ಮಂಗಳವಾರ, ಮಾರ್ಚ್ 28, 2023
23 °C
ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಹೇಳಿಕೆಗೆ ಮುಖಂಡರ ಖಂಡನೆ, ಎಚ್ಚರಿಕೆ

ಸಿದ್ದರಾಮಯ್ಯ ವಿರುದ್ಧ ಆಕ್ರೋಶ, ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿಯ ಎಸ್‌ಸಿ ಮೋರ್ಚಾ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. 

ಬಿಜೆಪಿ ಕಚೇರಿಯಲ್ಲಿ ಸೇರಿದ ಜಿಲ್ಲಾ ಬಿಜೆಪಿ ಘಟಕದ ಮುಖಂಡರು, ಎಸ್‌ಸಿ ಮೋರ್ಚಾ ಕಾರ್ಯಕರ್ತರು ಅಲ್ಲಿಂದ ವೀರಭದ್ರಸ್ವಾಮಿ ದೇವಸ್ಥಾನ ರಸ್ತೆ, ದೊಡ್ಡಂಗಡಿ ಬೀದಿ, ನಗರಸಭೆ, ಶ್ರೀಚಾಮರಾಜೇಶ್ವರ ಉದ್ಯಾನವನದ ಮೂಲಕ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಸುಟ್ಟು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ‘ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು. ದಲಿತರ ಸಹಕಾರ ಹಾಗೂ ಆಶೀರ್ವಾದದಿಂದ ಅವರು ರಾಜಕಾರಣ ಮಾಡುತ್ತಿದ್ದಾರೆ. 2006ರ ಉಪ ಚುನಾವಣೆಯಲ್ಲಿ ದಲಿತ ಬಂಧುಗಳು ಹಾಗೂ ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಮಲ್ಲಿಕಾರ್ಜುನಖರ್ಗೆ, ಛಲವಾದಿ ನಾರಾಯಣಸ್ವಾಮಿ, ನಮ್ಮೆಲ್ಲ ಪರಿಶ್ರಮದಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಇಲ್ಲದಿದ್ದರೆ ರಾಜ್ಯದಲ್ಲಿ ಅವರಿಗೆ ನೆಲೆ ಇರುತ್ತಿರಲಿಲ್ಲ’ ಎಂದು ಹೇಳಿದರು. 

‘ಸಿದ್ದರಾಮಯ್ಯ ಅವರು ತಮ್ಮ ಹೊಟ್ಟೆಪಾಡಿಗಾಗಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಹೋದರು. ಆದರೆ, ಅಲ್ಲಿ ದಲಿತ ಮುಖಂಡರನ್ನು ಸೋಲಿಸುತ್ತಲೇ ಬಂದರು. 2013ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್‌ ಅವರನ್ನು ಸೋಲಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ ಅವರ ಸೋಲಿಗೂ ಸಿದ್ದರಾಮಯ್ಯ ಅವರೇ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಮಾತನಾಡಿ, ‘ದಲಿತರು ಯಾರೂ ಹೊಟ್ಟೆಪಾಡಿಗಾಗಿ  ಬಿಜೆಪಿ ಸೇರಿಲ್ಲ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ಮಾಡಿದ ಮೋಸದಿಂದ ಬೇಸತ್ತು ಸ್ವಾಭಿಮಾನದಿಂದ ಬಿಜೆಪಿ ಸೇರಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಅವರು ದಲಿತರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ’ ಎಂದರು. 

ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ ಅವರು ಮಾತನಾಡಿ,  ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ಅತ್ಯಂತ ಕೇವಲವಾಗಿ ಮಾತನಾಡಿರುವುದು ಖಂಡನೀಯ’ ಎಂದರು. 

ಬಿಜೆಪಿ ಜಿಲ್ಲಾಧ್ಯ ಘಟಕದ ಅಧ್ಯಕ್ಷ  ಆರ್.ಸುಂದರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಮಾತನಾಡಿದರು. 

ಎಸ್‌ಸಿ ಮೋರ್ಚಾದ ಪ್ರಧಾನ‌ ಕಾರ್ಯದರ್ಶಿಗಳಾದ ಮೂಡ್ನಾಕೂಡ ಪ್ರಕಾಶ್, ಶ್ರೀನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷ ಬೇಡರಪುರ ಬಸವಣ್ಣ, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್, ಪ್ರಧಾನ ಕಾರ್ಯದರ್ಶಿ ಶಂಕರ್, ಯುವಮೋರ್ಚಾದ ಅಧ್ಯಕ್ಷ  ಪ್ರಣಯ್, ಮುತ್ತಿಗೆ ಮೂರ್ತಿ, ಜಿ.ಎನ್.ಲೋಕೇಶ್, ಕಬ್ಬಳ್ಳಿ ರೇವಣ್ಣ ಅಗರರಾಜು, ಅಯ್ಯನಪುರ ಶಿವಕುಮಾರ್, ಕೆರಹಳ್ಳಿ ಮಹದೇವಸ್ವಾಮಿ, ವೇಣುಗೋಪಾಲ್, ರಾಮಸಮುದ್ರ ಪರಶಿವಯ್ಯ, ಪದ್ಮ, ಬಾಲಸುಬ್ರಹ್ಮಣ್ಯ ಸರಸತ್ವಮ್ಮ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು