ಯಳಂದೂರು: ತಾಲ್ಲೂಕಿನ ಕಬ್ಬು ಬೆಳೆಗಾರರಿಗೆ ಈಗ ಹುಳುಗಳ ಕಾಟ ಆರಂಭವಾಗಿದೆ. ಅಪರೂಪದ ನೀಲಿ ಬಗ್ ಹಾವಳಿಯಿಂದ ಕಬ್ಬಿನ ಇಳುವರಿ ಕುಸಿಯುವ ಆತಂಕ ಎದುರಾಗಿದ್ದು, ಈ ಬಗ್ಗೆ ಕೀಟ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕಬ್ಬಿನ ತಾಕಿಗೆ ಭೇಟಿ ನೀಡಿ ಮಂಗಳವಾರ ಪರಿಶೀಲಿಸಿದರು.
ತಾಲ್ಲೂಕಿನ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಹಿಡುವಳಿ ವಿಸ್ತರಿಸಿದೆ. ಕಳೆದೆರಡು ವರ್ಷಗಳಿಂದ ಬರದಿಂದ ಕಂಗೆಟ್ಟಿದ್ದ ರೈತರು, ಮುಂಗಾರು ಹಂಗಾಮಿನಲ್ಲಿ ಹೈಬ್ರಿಡ್ ತಳಿಗಳ ನಾಟಿಗೆ ಮುಂದಾಗಿದ್ದಾರೆ. ಆದರೆ, ಈ ಸಾಲಿನಲ್ಲಿ ಕಬ್ಬಿಗೆ ಹುಳುಗಳ ಕಾಟ ಹಾಗೂ ಬಿಳಿ ಮಾರು ಕಾಣಿಸಿಕೊಂಡು ನಿರೀಕ್ಷಿತ ಇಳುವರಿ ಕಾಣದಾಗಿದೆ.
ಕೆಲವು ಗದ್ದೆಗಳಲ್ಲಿ ಗೊಣ್ಣೆಹುಳು ಬಾಧೆಯೂ ಕಂಡು ಬಂದಿದೆ. ನೀಲಿ ಬಗ್ ಸೋಗನ್ನು ತಿಂದು, ಕಬ್ಬಿನ ಗಾತ್ರ ಕುಸಿಯುವಂತೆ ಮಾಡುತ್ತದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಕೆಲವು ಕೀಟಬಾಧೆ ಔಷಧೋಪಚಾರಕ್ಕೂ ಬಗ್ಗುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದರು.
‘ಗೊಣ್ಣೆಹುಳು ಸ್ಥಾನಿಕ ಪೀಡೆ. ಶೇ 30ರಷ್ಟು ಬೆಳೆ ಹಾನಿ ಮಾಡುತ್ತದೆ. ಇವು ಬೇರು ಭಕ್ಷಿಸಿ, ಪೈರು ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ತೇವಾಂಶ ಕೊರತೆಯಾದಲ್ಲಿ ಕಾಟ ಹೆಚ್ಚಾಗುತ್ತದೆ. ಜೊತೆಗೆ ಅಲ್ಲಲ್ಲಿ ಸೋಗು ಬಿಳಿಚಿಕೊಂಡು ಬಿಳಿ ಹೇನು ಕಾಟಕೊಡುತ್ತದೆ. ಈ ಬಾಧೆ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟವೂ ಇದೆ’ ಎಂದು ಕೀಟ ವಿಜ್ಞಾನಿ ನಾಗನಹಳ್ಳಿ ಕೃಷಿ ವಿಜ್ಞಾನಿ ಉಮಾಶಂಕರ್ ಹೇಳಿದರು.
‘ಕಬ್ಬಿಗೆ ನೀಲಿ ಹುಳು ಮತ್ತಿತರ ಬಾಧೆ ಕಂಡು ಬಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೆಲವು ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆ ಇದೆ ಎಂಬುದರ ಸಮೀಕ್ಷೆ ನಡೆದಿಲ್ಲ. ಆದರೆ, ನಿರ್ವಹಣೆಗೆ ಸಂಬಂಧಿಸಿದಂತೆ ಬೆಳೆಗಾರರಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.
‘ಕೃಷಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು. ಉತ್ತಮ ಮಳೆಯಾದಲ್ಲಿ ಹುಳು ಇಲ್ಲವೆ ರೋಗಗಳ ಹಾವಳಿ ತಗ್ಗುತ್ತದೆ. ನಿರ್ವಹಣೆಗೆ ಬೇಕಾದ ಔಷಧ ಲಭ್ಯ ಇದ್ದು, ಇಲಾಖೆಯಿಂದ ಕೊಳ್ಳಬಹುದು’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.
ನಾಗೇನಹಳ್ಳಿ ಕೃಷಿ ವಿಜ್ಞಾನಿ ಉಮಾಶಂಕರ್, ಕೀಟತಜ್ಞ ಯೋಗೀಶ್, ಶಕ್ತಿಕುಮಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿ ಎ.ವೆಂಕಟರಂಗ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.