ಗುಂಡ್ಲುಪೇಟೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ರೈತರು ಕಳೆದ 11 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಳೆ ನಾಶ, ಬೆಳೆ ವಿಮೆ ಮತ್ತು ಕೆರೆಗಳಿಗೆ ನೀರು ತುಂಬಿಸುವ ನ್ಯಾಯಯುತ ಬೇಡಿಕೆ ಮುಂದಿಟ್ಟು ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೂ ಸ್ಪಂದಿಸದ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯ ಧೋರಣೆಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ತಾಲ್ಲೂಕಿನಲ್ಲಿ ಮಳೆ ಕಾರಣ ಈರುಳ್ಳಿ, ಬಾಳೆ, ಸೂರ್ಯಕಾಂತಿ ಸೇರಿ ಬಹುತೇಕ ಎಲ್ಲಾ ಬೆಳೆಗಳನ್ನು ಬೆಳೆದ ರೈತರು ಈಗ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಕಂದಾಯ ಸಚಿವರೇ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಷ್ಟ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳಲ್ಲಿ ಇದಕ್ಕಾಗಿ ಹಣವಿದ್ದರೆ ನೀಡಿ ಎಂದು ಒತ್ತಾಯಿಸಿದರು. ಬಾಳೆ ಬೆಳೆ ನಷ್ಟ ಪರಿಹಾರ ಬಂದಿಲ್ಲ. ಬರ ಪರಿಹಾರ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ನೆರೆಯಿಂದ ಉಂಟಾದ ನಷ್ಟಕ್ಕೆ ಎಕರೆಗೆ ಎನ್‍ಡಿಆರ್‌ಎಫ್ ಮತ್ತು ಎಸ್‍ಡಿಆರ್‌ಎಫ್ ಮಾರ್ಗಸೂಚಿ ಮೀರಿ ಗರಿಷ್ಠ ₹ 25 ಸಾವಿರ ಕೊಡಲಾಗಿತ್ತು ಎಂದು ತಿಳಿಸಿದರು.
ಕೆರೆಗಳಿಗೆ ನೀರು ತುಂಬಿಸಲು ಯಾರ ಒತ್ತಡ ಬೇಕಿಲ್ಲ. ಆದರೆ ಈಗಲೂ ಎರಡನೇ ಹಂತಕ್ಕೆ ನೀರು ಹರಿಸಲಾಗುತ್ತಿದೆ ಎಂದರೆ ಅಧಿಕಾರಿಗಳು ನಿಯಮ ಪಾಲಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಜೂನ್‌ಗೆ ನೀರು ಬಿಡಬೇಕಿದ್ದರೂ, ಈಗಾಗಲೇ ಮೂರ್ನಾಲ್ಕು ತಿಂಗಳು ಮುಗಿದಿದೆ. ಮಳೆ ಆಗಿದೆ. ತಮಿಳುನಾಡಿಗೂ ನೀರು ಹರಿದಿದೆ. ಆದರೂ ಕೆರೆಗಳಿಗೆ ನೀರಿಲ್ಲ. ಇದರಿಂದ ಶಾಸಕರಿಗೆ ರೈತರಿಗೆ ಆಗುವ ಅನುಕೂಲ ಗೊತ್ತಿಲ್ಲ ಎಂದಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ರೈತ ಸಂಘಟನೆಯವರಿಗೆ ನೀಡಿರುವ ಲಿಖಿತ ಭರವಸೆಯಂತೆ ನ.1 ನೀರು ಬಿಡದಿದ್ದರೆ ನಾವು ಧರಣಿಗೆ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು.
ರೈತ ಸಂಘಟನೆ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಜಿಲ್ಲೆಯಲ್ಲಿ ಬರ ಉಂಟಾಗಿರುವುದನ್ನು ಸರ್ಕಾರವೇ ಘೋಷಿಸಿದೆ. ಸೂರ್ಯಕಾಂತಿ ಇಳುವರಿ ಸಂಪೂರ್ಣ ಕುಸಿದಿರುವ ಬಗ್ಗೆ ಬೆಂಬಲ ಬೆಲೆ ಯೋಜನೆಯ ಖರೀದಿ ಕೇಂದ್ರದವರಿಂದಲೇ ಮಾಹಿತಿ ಪಡೆಯಬಹುದಾಗಿದೆ. ಕೆರೆಗಳಿಗೆ ನೀರು ಬಿಡುವ ವಿಷಯವೂ ಸೇರಿ ನಾವು ನೀಡಿದ ಗಡುವು ಮೀರಿದ ಕಾರಣ ಧರಣಿ ಕೈಗೊಂಡಿದ್ದೇವೆ.ಹೀಗಿದ್ದರೂ ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ಅಧಿಕಾರಿಗಳನ್ನು ಕರೆತರದೇ ಕಾಟಚಾರಕ್ಕೆ ಭೇಟಿ ನೀಡಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಿ.ಮಹದೇವ ಪ್ರಸಾದ್, ಹಿರಿಯ ಮುಖಂಡ ಎಲ್.ಸುರೇಶ್, ರೈತ ಸಂಘಟನೆಯ ಮಲ್ಲಯ್ಯನಪುರ ಶಿವಣ್ಣ, ಯುವ ಮುಖಂಡರಾದ ದಿನೇಶ್, ಮಾಡ್ರಹಳ್ಳಿ ನಾಗೇಂದ್ರ, ಎಸ್.ಸಿ.ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.