ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ ಅಕ್ರಮ ರೆಸಾರ್ಟ್, ಹೋಂ ಸ್ಟೇ ತೆರವು: ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಪತ್ರ

Published 5 ಮೇ 2023, 18:10 IST
Last Updated 5 ಮೇ 2023, 18:10 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಬಿಳಿಗಿರಿ ರಂಗನಬೆಟ್ಟ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ರೆಸಾರ್ಟ್‌ಗಳು, ಹೋಂ ಸ್ಟೇಗಳು ಮತ್ತು ಲಾಡ್ಜ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡು, ಆ ಸಂಬಂಧ ವರದಿಯನ್ನು ನೀಡುವಂತೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ, ಎಪಿಸಿಸಿಎಫ್‌) ವಿಜಯ್‌ ರಂಜನ್‌, ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ರೆಸಾರ್ಟ್, ಹೋಂಸ್ಟೇ ಮತ್ತು ಲಾಡ್ಜ್‌ಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ 2022ರ ಆಗಸ್ಟ್‌ನಲ್ಲಿ ಎಪಿಸಿಸಿಎಫ್‌ ಅವರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದಲ್ಲಿ, ತನಿಖೆ ನಡೆಸಿ ವರದಿ ನೀಡುವಂತೆ ಎಪಿಸಿಸಿಎಫ್‌ ಮೈಸೂರಿನ ಅರಣ್ಯ ಸಂಚಾರ ದಳದ ಉಪಸಂರಕ್ಷಣಾಧಿಕಾರಿಗೆ ಸೂಚಿಸಿದ್ದರು. ಅದರಂತೆ ಅವರು ಬಿಳಿಗಿರಿರಂಗನ ಬೆಟ್ಟದಲ್ಲಿ ತನಿಖೆ ನಡೆಸಿ ಈ ವರ್ಷದ ಮಾರ್ಚ್‌ 13ರಂದು ವರದಿ ನೀಡಿದ್ದು, ರೆಸಾರ್ಟ್‌, ಹೋಂಸ್ಟೇಗಳು ಮತ್ತು ಲಾಡ್ಜ್‌ಗಳು ಅನಧಿಕೃತವಾಗಿ ನಡೆಯುತ್ತಿರುವುದನ್ನು ದೃಢಪಡಿಸಿದ್ದಾರೆ. ಅಲ್ಲದೇ, ಕಾನೂನಿನನ್ವಯ ಅವುಗಳನ್ನು ತೆರವುಗೊಳಿಸಬೇಕು ಎಂದೂ ವರದಿಯಲ್ಲಿ ಹೇಳಿದ್ದಾರೆ.

ಈ ತನಿಖಾ ವರದಿಯ ಆಧಾರದ ಮೇಲೆ ವಿಜಯ್‌ ರಂಜನ್‌, ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿರುವ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಗುರುವಾರ (ಮೇ 4) ಪತ್ರ ಬರೆದಿದ್ದಾರೆ.

ಪತ್ರದಲ್ಲಿ, 2019ರ ನವೆಂಬರ್‌ 19ರಂದು ಹೊರಡಿಸಲಾಗಿದ್ದ ಬಿಆರ್‌ಡಿ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ, ‘ಸಂರಕ್ಷಿತ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯ ಒಳಗಡೆ ವಾಣಿಜ್ಯ ಉದ್ದೇಶದ ಹೋಟೆಲ್‌ಗಳು, ರೆಸಾರ್ಟ್‌ಗಳ ನಿರ್ಮಾಣಕ್ಕೆ ಅವಕಾಶ ಇಲ್ಲ’ ಎಂಬ ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ.

‘ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರು ನೀವಾಗಿರುವುದರಿಂದ, ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇ, ರೆಸಾರ್ಟ್‌ಗಳು ಮತ್ತು ಲಾಡ್ಜ್‌ಗಳನ್ನು ಕಾನೂನಿನ ಅನ್ವಯ ತೆರವುಗೊಳಿಸುವುದು ಮತ್ತು ಅವುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ, ಈ ದೂರಿನ ಅರ್ಜಿಯನ್ನು ನಿಮ್ಮ ಅಧೀನಕ್ಕೆ ವರ್ಗಾಯಿಸುತ್ತಾ, ಕೈಗೊಂಡ ಕ್ರಮದ ಕುರಿತು ಕಚೇರಿಗೆ ಒದಗಿಸಬೇಕು’ ಎಂದು ಎಪಿಸಿಸಿಎಫ್‌ ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT