ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಐತಿಹಾಸಿಕ ಗೆಲುವಿಗೆ ಶ್ರಮಿಸಿ: ಫಣೀಶ್‌

Published 16 ಫೆಬ್ರುವರಿ 2024, 2:35 IST
Last Updated 16 ಫೆಬ್ರುವರಿ 2024, 2:35 IST
ಅಕ್ಷರ ಗಾತ್ರ

ಚಾಮರಾಜನಗರ: ‘ನಮ್ಮ ಮುಂದೆ ಐತಿಹಾಸಿಕ ಚುನಾವಣೆ ಇದೆ. ಇದರಲ್ಲಿ ಬಿಜೆಪಿಯ ಗೆಲುವು ಹೇಗಿರಬೇಕು ಎಂದರೆ, ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರಿಗೂ ಇದರ ದಾಖಲೆಯನ್ನು ಮುರಿಯಲು ಸಾಧ್ಯವಾಗಬಾರದು. ಅಂತಹ ಐತಿಹಾಸಿಕ ಗೆಲುವು ಸಾಧಿಸಲು  ಕಾರ್ಯಕರ್ತರು ಕಟಿಬದ್ಧರಾಗಬೇಕು’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಭಾರಿ ಎಸ್.ವಿ.ಫಣೀಶ್ ಗುರುವಾರ ಹೇಳಿದರು. 

ನಗರದ ಬಿಜೆಪಿ ಜಿಲ್ಲಾ ಘಟಕದಲ್ಲಿ ಲೋಕಸಭಾ ಚುನಾವಣೆ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೂರನೇ ಬಾರಿ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಅಭಿಪ್ರಾಯ ಜನಮಾನಸದಲ್ಲಿದೆ. ಮೂರನೇ ಬಾರಿ ಅಧಿಕಾರಕ್ಕೆ ಬಂದಾಗ ಮುಂದಿನ 100 ವರ್ಷಗಳ ಅವಧಿಯ ದೇಶದ ಭವಿಷ್ಯ ಭದ್ರ ಬುನಾದಿ ಹಾಕುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಮೋದಿಯವರು ಘೋಷಿಸಿದ್ದಾರೆ. ದೇಶದ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಕಾರ್ಯಕರ್ತರು ಮೂರು ತಿಂಗಳ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಬೇಕು’ ಎಂದರು. 

‘ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಲಾಗುವುದು, ರಾಮಮಂದಿರ ನಿರ್ಮಿಸಲಾಗುವುದು ಎಂದು ಹಿಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ಘೊಷಿಸಿದ್ದೆವು. ಅದರಂತೆ, ಸರ್ಕಾರ ವಿಶೇಷ ಸ್ಥಾನಮಾನ ರದ್ದು ಮಾಡಿದೆ. ರಾಮಮಂದಿರವನ್ನು ಕೂಡ, ನ್ಯಾಯಾಲಯದ ತೀರ್ಪು ಬಂದ ಬಳಿಕ ಸಂವಿಧಾನ ಬದ್ಧವಾಗಿ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಮಾನ ನಾಗರಿಕ ಸಂಹಿತೆಯೂ ಜಾರಿಯಾಗಲಿದೆ’ ಎಂದು ಫಣೀಶ್‌ ಹೇಳಿದರು.

‘ಚಾಮರಾಜನಗರದಲ್ಲಿ ಪಕ್ಷವು ಮೊದಲ ಬಾರಿಗೆ 1991ರಲ್ಲಿ ಸ್ಪರ್ಧೆ ಮಾಡಿತ್ತು. ಆ ಬಳಿಕ ಒಂದು ಬಾರಿ ಬಿಟ್ಟರೆ, ಪ್ರತಿ ಬಾರಿಯೂ ಪಕ್ಷ ಸ್ಪರ್ಧಿಸಿದೆ. ಕಳೆದ ಚುನಾವಣೆಯಲ್ಲಿ ಪಕ್ಷದಿಂದ  ವಿ.ಶ್ರೀನಿವಾಸ ಪ್ರಸಾದ್‌ ಗೆದ್ದಿದ್ದಾರೆ. ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿರುವುದರಿಂದ ಈ ಬಾರಿ ಹೊಸಬರು ಸ್ಪರ್ಧಿಸಲಿದ್ದಾರೆ. ಯಾರೇ ಆದರೂ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು’ ಎಂದರು.  ಕಳೆದ ಚುನಾವಣೆ ಗೆದ್ದಿದ್ದೇವೆ.

ಮನೆ ಮನೆಗೆ ಯೋಜನೆ ತಲುಪಿಸಿ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್‌ ಮಾತನಾಡಿ, ‘ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ. ಅದಕ್ಕಾಗಿ ಹಗಲಿರುಳು ಶ್ರಮಿಸಬೇಕಿದೆ. ಮೋದಿ ಸರ್ಕಾರದ ಯೋಜನೆಗಳು, ಅದರಿಂದ ಆದ ಪ್ರಯೋಜನಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸವನ್ನು ಮಾಡಬೇಕು’ ಎಂದು ಕರೆ ನೀಡಿದರು. 

ಲೋಕಸಭಾ ಕ್ಷೇತ್ರದ ಸಂಚಾಲಕ ಪ್ರೊ. ಮಲ್ಲಿಕಾರ್ಜುನಪ್ಪ ಮಾತನಾಡಿ, ‘ಚಾಮರಾಜನಗರ ಕ್ಷೇತ್ರಕ್ಕೆ ಯಾರು ಬೇಕಾದರೂ ಅಭ್ಯರ್ಥಿಯಾಗಲಿ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನೆಲ್ಲ ಹೊರಗೆ ಇಟ್ಟು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದರು. 

ಚಾಮುಲ್ ಅಧ್ಯಕ್ಷ ನಾಗೇಂದ್ರ, ರಾಷ್ಟ್ರೀಯ ಒಬಿಸಿ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಮಾಜಿ ಶಾಸಕರಾದ ಎಸ್.ಬಾಲರಾಜು, ಹರ್ಷವರ್ಧನ್, ರಾಜ್ಯ ಕಾಂಪೋಸ್ಟ್‌ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮೈಸೂರು ಬಿಜೆಪಿ ಮುಖಂಡ ಅಶೋಕ್, ಕೃಷ್ಣಪ್ಪ ಗೌಡ, ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಎಸ್‌ಟಿ ಮೋರ್ಚಾದ ಮಲ್ಲೇಶ್ ನಾಯಕ್, ನಗರಸಭಾ ಸದಸ್ಯರಾದ ಆಶಾ, ಮಮತಾ ಇತರರು ಇದ್ದರು.

ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ ಮುಖಂಡರು ದೇಶ ವಿಭಜನೆಯ ಮಾತನಾಡುತ್ತಿದ್ದಾರೆ
ಸಿ.ಎಸ್‌.ನಿರಂಜನ್‌ಕುಮಾರ್‌ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ. ದೇಶ ವಿಭಜನೆಗೆ ಬಿಜೆಪಿ ಅವಕಾಶ ಕೊಡುವುದಿಲ್ಲ
ಎನ್‌.ಮಹೇಶ್‌ ಬಿಜೆಪಿ ರಾಜ್ಯ ಉಪಾಧ್ಯಕ್ಷ
‘ವಿಕಸಿತ ಭಾರತಕ್ಕಾಗಿ ಮೋದಿ ಗೆಲ್ಲಬೇಕು’
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌ ಮಾತನಾಡಿ ‘2047ಕ್ಕೆ ದೇಶ ಆತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಬೇಕು. ಆರ್ಥಿಕವಾಗಿ ನಂಬರ್‌ 1 ರಾಷ್ಟ್ರವಾಗಬೇಕು ಎಂಬುದು ಮೋದಿ ಕನಸು. ವಿಕಸಿತ ಭಾರತದ ಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಭಾರತವು ಜಗತ್ತಿಗೆ ಮಾರ್ಗದರ್ಶನ ಮಾಡುವಂತಹ ಮತ್ತು ಎಲ್ಲರಿಗೂ ಸಹಾಯ ಮಾಡುವಂತಹ ಮಟ್ಟಿಗೆ ಬೆಳೆಯಬೇಕು ಎಂದು ಘೋಷಣೆ ಮಾಡಿದ್ದಾರೆ’ ಎಂದರು.  ‘2014ರಲ್ಲಿ ಭಾರತವು ಜಗತ್ತಿನಲ್ಲಿ10ನೇ ಆರ್ಥಿಕ ಶಕ್ತಿಯಾಗಿತ್ತು. ಮೋದಿಯವರು 10 ವರ್ಷಗಳಲ್ಲಿ 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. 2028ಕ್ಕೆ ಮೂರನೇ ಸ್ಥಾನಕ್ಕೆ ತರುವ ಗ್ಯಾರಂಟಿಯನ್ನು ಮೋದಿ ನೀಡಿದ್ದಾರೆ. 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ಹೇಳಿದೆ. ಇದನ್ನೆಲ್ಲ ನೋಡುತ್ತಿದ್ದರೆ 2047ರ ಹೊತ್ತಿಗೆ ಭಾರತ ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವುದರಲ್ಲಿ ಅನುಮಾನ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT