ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳಿಪುರ: ಬಿಜೆಪಿ, ಬಿಎಸ್‌ಪಿ ಮುಖಂಡರು ಕಾಂಗ್ರೆಸ್‌ಗೆ

ಕಾಂಗ್ರೆಸ್‌ನಿಂದ ಮಾತ್ರ ಸಾಮಾಜಿಕ ನ್ಯಾಯ, ಅಭಿವೃದ್ಧಿ ಸಾಧ್ಯ: ಧ್ರುವನಾರಾಯಣ
Last Updated 9 ಡಿಸೆಂಬರ್ 2020, 12:02 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹೆಬ್ಬಸೂರು ಗ್ರಾಮ ಪಂಚಾಯಿತಿಗೆ ಸೇರಿದ ಅರಳಿಪುರ ಗ್ರಾಮದ ಬಿಜೆಪಿ ಹಾಗೂ ಬಿಎಸ್‌ಪಿಯ ಹಲವು ಮುಖಂಡರು ಕಾಂಗ್ರೆಸ್‌ಗೆ ಸೇರಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ವಸಂತ ಗೋವಿಂದರಾಜು, ಮಹೇಶ್‌ಕುಮಾರ್, ಪುಟ್ಟಸ್ವಾಮಿ, ಮಹಾಲಿಂಗ, ಕಿರಣ್, ಮನುಮೋಹನ್, ರಾಘವೇಂದ್ರ, ಸೇರಿದಂತೆ ಹಲವರು ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಧ್ರುವನಾರಾಯಣ ಅವರು, ‘ದೇಶದ ಅಭಿವೃದ್ಧಿ ಬಯಸಿ ಸ್ವಾತಂತ್ರ್ಯ ಪೂರ್ವದಲ್ಲಿ ಉದಯವಾದ ಪಕ್ಷ ಕಾಂಗ್ರೆಸ್. ಸಾಮಾಜಿಕ ನ್ಯಾಯದ ಅಡಿಯಲ್ಲಿ ಪರಿಶಿಷ್ಟ ಜಾತಿಯವರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಶೋಷಿತ ಸಮಾಜಗಳ ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಾ ಬಂದಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ದೇಶದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿ ಮಾಡಿದ್ದರಿಂದ ದೆಹಲಿಯಿಂದ ಹಳ್ಳಿಗೆ ನೇರವಾಗಿ ಅನುದಾನ ಹಾಗು ಯೋಜನೆಗಳು ಜಾರಿಯಾದವು. ‌ಪಕ್ಷದ ನಾಯಕರ ದೂರದರ್ಶಿತ್ವ ರಾಜಕಾರಣ ಅಭಿವೃದ್ಧಿಗೆ ಪೂರಕವಾಗಿದೆ’ ಎಂದರು.

‘ಬಿಜೆಪಿ ಬಡವರು ಹಾಗೂ ರೈತರ ವಿರೋಧಿ ಪಕ್ಷ. ಅದನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಎಲ್ಲರಿಗೂ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಗ್ರಾಮ ಪಂಚಾಯಿತಿಗಳನ್ನು ಕೈ ವಶ ಮಾಡುವ ಮೂಲಕ ಶಾಸಕ ಪುಟ್ಟರಂಗ ಶೆಟ್ಟಿ ಅವರಿಗೆ ಶಕ್ತಿ ತುಂಬಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿ, ‘ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರಿಗೆ ಅಭಿನಂದನೆಗಳು. ಗ್ರಾ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್, ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಎನ್.ಪಿ. ನಾಗಾರ್ಜುನ ಪೃಥ್ವಿ, ಮುಖಂಡರಾದ ಎಎಚ್‌‌ಎನ್‌ಖಾನ್‌, ಹೆಬ್ಬಸೂರು ರಂಗಸ್ವಾಮಿ, ವೀರಭದ್ರಸ್ವಾಮಿ, ಉಮೇಶ್,ಬಸವಣ್ಣ, ಮುದ್ದಯ್ಯ, ಚಿನ್ನಸ್ವಾಮಿ, ಶೇಖರ್ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT