ಮಂಗಳವಾರ, ಆಗಸ್ಟ್ 16, 2022
22 °C

ಹುಲಿ ಗಣತಿ: ಮಲೆಮಹದೇಶ್ವರ ವನ್ಯಧಾಮದಲ್ಲಿ ಕ್ಯಾಮೆರಾ ಅಳವಡಿಕೆ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಹುಲಿ ಗಣತಿ, ವನ್ಯಪ್ರಾಣಿಗಳ ಬೆಳವಣಿಗೆ ಹಾಗೂ ಅವುಗಳ ಚಲನವಲನಗಳನ್ನು ಪರಿಶೀಲಿಸುವ ಸಲುವಾಗಿ ಮಲೆಮಹದೇಶ್ವರ ವನ್ಯಧಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ಕ್ಯಾಮೆರಾಗಳನ್ನು (ಟ್ರ್ಯಾಪ್‌) ಅಳವಡಿಸಲಾಗುತ್ತಿದೆ.  

ಹುಲಿ ಸಂರಕ್ಷಿತ ಪ್ರದೇಶ ಎಂಬ ಘೋಷಣೆಯನ್ನು ಎದುರು ನೋಡುತ್ತಿರುವ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಈಗ ನಡೆಯುತ್ತಿರುವ ಗಣತಿ ಕಾರ್ಯ ಅತ್ಯಂತ ಮಹತ್ವದ ಘಟ್ಟವಾಗಿದೆ.

‘ವನ್ಯಧಾಮದ ಏಳು ವನ್ಯಜೀವಿಗಳ ಪೈಕಿ ಪಿ.ಜಿ. ಪಾಳ್ಯದ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಹಿಂದೆ 2018ರಲ್ಲಿ ಹುಲಿಗಣತಿ ನಡೆಸಲಾಗಿತ್ತು. ಹುಲಿಗಣತಿಯ ನಾಲ್ಕನೇ ಹಂತವಾಗಿ ಈ ಕ್ಯಾಮೆರಾ ಟ್ರ್ಯಾಪ್ ಮಾಡಲಾಗುತ್ತಿದೆ. ಹೊಸ ಜಾಗಗಳಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಂಡಿರುವ ಬಗ್ಗೆ ಕೆಳ ಹಂತದ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಉಳಿದ ಆರು ವಲಯಗಳಲ್ಲೂ ಕ್ಯಾಮೆರಾ ಅಳವಡಿಸಲಾಗುವುದು’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಎರಡು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಒಂದು ಮೀಸಲು ಅರಣ್ಯದ ಜೊತೆ ಸಖ್ಯ ಬೆಳೆಸಿಕೊಂಡಿರುವುದರಿಂದ ವನ್ಯಧಾಮದಲ್ಲಿ ವನ್ಯಜೀವಿ ಸಂತತಿಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

2018ರಲ್ಲಿ ನಡೆದ ಗಣತಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ಜೇನುಹೀರ್ಕ(ಹನಿ ಬ್ಯಾಡ್ಜರ್), ಕಾಡುನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವುದಾಗಿ ಏಡುಕುಂಡಲು ಅವರು ಹೇಳಿದರು. 

ಎರಡು ವರ್ಷಗಳಿಂದ ವನ್ಯಧಾಮದಲ್ಲಿ ಇದುವರೆಗೂ ಕಾಣಿಸಿಕೊಳ್ಳದ ಹೊಸ ಹೊಸ ಸ್ಥಳಗಳಲ್ಲಿ ಹುಲಿಗಳು ಮರಿಗಳ ಜೊತೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳುತ್ತಾರೆ ತಳ ಮಟ್ಟದ ಸಿಬ್ಬಂದಿ.

‘ಒಂಬತ್ತು ವರ್ಷಗಳಿಂದ ವಾಚರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೆ ಕಾಣಿಸಿಕೊಳ್ಳದ ಜಾಗಗಳಲ್ಲಿ ಹುಲಿಗಳು ತನ್ನ ಮರಿಗಳ ಜೊತೆ ಕಾಣಿಸಿಕೊಳ್ಳತೊಡಗಿವೆ’ ಎಂದು ವಾಚರ್‌ ಆಗಿರುವ ಮಾದೇವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವನ್ಯಧಾಮದಲ್ಲಿ 18 ರಿಂದ 20 ಹುಲಿಗಳಿರಬಹುದು ಅಂದಾಜಿಸಲಾಗಿದೆ. ಸಿಬ್ಬಂದಿ ನೀಡುವ ಮಾಹಿತಿಯಂತೆ ಅವುಗಳ ಆವಾಸ ಸ್ಥಾನ ಈಗ ವಿಸ್ತಾರವಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಘ್ರಗಳಿರುವ ಸಾಧ್ಯತೆ ಇದೆ’ ಎಂದು ಏಡುಕುಂಡಲು ಅವರು ಹೇಳಿದರು. 

ಕಪ್ಪು ಚಿರತೆಯ ನಿರೀಕ್ಷೆಯಲ್ಲಿ...
ಇತ್ತೀಚೆಗೆ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಕಪ್ಪು ಚಿರತೆಯೊಂದು ಸೆರೆಯಾಗಿತ್ತು. ಬೈಲೂರು ವನ್ಯಜೀವಿ ವಲಯದಲ್ಲಿ ಓಡಾಡುವಾಗ ಕಂಡು ಬಂದಿದ್ದ ಈ ಕಪ್ಪು ಚಿರತೆ ಮಲೆಮಹದೇಶ್ವರ ವನ್ಯಧಾಮದಲ್ಲೂ ಸುತ್ತಾಡುತ್ತಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದರು.  

‘ತಿಂಗಳ ಹಿಂದೆ ಕಪ್ಪು ಚಿರತೆಯು ಎರಡೂ ರಕ್ಷಿತಾರಣ್ಯಗಳನ್ನು ಬೆಸೆಯುವ ಎಡೆಯಾರಳ್ಳಿ ಕಾರಿಡಾರ್‌ ಮೂಲಕ ಮಲೆಮಹದೇಶ್ವರ ವನ್ಯಧಾಮಕ್ಕೆ ಹೋಗುತ್ತಿರುವುದನ್ನು ನೋಡಿದ ಸ್ಥಳೀಯರೊಬ್ಬರು ಇಲಾಖೆಗೆ ನಮ್ಮ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈಗ ಅಳವಡಿಸುತ್ತಿರುವ ಕ್ಯಾಮೆರಾದಲ್ಲಿ ಅದು ಕೂಡ ಸೆರೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ಸಯ್ಯಾದ್ ಸಬಾ ನದಾಫ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು