ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಿಂದ ಶಿಕ್ಷಣ ವ್ಯವಸ್ಥೆ ನಾಶ: ಎಂ.ಕೃಷ್ಣಮೂರ್ತಿ

ಬಿಎಸ್‌ಪಿ ಬೆಂಬಲಿತ ಹ.ರಾ.ಮಹೇಶ್‌ಗೆ ಮತದಾರರ ಬೆಂಬಲ ಕೋರಿದ ಎಂ.ಕೃಷ್ಣಮೂರ್ತಿ
Published 31 ಮೇ 2024, 6:16 IST
Last Updated 31 ಮೇ 2024, 6:16 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ದುರ್ಬಲ ಗೊಳ್ಳಲು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಕಾರಣ. ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನೇ ಇವುಗಳು ನಾಶ ಗೊಳಿಸಿವೆ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಎಂ.ಕೃಷ್ಣಮೂರ್ತಿ ಗುರುವಾರ ದೂರಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರೂ ಪಕ್ಷಗಳು ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆಯಾದ ಅದರ ಸದಸ್ಯರು ಬೋಧಕರ, ಅತಿಥಿ ಶಿಕ್ಷಕರಸಮಸ್ಯೆಗಳನ್ನು ನಿವಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಗಳು ಕಾಯಂ ಶಿಕ್ಷಕರು, ಉಪನ್ಯಾಸಕರನ್ನು ನೇಮಿಸಿಲ್ಲ ಇದರಿಂದಾಗಿ ಶಿಕ್ಷಣ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶಿಕ್ಷಕರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಸದಸ್ಯರು ಬೇಕು. ಬಿಎಸ್‌ಪಿ ಬೆಂಬಲಿತ ಹ.ರಾ.ಮಹೇಶ್‌ ಅವರು ಶಿಕ್ಷಕರಾಗಿ ಅನುಭವವುಳ್ಳವರು. ಹೋರಾಟಗಾರರು, ಈ ಬಾರಿಯ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಶಿಕ್ಷಕರ ಬಂಧುಗಳು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. 

‘ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಾಗಿ 24 ವರ್ಷಗಳಿಂದ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಮೊದಲ ಬಾರಿ ಆಯ್ಕೆಯಾದಾಗ‌ ಕ್ಷೇತ್ರ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜು, ವಿವಿ ಕೇಂದ್ರಗಳಲ್ಲಿ ಶೇ 70ರಷ್ಟು ಕಾಯಂ ಬೋಧಕರಿದ್ದರು. 24 ವರ್ಷಗಳಲ್ಲಿ ಅದು ಶೇ 30ಕ್ಕೆ ಇಳಿದಿದೆ. ವಿಶ್ವವಿದ್ಯಾಲಯಗಳು ಯುಜಿಸಿ, ನ್ಯಾಕ್ ಅನುದಾನದಿಂದ ವಂಚಿತವಾಗುವ ಸ್ಥಿತಿ ನಿರ್ಮಾಣವಾಗಿದೆ.  ಇದು ಮರಿತಿಬ್ಬೇಗೌಡ ಅವರ ಸಾಧನೆ’ ಎಂದು ವ್ಯಂಗ್ಯವಾಡಿದರು. 

'ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರ ನೇಮಕಾತಿ ನಡೆದಿಲ್ಲ. ಅನುದಾನಿತ ಶಾಲಾ, ಕಾಲೇಜುಗಳ ಬೋಧಕರು ಆರೋಗ್ಯ, ವಿಮೆ, ಪಿಂಚಣಿ ಸೌಲಭ್ಯ ಪಡೆಯಲು 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಖಾಸಗಿ ಕನ್ನಡ ಶಾಲಾ, ಕಾಲೇಜುಗಳು ಅನುದಾನಕ್ಕಾಗಿ ಸರ್ಕಾರದ ಬಳಿ ಅಂಗಲಾಚುತ್ತಿವೆ. ಅನುದಾನ ಕೊಡಿಸುವಲ್ಲಿ ಮರಿತಿಬ್ಬೇಗೌಡ ವಿಫಲರಾಗಿದ್ದಾರೆ’ ಎಂದು ದೂರಿದರು. 

‘ಬಿಜೆಪಿ ಜೆಡಿಎಸ್‌ ಮೈತ್ರಿ ಕೂಟವು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸದ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದೆ’ ಎಂದು ದೂರಿದರು. 

ಅಭ್ಯರ್ಥಿ ಹ.ರಾ.ಮಹೇಶ್‌ ಮಾತನಾಡಿ, ‘ನಮ್ಮ ಸ್ಪರ್ಧೆಯಿಂದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೆದರಿವೆ. ಅಪಪ್ರಚಾರದಲ್ಲಿ ತೊಡಗಿವೆ’ ಎಂದರು. 

ಬಿಎಸ್‌ಪಿ  ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಸಂಯೋಜಕ ರಾಜಶೇಖರ್‌, ಉಸ್ತುವಾರಿ ಅಮಚವಾಡಿ ಪ್ರಕಾಶ್‌, ಮುಖಂಡ ರಾಜೇಂದ್ರ ಭಾಗವಹಿಸಿದ್ದರು.  

‘ಅತಿಥಿ ಶಿಕ್ಷಕರ ಕಾಯಂಗೆ ಹೋರಾಟ’

ಸರ್ಕಾರಿ ಶಾಲೆಗಳಲ್ಲಿ 1.40 ಲಕ್ಷದಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇವರ ಜಾಗದಲ್ಲಿ 33 ಸಾವಿರ ಅತಿಥಿ ಶಿಕ್ಷಕರು ₹8000 ₹10 ಸಾವಿರಕ್ಕೆ ದುಡಿಯುತ್ತಿದ್ದಾರೆ.  ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿ ಸಿರುವ ಪಲ್ಷ ಬೆಂಬಲಿತ ಅಭ್ಯರ್ಥಿ ಹ.ರಾ.ಮಹೇಶ್ ಅವರನ್ನು ಗೆಲ್ಲಿಸಿದರೆ ರಾಜ್ಯದ 33 ಸಾವಿರ ಶಿಕ್ಷಕರನ್ನು ಕಾಯಂ ಮಾಡಲು ಹೋರಾಟ ಮಾಡುತ್ತೇವೆ’ ಎಂದರು.  ಈ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಎಸ್‌ಸಿ. ಎಸ್‌ಟಿ ಸಮುದಾಯದವರಿಗೆ ಟಿಕೆಟ್‌ ನೀಡಿಲ್ಲ. ಇದು ಅಸ್ಪೃಶ್ಯತೆ ಆಚರಣೆಯಲ್ಲವೇ. ಇಲ್ಲೂ ಶೇ 30ರಿಂದ 40 ದಲಿತ ಶಿಕ್ಷಕ ಮತದಾರರಿದ್ದಾರೆ. ಅವರು ಯಾರೂ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕಬಾರದು’ ಎಂದು ಮನವಿ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT