ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಮುಕ್ತ ಜಿಲ್ಲೆಗಾಗಿ ಅಭಿಯಾನ

ಸೋಂಕು ತಡೆ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ
Last Updated 6 ನವೆಂಬರ್ 2020, 14:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯನ್ನು ಶೀಘ್ರದಲ್ಲಿ ಕೋವಿಡ್–19 ಮುಕ್ತಗೊಳಿಸಲು ವೈದ್ಯರು, ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳು ಶ್ರಮ ವಹಿಸಬೇಕು. ಇದಕ್ಕಾಗಿ ಅಭಿಯಾನ ಆರಂಭಿಸುವಂತೆ ಎಂದು ಜಿಲ್ಲಾಧಿಕಾರಿ ಡಾ.ಆರ್.ರವಿ ಅವರು ಸೂಚನೆ ನೀಡಿದರು.

ಕೋವಿಡ್-19ತಡೆ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಪ್ರತಿ ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಮುಕ್ತ ಜಿಲ್ಲೆ ಅಭಿಯಾನಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪ್ರೇರೇಪಿಸಬೇಕು. ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

‘ಜಿಲ್ಲಾಸ್ವತ್ರೆ ಹಾಗೂ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ಸೋಂಕಿತರು, ಸಂಪರ್ಕಿತರನ್ನು ಪತ್ತೆಹಚ್ಚಬೇಕು. ಜಿಲ್ಲಾ ಕಣ್ಗಾವಲು ಘಟಕ ತೀವ್ರ ನಿಗಾ ವಹಿಸಬೇಕು’ ಎಂದು ಅವರು ಹೇಳಿದರು.

ಇತರೆ ಸಾಂಕ್ರಾಮಿಕ ರೋಗಗಳಾದ ಕ್ಷಯ, ಮಲೇರಿಯ‌, ಡೆಂಗಿ, ಚಿಕೂನ್‌ಗುನ್ಯ, ಕುಷ್ಠ ರೋಗ, ಎಚ್.ಐ.ವಿ ಸೋಂಕಿನ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಲಸಿಕಾಧಿಕಾರಿ ಡಾ.ವಿಶ್ವೇಶ್ವರಯ್ಯ, ಡಾ.‌ಮಹೇಶ್, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಕಾಂತರಾಜು, ಎಲ್ಲ ತಾಲ್ಲೂಕು ಆರೋಗ್ಯಾಧಿಕಾರಿಗಳು, ಇತರೆ ಅಧಿಕಾರಿಗಳು ಇದ್ದರು.

ಒಬ್ಬರು ಸಾವು, 15 ಮಂದಿಗೆ ಸೋಂಕು

ಈ ಮಧ್ಯೆ, ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್‌ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. 15 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಆರು ಮಂದಿ ಗುಣಮುಖರಾಗಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ ಗ್ರಾಮದ 70 ವರ್ಷದ ವೃದ್ಧರೊಬ್ಬರು ಇದೇ 3ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 107ಕ್ಕೆ ಏರಿದೆ. ಕೋವಿಡ್‌ಯೇತರ ಕಾರಣದಿಂದ 19 ಮಂದಿ ನಿಧನರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 6,089 ಕೋವಿಡ್‌ ಪ‍್ರಕರಣಗಳು ದೃಢಪಟ್ಟಿವೆ. 5,807 ಮಂದಿ ಗುಣಮುಖರಾಗಿದ್ದಾರೆ. ಸದ್ಯ 156 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 110 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ 17 ಮಂದಿ ಇದ್ದಾರೆ.

ಶುಕ್ರವಾರ 950 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 936 ಮಂದಿಯ ವರದಿ ನೆಗಟಿವ್‌ ಬಂದಿವೆ. 14 ಮಂದಿಗೆ ಸೋಂಕಿರುವುದು ಖಚಿತವಾಗಿದೆ. ಒಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT