ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಇಂದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿರುವ ಬಿಜೆಪಿ ಮುಖಂಡ ಆರ್. ಬಾಲರಾಜು

Published 12 ಏಪ್ರಿಲ್ 2024, 5:06 IST
Last Updated 12 ಏಪ್ರಿಲ್ 2024, 5:06 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್‌.ಬಾಲರಾಜು ಅವರು ಶುಕ್ರವಾರ (ಏಪ್ರಿಲ್‌ 12) ಕೊಳ್ಳೇಗಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಟು ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಪಕ್ಷಕ್ಕಾಗಿ ದುಡಿದಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಚಂದಕವಾಡಿ ಭಾಗದ ಜನರ ಸೇವೆ ಮಾಡಿದ್ದೇನೆ. 2019ರ ಲೋಕಸಭಾ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರ ಪರವಾಗಿಯೂ ಕೆಲಸ ಮಾಡಿದ್ದೆ’ ಎಂದರು. 

‘ಆದರೆ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಯಿತು. ಸಭೆ ಸಮಾರಂಭ, ಪ್ರಮುಖ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನೂ ಆಕಾಂಕ್ಷಿಯಾಗಿದ್ದೆ. ಪೂರ್ವಭಾವಿ ಸಭೆಗೆ ನನ್ನನ್ನು ಕರೆದಿರಲಿಲ್ಲ. ಪಕ್ಷದಲ್ಲಿನ ಹಿರಿಯರಿಗೆ ಟಿಕೆಟ್‌ ನೀಡುವುದು ಬಿಟ್ಟು ಇತ್ತೀಚೆಗೆ ಸೇರ್ಪಡೆಗೊಂಡವರಿಗೆ ಮಣೆ ಹಾಕಲಾಗಿದೆ’ ಎಂದು ದೂರಿದರು. 

‘ಪಕ್ಷದಲ್ಲಿ ಸಾಮರಸ್ಯದ ಕೊರತೆ ಇದೆ. ಸಮಾಜ ಒಡೆಯುವ ಧರ್ಮದ ಆಧಾರದಲ್ಲಿ ವಿಭಜನೆಯ ಸಿದ್ಧಾಂತದಲ್ಲಿ ಕೆಲಸ ಮಾಡಲಾಗುತ್ತಿದೆ. ಇದರಿಂದೆಲ್ಲ ಬೇಸತ್ತು, ಪಕ್ಷ ತ್ಯಜಿಸಲು ತೀರ್ಮಾನಿಸಿದ್ದೇನೆ. ಕ್ಷೇತ್ರದವರು ಹಾಗೂ ಬೆಂಬಲಿಗರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದಾರೆ’ ಎಂದರು. 

ಕೊಳ್ಳೇಗಾಲದಲ್ಲಿ ಶುಕ್ರವಾರ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ನನ್ನೊಂದಿಗೆ 50 ಕ್ಕೂ ಹೆಚ್ಚು ಮುಖಂಡರು, 50ಕ್ಕೂ ಹೆಚ್ಚು ಯುವಕರು ಸೇರ್ಪಡೆಗೊಳ್ಳಲಿದ್ದಾರೆ’ ಎಂದು ಬಾಲರಾಜು ತಿಳಿಸಿದರು. 

ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಮುಖಂಡರಾದ ಅಸ್ಲಾಂ ಷರೀಫ್‌, ರಾಜಶೇಖರ್‌, ಶಂಕರ್‌, ಮೂರ್ತಿ, ಶಿವಕುಮಾರ್‌, ಮರಿಸ್ವಾಮಿ ಇದ್ದರು.

ಬಾಗಳಿ ರೇವಣ್ಣ
ಬಾಗಳಿ ರೇವಣ್ಣ
ಜೆಡಿಎಸ್‌ನ ಬಾಗಳಿ ರೇವಣ್ಣ ಕಾಂಗ್ರೆಸ್‌ಗೆ ಇಂದು
ಚಾಮರಾಜನಗರ: ಜೆಡಿಎಸ್‌ ರಾಜ್ಯ ಕಾರ್ಯದರ್ಶಿಯಾಗಿದ್ದ ಬಾಗಳಿ ರೇವಣ್ಣ ಅವರು ಪಕ್ಷ ತೊರೆಯಲು ತೀರ್ಮಾನಿಸಿದ್ದು ಕೊಳ್ಳೇಗಾಲದಲ್ಲಿ ಶುಕ್ರವಾರ ಸಿ.ಎಂ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಲಿದ್ದಾರೆ.  ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಟಿಕೆಟ್‌ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಯಲ್ಲಿ ಟಿಕೆಟ್‌ ಕೈತಪ್ಪಿತ್ತು. ಬಿಜೆಪಿಯಿಂದ ಬಂದಿದ್ದ ಆಲೂರು ಮಲ್ಲುಗೆ ಟಿಕೆಟ್‌ ನೀಡಲಾಗಿತ್ತು’ ಎಂದರು.  ‘ಇದರಿಂದ ನನಗೆ ತುಂಬಾ ನೋವಾಯಿತು. ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಪಕ್ಷದಲ್ಲಿ ನನಗೆ ಅನ್ಯಾಯವಾಗಿದೆ. ಜಿಲ್ಲಾ ಅಧ್ಯಕ್ಷ ಹನೂರು ಶಾಸಕ ಎಂ.ಆರ್‌.ಮಂಜುನಾಥ್‌ ಅವರಿಂದಾಗಿ ನನಗೆ ಟಿಕೆಟ್‌ ತಪ್ಪಿತ್ತು.  ಈಗ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೋಮುವಾದಿ ಬಿಜೆಪಿಯ ಜೊತೆ ಕೈಜೋಡಿಸಿದೆ. ಹಾಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಪತ್ರವನ್ನು ಶುಕ್ರವಾರ ಕಳುಹಿಸುವೆ’ ಎಂದರು.  ‘ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮತ್ತು ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದೇನೆ. ಸಚಿವರಾದ ಮಹದೇವಪ್ಪ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಯಾವುದೇ ಷರತ್ತು ಹಾಕದೆ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ’ ಎಂದು ರೇವಣ್ಣ ಹೇಳಿದರು.  ಮುಖಂಡರಾದ ಪುಟ್ಟಸ್ವಾಮಿ ವರದರಾಜು ಸಿದ್ದಯ್ಯನಪುರ ಧನಂಜಯ ಸಿದ್ದರಾಜು ರೈತ ಮುಖಂಡ ಮಹೇಶ್ ಶ್ರೀಕಂಠ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT