ಸೋಮವಾರ, ಜುಲೈ 4, 2022
24 °C

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಜಾಕ್ಕೆ ಬಿಪಿಎಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾ ಮಾಡಿ, ಅರ್ಹ ಶಿಕ್ಷಣ ತಜ್ಞರ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ನೇಮಿಸುವಂತೆ ಆಗ್ರಹಿಸಿ ಭಾರತೀಯ ಪರಿವರ್ತನಾ ಸಂಘದ (ಬಿಪಿಎಸ್‌) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 

ಜಿಲ್ಲಾಡಳಿತ ಭವನದ ಎದುರು ಧರಣಿ ಕುಳಿತ ಪ್ರತಿಭಟನಕಾರರು ರಾಜ್ಯ ಸರ್ಕಾರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿರುದ್ಧ ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. 

ಪಠ್ಯಪುಸ್ತಕಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಸಾಧನಗಳಾಗಿರುವುದರಿಂದ ಉದಾತ್ತರು, ವಿಶಾಲ ಮನಃಸ್ಥಿತಿ ಉಳ್ಳವರು, ಜಾತಿಧರ್ಮ ಪಂಥಗಳನ್ನು ಮೀರಿದ ವಸ್ತುನಿಷ್ಠ  ಆಲೋಚನೆಯುಳ್ಳ ತಜ್ಞರು ಪಠ್ಯಪುಸ್ತಕ ಆಯ್ಕೆ ಸಮಿತಿಯಲ್ಲಿ ಇರಬೇಕಾಗುತ್ತದೆ. ಈಗ ಸರ್ಕಾರ ನೇಮಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿರುವವರು  ಲಿಂಗ ಸಮಾನತೆ, ಜಾತ್ಯತೀತ ಮೌಲ್ಯಗಳನ್ನು ಅಣಕಿಸುವವರು, ಮಹಾಕವಿ ಕುವೆಂಪುರಂಥವರನ್ನೇ ಅಣಕಿಸಿ ಬರೆಯುವ ಸಂಕುಚಿತ ಬುದ್ದಿಯುಳ್ಳವರಾಗಿದ್ದಾರೆ. ಇಂತಹ ಮನುವಾದಿ ಮನಃಸ್ಥಿತಿಯುಳ್ಳವರು ಪಠ್ಯಪುಸ್ತಕ ಆಯ್ಕೆ ಸಮಿತಿಯಲ್ಲಿರುವುದು ಈ ನಾಡು ತಲೆತಗ್ಗಿಸುವಂತಹ ಸಂಗತಿ’ ಎಂದು ದೂರಿದರು.

‘ಮನುವಾದಿ ಸಿದ್ಧಾಂತದ ಪ್ರಚಾರಕರಾದ ಹೆಡ್ಗೇವಾರ್‌ ಅವರ ಲೇಖನ 10ನೇ ತರಗತಿ ಮಕ್ಕಳಿಗೆ ಕಲಿಸುವುದು, ಹೀನ ವರ್ಣಾಶ್ರಮ ವ್ಯವಸ್ಥೆಯ ಸಂರಕ್ಷಕರೆಂದು ಪುರಾಣಗಳಲ್ಲಿ ಖ್ಯಾತರಾದ ರಾಮ - ಕೃಷ್ಣರನ್ನು ಅದರ್ಶ ಪುರುಷರೆಂದು ಬಿಂಬಿಸುವುದು, ಸುಳ್ಳು ಭಾಷಣಗಳ ಮೂಲಕ ರಾಜ್ಯದ ವಿದ್ಯಾವಂತ ಸಮುದಾಯದಲ್ಲಿ ತೀರಾ ಅಪಹಾಸ್ಯಕ್ಕೆ ಗುರಿಯಾಗಿರುವ ಚಕ್ರವರ್ತಿ ಸೂಲಿಬೆಲೆಯವರ ಲೇಖನವನ್ನು ಪಠ್ಯಪುಸ್ತಕದಲ್ಲಿ ಸೇರಿಸಿರುವುದು ಈ ರಾಜ್ಯದ ಘನ ಸಂಸ್ಕೃತಿಗೆ ಮಾಡಿದ ಅವಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ವರ್ಷಗಳು ಕಳೆದರೂ ಕಾಲೇಜು ವಿದ್ಯಾರ್ಥಿಗಳಿಗೆ , ವಿಶ್ವವಿದ್ಯಾಲಯಗಳ ಸಂಶೋಧಕರಿಗೆ ವಿದ್ಯಾರ್ಥಿವೇತನವನ್ನು ಸರಿಯಾಗಿ ವಿತರಿಸಿಲ್ಲ. ಅದೇ ಅನರ್ಹ  ಸಮಿತಿಗೆ ಪಿಯುಸಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಜವಾಬ್ದಾರಿ ನೀಡಿರುವುದು ರಾಜ್ಯ ಸರ್ಕಾರದ ಉದ್ಧಟತನ, ಬೇಜವಾಬ್ದಾರಿಯುತ ನಿಲುವಾಗಿದೆ. ಮನುವಾದಿ ಮನಃಸ್ಥಿತಿ ಹೊಂದಿರುವ ಸಮಿತಿಯನ್ನು ವಜಾ ಮಾಡಬೇಕು. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ನೀಡಿದ್ದ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು. ಹೊಸ ಶಿಕ್ಷಣ ತಜ್ಞರನ್ನು ನೇಮಿಸಿ ಹೊಸ ಪಠ್ಯಗಳನ್ನು ಸಿದ್ದಪಡಿಸಬೇಕು’ ಎಂದು ಪ್ರತಿಭಟನಾನಿತರು ಆಗ್ರಹಿಸಿದರು.

ಭಾರತೀಯ ಪರಿವರ್ತನಾ ಸಂಘದ ರಾಜ್ಯ ಉಪಾಧ್ಯಕ್ಷ ಸೋಸಲೆ ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಂಡರಬಾಳು ವಾಸು, ಇರಸವಾಡಿ ಮಹೇಶ್‌ ಮಾತನಾಡಿದರು. 

ಟೌನ್ ಅಧ್ಯಕ್ಷ ರಾಮಸಮುದ್ರ ಬಾಬು, ಕಂದಹಳ್ಳಿ ರಮೇಶ್, ಗೌತಮ್, ಭರತ್, ಕೃಷ್ಣ, ಸ್ವಾಮಿ, ಪ್ರಸನ್ನ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು