ಗುಂಡ್ಲುಪೇಟೆ: ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯಿಂದ ಜೀವನ ರೂಪಿಸಿಕೊಂಡವರು ತಾಲ್ಲೂಕಿನ ಬೆಟ್ಟದ ಮಾದಹಳ್ಳಿ ಗ್ರಾಮದ ಸಹೋದರರಾದ ನಾಗೇಂದ್ರ ಕುಮಾರ್ ಮತ್ತು ಪ್ರಸನ್ನ ಕುಮಾರ್.
ಇವರಿಬ್ಬರು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ನಾಗೇಂದ್ರ ಕುಮಾರ್ ತಬಲ ಬಾರಿಸುವುದರಲ್ಲಿ ಪರಿಣಿತರಾದರೆ, ಪ್ರಸನ್ನ ಕುಮಾರ್ ಕೀಬೋರ್ಡ್ ನುಡಿಸುವುದರಲ್ಲಿ ನಿಷ್ಣಾತರು. ಅಣ್ಣ ನಾಗೇಂದ್ರ ಅವರಿಗೆ 15 ವರ್ಷಗಳ ಕಲಾ ಅನುಭವವಿದ್ದರೆ ಪ್ರಸನ್ನ ಅವರಿಗೆ 8 ವರ್ಷಗಳ ಅನುಭವ ಇದರು. ಇಬ್ಬರೂ ಜತೆಗೂಡಿ ಕಳೆದ ಎಂಟು ವರ್ಷಗಳಿಂದ ಜೊತೆಯಲ್ಲಿಯೇ ರಾಜ್ಯದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.
ಪಿಯುಸಿ ವ್ಯಾಸಂಗ ಮಾಡಿರುವ ನಾಗೇಂದ್ರ ಕಲೆಯ ಜೊತೆಯಲ್ಲಿ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಾತ ಚೆನ್ನವೀರ ದೇವರು ಹಾಗೂ ದೊಡ್ಡಪ್ಪ ಶಾಂತ ವೀರದೇವರ ಹಾದಿಯಲ್ಲಿ ಸಾಗುತ್ತಿರುವ ಸಹೋದರರು ಕಲೆಯಲ್ಲಿ ಬದುಕುಕೊಟ್ಟಿಕೊಳ್ಳುವುದರ ಜತೆಗೆ ಕಲೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಗೇಂದ್ರ ಕರ್ನಾಟಕ್ ಸಂಗೀತ ತರಬೇತಿ ಪಡೆದಿದ್ದು ತಾಳಬದ್ಧವಾಗಿ ತಬಲ ಬಾರಿಸುತ್ತಾ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಪ್ರವೀಣರು. ಬಿ.ಕಾಂ ಪದವೀದರ ಪ್ರಸನ್ನ ಕುಮಾರ್ ಕರ್ನಾಟಕ್ ಮತ್ತು ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದು ಜೊತೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
ಇಬ್ಬರು ಸಹೋದರರು ನಾಡಹಬ್ಬ ದಸರಾ ಸೇರಿದಂತೆ ಹಲವು ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಸರು ವಾಸಿಯಾಗಿದ್ದಾರೆ. ತಬಲ ಮಾಂತ್ರಿಕ ಕೊಳ್ಳೇಗಾಲದ ದಶಪಾಲ ಅವರ ಶಿಷ್ಯ ನಾಗೇಂದ್ರ ಕುಮಾರ್.
ಕುರುಕ್ಷೇತ್ರ, ದಕ್ಷಯಜ್ಞ, ಪ್ರಭುಲಿಂಗಲೀಲೆ ಮುಂತಾದ ನಾಟಕಗಳನ್ನು ಕಲಿಸುವಲ್ಲೂ ತೊಡಗಿಸಿಕೊಂಡಿದ್ದು ಸ್ವತಃ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಹೋದರರ ಕಲಾ ಸಾಧನೆಗೆ ಸರ್ಕಾರದಿಂದ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಗೌರವಗಳು ಸಂದಿವೆ.
ಕಲೆಯ ಉಳಿವಿಗೆ ತರಬೇತಿ
‘ಹಿರಿಯರಿಂದ ಬಂದ ಕಲೆ ನಮ್ಮ ತಲೆಮಾರಿಗಲ್ಲದೆ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಉದ್ದೇಶದಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕಲೆಗಳನ್ನು ಶಿಸ್ತಿನಿಂದ ಕಲಿತು ಬದುಕಿಗೆ ಪೂರಕವಾಗಿಯೂ ಅಳವಡಿಸಿಕೊಳ್ಳಬಹುದು’ ಎಂದು ಸಹೋದರಾದ ನಾಗೇಂದ್ರ ಹಾಗೂ ಪ್ರಸನ್ನ ಕುಮಾರ್ ಹೇಳಿದರು.