ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹30 ಕೋಟಿ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಎನ್‌.ಮಹೇಶ್‌

Published 2 ಏಪ್ರಿಲ್ 2024, 4:27 IST
Last Updated 2 ಏಪ್ರಿಲ್ 2024, 4:27 IST
ಅಕ್ಷರ ಗಾತ್ರ

ಚಾಮರಾಜನಗರ: ಇತ್ತೀಚೆಗೆ ಕೊಳ್ಳೇಗಾಲದಲ್ಲಿ ನಡೆದ  ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಮೇಲೆ ಭ್ರಷ್ಠಾಚಾರ ಆರೋಪ ಹೊರಿಸಿರುವ ಕಾಂಗ್ರೆಸ್ ನಾಯಕರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌ ಅವರು ಸೋಮವಾರ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ದೂರು ಸಲ್ಲಿಸಿದರು.

ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ದ ಸೂಕ್ತಕ್ರಮಕ್ಕೆ ಅವರು ದೂರಿನಲ್ಲಿ ಆಗ್ರಹಿಸಿದರು.

ಎನ್.ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾರ್ಚ್‌ 28ರಂದು ಕೊಳ್ಳೇಗಾಲದಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಂಜುಂಡಸ್ವಾಮಿ ಅವರು ನಮ್ಮ ಅಭ್ಯರ್ಥಿ ಬಾಲರಾಜ್‌ ಬಗ್ಗೆ ಕೆಟ್ಟದಾಗಿದೆ ಮಾತನಾಡಿದ್ದಾರೆ.  ನನ್ನ ಬಗ್ಗೆಯೂ ಮಾತನಾಡಿದ್ದಾರೆ.  ‘ಇಲ್ಲೊಬ್ಬ ಸಮಾಜಘಾತುಕ ಎನ್.ಮಹೇಶ್ ಇದ್ದಾರೆ. ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೆ ಏನು ಮಾಡಿಲ್ಲ ಎನ್ನುತ್ತಿದ್ದಾರೆ. ಮಹೇಶ್ ಶಿಕ್ಷಣ ಸಚಿವರಾದ್ದ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ಕೊಡುವ ದುಡ್ಡಲ್ಲಿ ₹30 ಕೋಟಿ ಲೂಟಿ ಹೊಡೆದಿದ್ದಾರೆ. ಈಗ ಬಾಲರಾಜ್‌ ಅವರನ್ನು ಹಾಳು ಮಾಡಲು ಬಂದಿದ್ದೀರಿ’ ಎಂದು ಹೇಳಿದ್ದಾರೆ. ಇದು ಮಾಧ್ಯಮದಲ್ಲಿ ಸುದ್ದಿಯಾಗಿದೆ. ಇದು ನನ್ನ ಮಾನಹಾನಿ ಮಾಡುವಂತಹ ಮಾತು’ ಎಂದರು. 

‘ಸಚಿವರಾದ ಕೆ.ವೆಂಕಟೇಶ್, ಮಹದೇವಪ್ಪ ಕೂಡ ಇದ್ದರು. ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕಾಗಿ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು,  ನ್ಯಾಯಾಲಯದಲ್ಲೂ ಮೊಕದ್ದಮೆ ಹೂಡುವೆ.  ಈ ಮೂವರು ಬಂದು ನಾನು ₹30 ಕೋಟಿ ಮೊತ್ತದ  ಭ್ರಷ್ಟಾಚಾರ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಇಲ್ಲದಿದ್ದರೆ ಅವರು ಮೂರು ವರ್ಷ ಜೈಲಿಗೆ ಹೋಗಲಿ’ ಎಂದು ಮಹೇಶ್‌ ಹೇಳಿದರು. 

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಕೊಳ್ಳೇಗಾಲ ನಗರಸಭಾ ಸದಸ್ಯ ರಾಮಕೃಷ್ಣ, ಜಗದೀಶ್‌ ಶಂಕನಪುರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT