣವಾಗಿ ಪಡೆಯುವ ಸ್ಥಾನಗಳಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. 

ಫೆಬ್ರುವರಿ ತಿಂಗಳ ಸ್ಥಾನಮಾನಗಳ ಲೆಕ್ಕಾಚಾರದಲ್ಲಿ ಚಾಮರಾಜನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಉಡುಪಿ ಮೊದಲ ಸ್ಥಾನದಲ್ಲಿದೆ. ಬಾಗಲಕೋಟೆ ಮೂರನೇ, ಯಾದಗಿರಿ ನಾಲ್ಕನೇ ಹಾಗೂ ಮೈಸೂರು ಜಿಲ್ಲೆ ಐದನೇ ಸ್ಥಾನ ಗಳಿಸಿವೆ.  ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿದೆ. 

ಫೆಬ್ರುವರಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರಿಂದ 2,915 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಇವುಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿರುವುದರಿಂದ ಜಿಲ್ಲೆಯು 2.12 ಸಿಗ್ಮಾ ಮೌಲ್ಯಗಳನ್ನು ಪಡೆದು ಈ ಸಾಧನೆ ಮಾಡಿದೆ. 

ಎಂಟು ಮಾನದಂಡಗಳು: ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಎಂಟು ಸೇವೆಗಳ ಮಾನದಂಡಗಳ ಆಧಾರದಲ್ಲಿ ರ‍್ಯಾಂಕ್‌ ನಿರ್ಧರಿಸಲಾಗುತ್ತದೆ. 

‘ನೋಟಿಸ್‌ ನೀಡದೆ ಮಾಡುವ ಸೇವೆಗಳು (ವಿದ್‌ಔಟ್‌ ನೋಟಿಸ್‌–ಪೋಡಿ, ಭೂ ಪರಿವರ್ತನೆ ಇತ್ಯಾದಿ ಸೇವೆಗಳು), ನೋಟಿಸ್‌ ನೀಡಿ ಮಾಡುವ ಸೇವೆಗಳು (ವಿದ್‌ ನೋಟಿಸ್‌– ಖಾತೆ ಬದಲಾವಣೆ, ಪಾಲು, ಉಯಿಲು, ಪೌತಿ ಖಾತೆ, ಹಕ್ಕು ಬಿಡುಗಡೆ ಇತ್ಯಾದಿ), ತಕರಾರು ಪ್ರಕರಣಗಳು, ಲ್ಯಾಂಡ್‌ ಕನ್ವರ್ಷನ್‌ ಅಫಿಡವಿಟ್‌, ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ವಿಲೇವಾರಿ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ವಿಲೇವಾರಿ, ಆರ್‌ಟಿಸಿ ಕಲಂ (3) ಮತ್ತು (9) ಹಾಗೂ ಪೈಕಿ ಆರ್‌ಟಿಸಿ... ಈ ಎಂಟು ಮಾನದಂಡಗಳನ್ನು ಆಧರಿಸಿ ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

’ಇವುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಿದಷ್ಟೂ ಉತ್ತಮ ಅಂಕಗಳು ಲಭಿಸುತ್ತವೆ’ ಎಂದು ಜಿಲ್ಲಾ ಭೂಮಿ ಸಮಾಲೋಚಕ ಲೋಹಿತ್‌ ಕುಮಾರ್‌ ಅವರು ಮಾಹಿತಿ ನೀಡಿದರು. 

‘ಅಧಿಕಾರಿ, ಸಿಬ್ಬಂದಿಯಿಂದ ಉತ್ತಮ ಕೆಲಸ’

ಜಿಲ್ಲೆ ಉತ್ತಮ ಸಾಧನೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಭೂಮಿ ಯೋಜನೆ ಅನುಷ್ಠಾನದಲ್ಲಿ ನಮ್ಮ ಜಿಲ್ಲೆ 26–27ನೇ ಸ್ಥಾನದಲ್ಲಿತ್ತು. ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ನಡೆಸಿದ ಜಿಲ್ಲಾಧಿಕಾರಿಗಳ ಸಭೆ ಮುಗಿಸಿ ಬಂದ ನಂತರ ಕಂದಾಯ ಸೇವೆಗಳನ್ನು ಇನ್ನಷ್ಟು ತ್ವರಿತಗೊಳಿಸಬೇಕು ಎಂಬ ತೀರ್ಮಾನಕ್ಕೆ ಬಂದೆ. ನಿರಂತರವಾಗಿ ತಹಶೀಲ್ದಾರ್‌ ಹಾಗೂ ಅಧಿಕಾರಿಗಳ ಸಭೆ ನಡೆಸಿದೆ. ಯಾವುದೇ ಕಾರಣಕ್ಕೂ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಅದರ ಪ್ರಯತ್ನವಾಗಿ ಈ ಸಾಧನೆ ಮೂಡಿ ಬಂದಿದೆ’ ಎಂದು ಹೇಳಿದರು. 

‘ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ಜಿಲ್ಲಾಧಿಕಾರಿಗಳ ನ್ಯಾಯಾಲಯಗಳ ಮುಂದೆ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಕ್ರಮ ವಹಿಸಲಾಗಿದೆ. ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ.  ಸರ್ಕಾರ ಅದನ್ನು ಗುರುತಿಸಿದೆ. ಈ ಸಾಧನೆಯನ್ನು ಹೀಗೆಯೇ ಮುಂದುವರಿಸಬೇಕಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇ–ಕ್ಷಣ ಪ್ರಮಾಣಪತ್ರ: 3ನೇ ಸ್ಥಾನ

ಭೂಮಿ ಮಾತ್ರ ಅಲ್ಲ, ‘ಇ–ಕ್ಷಣ’ ಪ್ರಮಾಣ ಪತ್ರ ಸೇವೆಗಳ ಅನುಷ್ಠಾನದಲ್ಲಿಯೂ ಫೆಬ್ರುವರಿ ತಿಂಗಳಲ್ಲಿ ಜಿಲ್ಲೆ ಮೂರನೇ ಸ್ಥಾನ ಗಳಿಸಿದೆ. 

ಈ ಸಾಧನೆಗಾಗಿ ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕ ಗಂಗೂಬಾಯಿ ರಮೇಶ್‌ ಮಾನಕರ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಅಭಿನಂದನಾ ಪತ್ರ ಕಳುಹಿಸಿದ್ದಾರೆ. 

ಇ-ಕ್ಷಣ ತಂತ್ರಾಂಶದಡಿ ಜಾತಿ, ಆದಾಯ, ವಾಸಸ್ಥಳ ದೃಢೀಕರಣ ಪತ್ರಗಳನ್ನು ತಕ್ಷಣವೇ ನೀಡಲಾಗುತ್ತದೆ. ಫೆಬ್ರುವರಿ ತಿಂಗಳಲ್ಲಿ ಶೇ 55ರಷ್ಟು ಸಾಧನೆ ಮಾಡಿ, ಜಿಲ್ಲೆ ಮೂರನೇ ಸ್ಥಾನ ಗಳಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು