ಗುರುವಾರ , ಮೇ 26, 2022
28 °C
ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಚರ್ಚೆ, ಕೆಲವರ ವರ್ತನೆಗೆ ಕಾರ್ಯಕರ್ತರ ಬೇಸರ, ಅಸಮಾಧಾನ

ರಘು ಕೌಟಿಲ್ಯ ಸೋಲು: ಬಿಜೆಪಿ ಮುಖಂಡರ ವಿರುದ್ಧ ಕಾರ್ಯಕರ್ತರ ಆಕ್ರೋಶ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರು ಸೋತಿರುವುದಕ್ಕೆ ಜಿಲ್ಲೆಯ ಬಿಜೆಪಿ ಕೆಲವು ಕಾರ್ಯಕರ್ತರು ಪಕ್ಷದ ಜಿಲ್ಲೆಯ ಕೆಲವು ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜಿಲ್ಲಾ ಘಟಕದ ಪ್ರಮುಖ ಹುದ್ದೆಗಳಲ್ಲಿರುವವರೇ ಜೆಡಿಎಸ್‌ ಸಖ್ಯ ಬೆಳೆಸಿ ರಘು ಅವರ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ವಿ.ಸೋಮಣ್ಣ ಅಭಿಯಾನಿ ಬಳಗ, ವಿಜಯೇಂದ್ರ ಅಭಿಮಾನಿಗಳ ವಾಟ್ಸ್‌ಆ್ಯಪ್‌ ಗ್ರೂಪ್‌ ಸೇರಿದಂತೆ ಇನ್ನಿತರ ಗ್ರೂಪ್‌ಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಮತ್ತು ಅವರ ತಂಡವನ್ನು ವಿರೋಧ ಮಾಡುತ್ತಿರುವವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕೆಲವು ಕಾರ್ಯಕರ್ತರ ದೂರು. 

‘ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಪಟ್ಟು ಹಿಡಿದು ಈ ಬಾರಿಯೂ ರಘು ಕೌಟಿಲ್ಯ ಅವರಿಗೆ ಟಿಕೆಟ್‌ ಕೊಡಿಸಿದ್ದರು. ಇದನ್ನು ಸಹಿಸದ ಕೆಲವರು ಪಕ್ಷದ ಅಭ್ಯರ್ಥಿ ಸೋಲಿಗೆ ಪಣ ತೊಟ್ಟು, ಜೆಡಿಎಸ್‌ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಬಿಜೆಪಿ ಬೆಂಬಲಿತ ಸದಸ್ಯರಿಗೆ ಕರೆ ಕೊಟ್ಟಿದ್ದರು’ ಎಂದು ಕಾರ್ಯಕರ್ತರು ದೂರಿದ್ದಾರೆ. 


ಬಿಜೆಪಿ ಕಾರ್ಯಕರ್ತರ ವಾಟ್ಸ್‌ಆ್ಯಪ್‌ ಗ್ರೂಪೊಂದರಲ್ಲಿ ಕಂಡು ಬಂದ ಪೋಸ್ಟ್‌

‘ಇತ್ತೀಚೆಗೆ ಕೆಲವು ಜಿಲ್ಲಾ ಮುಖಂಡರಿಂದಲೇ ಪಕ್ಷದ ಸಂಘಟನೆಗೆ ಹಿನ್ನಡೆಯಾಗುತ್ತಿದ್ದು, ರಾಜ್ಯ ಬಿಜೆಪಿ ಈ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆ. ಪ್ರಾಮಾಣಿಕವಾಗಿ ಗೆಲ್ಲುವ ವ್ಯಕ್ತಿಯನ್ನೇ ಸೋಲಿಸಲು ಪಣತೊಟ್ಟವರೇ ಇಂದು ಪಕ್ಷದ ವಿವಿಧ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ಪಕ್ಷ ಸಂಘಟನೆ ಎಲ್ಲಿಂದ ಸಾಧ್ಯ’ ಎಂದೆಲ್ಲ ಪ್ರಶ್ನಿಸಿದ್ದಾರೆ. 

‘ಬೆಂಕಿ ಮಹದೇವಪ್ಪ ಅವರ ಚುನಾವಣೆಯಲ್ಲೂ ರೆಸಾರ್ಟ್‌ ರಾಜಕೀಯ, ಪ್ರೊ ಮಲ್ಲಿಕಾರ್ಜುನಪ್ಪನವರ ಚುನಾವಣೆಯಲ್ಲೂ ರೆಸಾರ್ಟ್‌ ರಾಜಕೀಯ, ಈಗ ರಘು ಕೌಟಿಲ್ಯ ಅವರ ಚುನಾವಣೆಯಲ್ಲೂ ರೆಸಾರ್ಟ್‌ ರಾಜಕೀಯ. ಇದು ಹೀಗೇ ಮುಂದುವರಿದರೆ ಜಿಲ್ಲೆಯ ಬಿಜೆಪಿ ಸ್ಥಿತಿ ಆ ದೇವರೇ ಗತಿ’ ಎಂದು ಕಾರ್ಯಕರ್ತರೊಬ್ಬರು ಗ್ರೂಪೊಂದರಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.  

‘ಜಿಲ್ಲೆಯ ಬಿಜೆಪಿ ಮುಖಂಡರು ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಿದ್ದಕ್ಕೆ ಬಿಜೆಪಿಗೆ 2ನೇ ಸ್ಥಾನ ಸಿಕ್ಕಿದೆ. ಮುಂದೆಯೂ ಬದಲಾವಣೆ ಕಾಣದಿದ್ದರೆ ಮುಂದಿನ ಬಾರಿಯೂ ಪುಟ್ಟರಂಗಶೆಟ್ಟಿ ಅವರೇ ಶಾಸಕರಾಗುತ್ತಾರೆ. ಮೊದಲು ರೆಸಾರ್ಟ್‌ ರಾಜಕೀಯ ಬಿಡಿ. ಹಳ್ಳಿ ಹಳ್ಳಿಗೆ ಭೇಟಿ ನೀಡಿ ಸಾರ್ವಜನಿಕರ ಕಷ್ಟ ಸುಖ ವಿಚಾರಿಸಿ. ನಿಮ್ಮ ಹಣದ ಆಸೆಗೆ ಮುಗ್ಧ ಮತದಾರರನ್ನು ಮೂಲೆಗುಂಪು ಮಾಡಬೇಡಿ’ ಎಂದು ಇನ್ನೊಬ್ಬ ಕಾರ್ಯಕರ್ತರು ಹೇಳಿದ್ದಾರೆ.  

‘ನಾವು ಪಕ್ಷದ ಜಿಲ್ಲಾ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಬೇಕು. ಕೆಲವು ವಿಭಾಗಗಳ ಅಧ್ಯಕ್ಷರನ್ನು ತೆಗೆದುಹಾಕಬೇಕು. ರಾಜ್ಯ ಮಟ್ಟದ ಮುಖಂಡರು ಬರುವವರೆಗೂ ನಾವು ಕಚೇರಿ ಮುಚ್ಚಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುವುದು ನೂರಕ್ಕೆ ನೂರರಷ್ಟು ಸತ್ಯ. ಅದರಲ್ಲೂ ನಿಷ್ಠಾವಂತ ಕಾರ್ಯಕರ್ತರಿಗೇ ಕೆಟ್ಟ ಹೆಸರು ಬರುತ್ತದೆ. ಬಿಜೆಪಿ ಎಂದು ಏನೂ ಗೊತ್ತೇ ಇಲ್ಲದ ಮೂರ್ಖರಿಗೆ ಅಧ್ಯಕ್ಷ ಸ್ಥಾನ, ಸದಸ್ಯ ನೀಡಲಾಗಿದೆ. ಅವರಿಗೆ ಪಕ್ಷದ ಬಗ್ಗೆ ಅರಿವೇ ಇಲ್ಲ’ ಎಂದು ಇನ್ನೊಬ್ಬರು ಗ್ರೂಪೊಂದರಲ್ಲಿ ಕಿಡಿ ಕಾರಿದ್ದಾರೆ. 

ಒಟ್ಟಾಗಿ ಕೆಲಸ ಮಾಡಿದ್ದೆವು: ಸುಂದರ್‌

ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರು ವ್ಯಕ್ತಪಡಿಸುತ್ತಿರುವ ಆಕ್ರೋಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್.ಸುಂದರ್‌ ಅವರು, ‘ರಘು ಕೌಟಿಲ್ಯ ಅವರ ಸೋಲಿನಿಂದ ಎಲ್ಲ ಮುಖಂಡರಿಗೆ ನೋವಾಗಿದೆ. ಕಾರ್ಯಕರ್ತರ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಯಡಿಯೂರಪ್ಪ, ವಿಜಯೇಂದ್ರ ಅವರು ಬಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಪಕ್ಷದ ವಿವಿಧ ಮುಖಂಡರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ನಮ್ಮ ಅಭ್ಯರ್ಥಿ ಗೆಲ್ಲುವು ವಿಶ್ವಾಸವಿತ್ತು. ನಮ್ಮ ಜಿಲ್ಲೆಯಲ್ಲಿ ಅವರ ಪರವಾಗಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಎರಡನೇ ಪ್ರಾಶಸ್ತ್ಯ ಮತಗಳು ನಮ್ಮ ನಿರೀಕ್ಷೆಯಷ್ಟು ಬಂದಿಲ್ಲ. ಮತ ಎಣಿಕೆಯಲ್ಲೂ ಗೊಂದಲ ಆಗಿದೆ. ಮರು ಮತ ಎಣಿಕೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡಬೇಕು ಎಂದು ರಘು ಅವರಿಗೆ ಸಲಹೆಯನ್ನೂ ನೀಡಿದ್ದೇವೆ’ ಎಂದರು. 

‘ಸೋತಾಗ ಎಲ್ಲರಿಗೂ ಬೇಸರ ಆಗುವುದು ಸಹಜ. ಕೆಲವರಿಗೆ ಅಸಮಾಧಾನವೂ ಆಗುತ್ತದೆ. ಒಬ್ಬರೋ ಇಬ್ಬರೋ  ಆರೋಪಗಳನ್ನು ಮಾಡಬಹುದು. ಆದರೆ, ನಾವು ಪಕ್ಷದ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಖಂಡರ ವಿರುದ್ಧ ಮಾತನಾಡುವವರನ್ನು ಪಕ್ಷವು ನೋಡಿಕೊಳ್ಳುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು