ಸೋಮವಾರ, ಆಗಸ್ಟ್ 15, 2022
26 °C

ಇನ್ನೆರಡು ವರ್ಷವೂ ಯಡಿಯೂರಪ್ಪ ಸಿ.ಎಂ: ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಇನ್ನು ಎರಡು ವರ್ಷವೂ ಬಿ.ಎಸ್‌.ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮಂಗಳವಾರ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದನ್ನು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಅವರೇ ಸ್ಪಷ್ಟಪಡಿಸಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೂ ಹೇಳಿದ್ದಾರೆ. ಯಡಿಯೂರಪ್ಪ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಸಹಿ, ಅಭಿಪ್ರಾಯ ಸಂಗ್ರಹ ನಡೆದಿಲ್ಲ. ಈ ಬಗ್ಗೆ ಉಂಟಾಗಿರುವ ಗೊಂದಲ, ಊಹಾಪೋಹಗಳು ಸುಳ್ಳು’ ಎಂದು ಹೇಳಿದರು. 

ವೀರಶೈವ ಲಿಂಗಾಯತ ಮಠಾಧೀಶರು ಯಡಿಯೂರಪ್ಪ ಅವರ ಪರವಾಗಿ ಮಾತನಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ  ಉತ್ತರಿಸಿದ ಅವರು, ‘ಮಠಾಧೀಶರು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ರಾಜಕಾರಣ ಬಿಟ್ಟು ಧರ್ಮ ಇಲ್ಲ. ಧರ್ಮ ಬಿಟ್ಟು ರಾಜಕಾರಣ ಇಲ್ಲ. ಹಿಂದಿನ ಕಾಲದ ರಾಜರ ಆಡಳಿತದಲ್ಲಿ ಧರ್ಮಗುರುಗಳು ಎಂದು ಇದ್ದರು. ಪ್ರತಿಯೊಂದು ಸಮಾಜಕ್ಕೂ ಮಠಾಧೀಶರು ಇದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ. ನಮ್ಮ ದೇಶದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವಿದೆ’ ಎಂದರು. 

ಮೆಣಸಿನ ಬೀಜ ಇಲಾಖೆ ವಿತರಿಸಿಲ್ಲ: ಬಳ್ಳಾರಿಯಲ್ಲಿ ಮೆಣಸಿನ ಬೀಜ ಖರೀದಿಗೆ ಜನರು ಮುಗಿಬಿದ್ದು, ಪೊಲೀಸರು ಲಾಠಿ ಪ್ರಹಾರ ಮಾಡಿದ ಘಟನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮೆಣಸಿನ ಬೀಜವನ್ನು ಸರ್ಕಾರ ಪೂರೈಕೆ ಮಾಡುವುದಿಲ್ಲ. ಸಿಜೆಂಟಾ ಎಂಬ ಖಾಸಗಿ ಕಂಪನಿ ಪೂರೈಸುತ್ತದೆ. ಆ ಮೆಣಸಿಗೆ ಹೆಚ್ಚು ಬೇಡಿಕೆ ಇರುವುದರಿಂದ ಸ್ವಲ್ಪ ಹೆಚ್ಚು ಕಡಿಮೆ ಆಗಿದೆ. ನಾವು 14 ಬೆಳೆಗಳಿಗೆ ಮಾತ್ರ ಸಬ್ಸಿಡಿ ಕೊಟ್ಟು ಬೀಜ ಪೂರೈಸುತ್ತೇವೆ’ ಎಂದು ಸ್ಪಷ್ಟಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು