ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬರಗಾಲ- ಮೇವಿನ ಕೊರತೆ ಕಾಡುವ ಆತಂಕ

Published 19 ಫೆಬ್ರುವರಿ 2024, 6:04 IST
Last Updated 19 ಫೆಬ್ರುವರಿ 2024, 6:04 IST
ಅಕ್ಷರ ಗಾತ್ರ

ಚಾಮರಾಜನಗರ: ಬರ ಪೀಡಿತ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಬಿಸಿಲಿನ ಕಾವು ಏರತೊಡಗಿದೆ. ಜಲಮೂಲಗಳು ಬತ್ತಲು ಆರಂಭಿಸಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಹಸಿ ಮೇವು ಸಿಗದಂತೆ ಆಗಿದೆ. ಕೆಲವು ಕಡೆಗಳಲ್ಲಿ ವಿಶೇಷವಾಗಿ ಕಾಡಂಚಿನ ಪ್ರದೇಶಗಳಲ್ಲಿ ಒಣ ಮೇವಿನ ಕೊರತೆ ಕಾಡಲು ಆರಂಭವಾಗಿದೆ. 

ಇದೇ ಪರಿಸ್ಥಿತಿ ಇನ್ನೂ ಕೆಲವು ವಾರಗಳ ಕಾಲ ಮುಂದುವರಿದರೆ ಮೇವಿನ ಸಮಸ್ಯೆ ಬಿಗಡಾಯಿಸುವ ಆತಂಕ ಹೈನುಗಾರರನ್ನು ಕಾಡುತ್ತಿದೆ. 

ಜಿಲ್ಲೆಯಲ್ಲಿ 2.60 ಲಕ್ಷದಷ್ಟು ಜಾನುವಾರುಗಳಿವೆ (ಎತ್ತು, ಹಸು, ಎಮ್ಮೆ). 2.80 ಲಕ್ಷದಷ್ಟು ಮೇಕೆ, ಕುರಿಗಳಿವೆ.  

ಕೆರೆಕಟ್ಟೆ, ಹೊಳೆದಂಡೆಗಳು, ನೀರಾವರಿ ಸೌಲಭ್ಯ ಹೊಂದಿರುವ ಕೃಷಿ ಜಮೀನುಗಳಲ್ಲಿ ಮಾತ್ರ ಈಗ ಹಸಿರು ಮೇವು ಕಾಣಸಿಗುತ್ತಿವೆ. ಬಿಸಿಲಿನ ತಾಪಕ್ಕೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಹಸಿರು ಒಣಗಿ ಹೋಗಿದೆ. ನೆಲದಲ್ಲಿ ಹುಲ್ಲುಗಳು ಕಾಣಸಿಗುತ್ತಿಲ್ಲ. ಕಳೆದ ಮುಂಗಾರು ಮತ್ತು ಹಿಂಗಾರು ಅವಧಿಯ ಬೆಳೆ ಕಟಾವಿನ ನಂತರ ಭತ್ತ, ರಾಗಿ, ಜೋಳ ಫಸಲುಗಳ ಹುಲ್ಲು, ಕಡ್ಡಿಗಳನ್ನು ದಾಸ್ತಾನು ಮಾಡಿದವರು ನಿಶ್ಚಿಂತೆಯಿಂದ ಇದ್ದಾರೆ. ಆದರೆ, ಜಮೀನು ಹೊಂದಿಲ್ಲದೆ, ಪಶುಗಳನ್ನೇ ನಂಬಿ ಹೈನುಗಾರಿಕೆ ಮಾಡುವವರು ಭತ್ತದ ಹುಲ್ಲನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಒಣಹುಲ್ಲಿಗೂ ಬೇಡಿಕೆ ಹೆಚ್ಚಿದ್ದು, ಬೇಕಾದ ತಕ್ಷಣಕ್ಕೆ ಲಭ್ಯವಾಗುತ್ತಿಲ್ಲ. 

ಒಂದು ಎಕರೆಯಲ್ಲಿ ಬೆಳೆದಿರುವ ಭತ್ತದ ಹುಲ್ಲಿಗೆ ₹3000–₹4000ದವರೆಗೆ ಬೆಲೆ ಇದೆ. ಟ್ರ್ಯಾಕ್ಟರ್‌ ಲೋಡಿಗೆ ₹7,000ರಿಂದ ₹8000ದವರೆಗೆ ಧಾರಣೆ ಇದೆ.  

ಜಿಲ್ಲೆಯಲ್ಲಿನ ಒಣಮೇವನ್ನು ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಸಾಗಾಟ, ಮಾರಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರೂ, ಕೆಲವರು ಹೆಚ್ಚಿನ ಬೆಲೆಯ ಆಸೆಗೆ ಮಾರಾಟ ಮಾಡುತ್ತಿದ್ದಾರೆ. ಪಶುಪಾಲನಾ ಇಲಾಖೆಯು, ಹೊರ ರಾಜ್ಯಗಳಿಗೆ ಮೇವನ್ನು ಕೊಂಡೊಯ್ಯುತ್ತಿದ್ದ ನಾಲ್ಕು ಪ್ರಕರಣಗಳನ್ನು ಪತ್ತೆ ಮಾಡಿದೆ.

ಮೇವಿನ ಕಿಟ್‌ ವಿತರಣೆ: ಬರಗಾಲ ಇದ್ದುದರಿಂದ ಪಶುಪಾಲನಾ ಇಲಾಖೆ ಈ ಬಾರಿ ಆರಂಭದಲ್ಲೇ ಮುನ್ನೆಚ್ಚರಿಕೆ ವಹಿಸಿದೆ. ನೀರಾವರಿ ಸೌಲಭ್ಯ ಹೊಂದಿರುವ ಹೈನುಗಾರರಿಗೆ ಮಿನಿ ಮೇವಿನ ಕಿಟ್‌ ವಿತರಿಸಿದೆ. ಆದರೆ, ಮಳೆಯಾಶ್ರಿತ ಪ್ರದೇಶದ ರೈತರಿಗೆ ಈ ಕಿಟ್‌ ಸೌಲಭ್ಯ ಇಲ್ಲ. 

ಜಿಲ್ಲೆಯಲ್ಲಿ ಇಲ್ಲಿವರೆಗೆ 22 ಸಾವಿರ ಕಿಟ್‌ಗಳನ್ನು ರೈತರಿಗೆ ಪೂರೈಸಲಾಗಿದೆ. ಹೊಸದಾಗಿ 4000 ಕಿಟ್‌ಗಳು ಬಂದಿವೆ. ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. ಜನವರಿ ಮೊದಲ ವಾರದಿಂದಲೇ ಕಿಟ್‌ಗಳ ವಿತರಣೆ ಆರಂಭವಾಗಿದ್ದು, ಮೇವಿನ ಜೋಳ (ಆಫ್ರಿಕನ್‌ ಟಾಲ್‌), ಮೇವಿನ ಅಲಸಂದೆ, ಬಹು ವಾರ್ಷಿಕ ಜೋಳ ಮತ್ತು ಸಜ್ಜೆ ಬೀಜಗಳನ್ನು ಪೂರೈಸಲಾಗಿದೆ.

ಈಗಾಗಲೇ ಹಲವು ರೈತರ ಜಮೀನುಗಳಲ್ಲಿ ಹಸಿ ಮೇವು ಬೆಳೆದಿದೆ. 45 ರಿಂದ 90 ದಿನಗಳ ಅವಧಿಯಲ್ಲಿ ಇವುಗಳನ್ನು ಕಟಾವು ಮಾಡಬಹುದು ಎಂದು ಪಶುಪಾಲನಾ ಅಧಿಕಾರಿಗಳು ಹೇಳಿದ್ದಾರೆ. 

ಕಾಡಂಚಿನ ಭಾಗದಲ್ಲಿ ಸಮಸ್ಯೆ: ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯಲ್ಲಿ ನೀರಾವರಿ ವ್ಯವಸ್ಥೆ ಇದೆ. ಚಾಮರಾಜನಗರ ತಾಲ್ಲೂಕಿನ ಇತರ ಕಡೆಗಳಲ್ಲಿ ಕೆರೆಗಳಲ್ಲಿ ನೀರು ಇರುವುದರಿಂದ ಸದ್ಯಕ್ಕೆ ಮೇವಿನ ಕೊರತೆ ಉಂಟಾಗಿಲ್ಲ. ಆದರೆ, ಕಾಡಂಚಿನ ಗ್ರಾಮಗಳಲ್ಲಿ ವಿಶೇಷವಾಗಿ ಹನೂರು ಭಾಗಗಳಲ್ಲಿ ಸಮಸ್ಯೆ ಆರಂಭವಾಗಿದೆ. 

ಹನೂರು ತಾಲ್ಲೂಕಿನ ಬಹುತೇಕ ಭಾಗ ಒಣಪ್ರದೇಶ. ಬರಗಾಲದ ಪರಿಸ್ಥಿತಿ ಇಲ್ಲದ ಸಂದರ್ಭದಲ್ಲಿಯೇ ತಾಲ್ಲೂಕಿನ ಕಾಡಂಚಿನ ಭಾಗಗಳಲ್ಲಿ ಮೇವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಬಾರಿ ಮಳೆ ಕೊರತೆಯಾಗಿರುವುದರಿಂದ ಸಮಸ್ಯೆ ಸ್ವಲ್ಪ ಹೆಚ್ಚಾಗಿಯೇ ಇದೆ. 

ಕುರಟ್ಟಿ ಹೊಸೂರು, ಚೆನ್ನೂರು, ಅರಬಗೆರೆ, ಶೆಟ್ಟಳ್ಳಿ, ವಡಕೆಹಳ್ಳ, ಬಿದರಳ್ಳಿ, ಸುಳ್ವಾಡಿ, ನಾಲ್ ರೋಡ್, ಹಂಚಿಪಾಳ್ಯ, ನೆಲ್ಲೂರು, ಕೂಸ್ಲೂರು, ಹೂಗ್ಯಂ, ಮೀಣ್ಯಂ ಹಾಗೂ ದಿನ್ನಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೈನುಗಾರಿಕೆಯನ್ನೇ ಅವಲಂಬಿಸಿರುವವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. 

ಈ ಗ್ರಾಮಗಳ ಜನರು ಮೊದಲು ಅರಣ್ಯದೊಳಗೆ ದೊಡ್ಡಿ ನಿರ್ಮಿಸಿಕೊಂಡು ಜಾನುವಾರುಗಳನ್ನು ಸಾಕುತ್ತಿದ್ದರು. ಇತ್ತೀಚೆಗೆ ಅರಣ್ಯ ಇಲಾಖೆ ದೊಡ್ಡಿ ನಿರ್ಮಿಸಿಕೊಳ್ಳಲು ಅನುಮತಿ ನೀಡುತ್ತಿಲ್ಲ. ಒಣ ಹುಲ್ಲು ಖರೀದಿಸುವಷ್ಟು ಸಾಮರ್ಥ್ಯವೂ ಇವರ ಬಳಿ ಇಲ್ಲ. ಹೀಗಾಗಿ, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಜನರಿದ್ದಾರೆ. 

ಒಂದು ಮಳೆ ಸಾಕು: ‘ಮಾರ್ಚ್‌ ತಿಂಗಳಲ್ಲಿ ಮಳೆಯಾದರೆ ಮೇವಿನ ಕೊರತೆಯಾಗದು. ಒಂದೆರಡು ಮಳೆ ಬಿದ್ದರೂ ಸಾಕು, ಹಸಿರು ಚಿಗುರುತ್ತದೆ. ಈ ಬಾರಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗುವ ನಿರೀಕ್ಷೆ ಇದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ನಿರ್ವಹಣೆ: ಸೂರ್ಯನಾರಾಯಣ ವಿ. 

ಪೂರಕ ಮಾಹಿತಿ: ನಾ.ಮಂಜುನಾಥ ಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ. ಮಲ್ಲೇಶ ಎಂ., ಬಿ.ಬಸವರಾಜು, ಜಿ.ಪ್ರದೀಪ್‌ಕುಮಾರ್‌ 

ಹೊಳೆ ದಂಡೆ ಕೆರೆಯ ಆಸುಪಾಸು ನೀರಾವರಿ ಜಮೀನುಗಳು ಬಿಟ್ಟು ಉಳಿದ ಕಡೆಗಳಲ್ಲಿ ಈಗ ಮೇವು ಸಿಗುತ್ತಿಲ್ಲ. ಕಾಡಂಚಿನ ಪ್ರದೇಶದ ಹೈನುಗಾರರು ತುಂಬಾ ಸಮಸ್ಯೆಯಲ್ಲಿದ್ದಾರೆ. ಕಾಡಿನ ಪ್ರಾಣಿಗಳೇ ನಾಡಿಗೆ ಬರಲು ಆರಂಭಿಸಿವೆ. ಮೇವು ಸಂಗ್ರಹಿಸಿಟ್ಟುಕೊಂಡವರು ತುಂಬಾ ಕಡಿಮೆ. ಹಾಗಾಗಿ ಮೇವಿನ ಸಮಸ್ಯೆ ತೀವ್ರವಾಗಿ ಕಾಡುವ ಮೊದಲು ಸರ್ಕಾರ ಮೇವಿನ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಬೇಕು.
–ಹೊನ್ನೂರು ಪ್ರಕಾಶ್‌ ರೈತ ಮುಖಂಡ
ಈ ಭಾರಿ ಪೂರ್ಣ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಮೇವಿಗೆ ಕೊರತೆಯಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗೋಶಾಲೆ ಆರಂಭಿಸಬೇಕು. ಕೊಳವೆ ಬಾವಿ ನೀರಿನ ಬಳಸಿಕೊಂಡು ಕಡಿಮೆ ಅವಧಿಯಲ್ಲಿ ಬೆಳೆಯುವ ಮೇವುಗಳನ್ನು ಬೆಳೆಸಲು ಪಶುಪಾಲನಾ ಇಲಾಖೆ ಕ್ರಮ ಕೈಗೊಳ್ಳಬೇಕು.
–ಮಹೇಶ್ ಸಂತೇಮರಹಳ್ಳಿ ಚಾಮರಾಜನಗರ ತಾಲ್ಲೂಕು
ತಾಲ್ಲೂಕಿನಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು ಭೂಮಿ ಇಲ್ಲದ ನಾವು ಒಣ ಮೇವು ಸಂಗ್ರಹ ಮಾಡಿ ಪಶುಗಳಿಗೆ ಆಹಾರ ನೀಡುತ್ತಿದ್ದೇವೆ. ಸರ್ಕಾರ ಅಗತ್ಯವಾಗಿ ಬೇಕಾದ ಮೇಯವನ್ನು ಉಚಿತವಾಗಿ ನೀಡಲು ಮನಸ್ಸು ಮಾಡಬೇಕು. ಬೇಸಿಗೆ ಅವಧಿಯಲ್ಲಿ ಪಶುಪಾಲನಾ ಇಲಾಖೆ ಸೌಲಭ್ಯ ಒದಗಿಸಿದರೆ ನಮ್ಮ ಜೀವನ ನಿರ್ವಹಣೆಗೆ ಸಹಾಯವಾಗುತ್ತದೆ.
–ರೂಪ ನಾಗರಾಜ್ ಮದ್ದೂರು ಯಳಂದೂರು ತಾಲ್ಲೂಕು
ಬರಗಾಲ ಎದುರಾದರೂ ಸರ್ಕಾರ ಗಮನಹರಿಸಿಲ್ಲ. ತಾಲ್ಲೂಕಿನ ಅಲ್ಲಲ್ಲಿ ಮೇವಿನ ಕೊರತೆ ಕಂಡು ಬರುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ಹಣ ನೀಡಿದರೂ ಒಣಹುಲ್ಲು ಸಿಗುತ್ತಿಲ್ಲ. ಸ್ಥಳೀಯವಾಗಿ ಲಭ್ಯವಿರುವ ಹುಲ್ಲು ನೆರೆಯ ರಾಜ್ಯ ಜಿಲ್ಲೆಗಳಿಗೆ ಸಾಗಾಣೆಯಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಬೇಕು.
–ನವೀನ್ ಕೊಳ್ಳೇಗಾಲ, ಗ್ರಾಮ ಪಂಚಾಯಿತಿ ಸದಸ್ಯ
ಮೇವು ಪೂರೈಸಿ  ತಾಲೂಕಿನಲ್ಲಿ ದಿನಗಳೆದಂತೆ ಬರಗಾಲ ತೀವ್ರವಾಗುತ್ತಿದೆ. ಜಾನುವಾರುಗಳಿಗೆ ಮೇವು ನೀರಿನ‌ ಕೊರತೆ ಉಂಟಾಗಿದೆ. ಜಿಲ್ಲಾಡಳಿತ ಹನೂರು ಭಾಗಕ್ಕೆ ತಕ್ಷಣ ಮೇವು ಪೂರೈಕೆ ಮಾಡಿದರೆ ಇರುವ ಅಲ್ಪಸ್ವಲ್ಪ ಜಾನುವಾರುಗಳು ಉಳಿಯಲಿವೆ. ಇಲ್ಲದಿದ್ದರೆ ಸಂತತಿ ನಾಶವಾಗಲಿವೆ.
–ಶಾಂತಕುಮಾರ್ ಚೆನ್ನೂರು ಹನೂರು ತಾಲ್ಲೂಕು
ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಮೇವಿನ ಕೊರತೆ ಉಂಟಾಗಿದೆ. ಈ ವರ್ಷ ಬೆಳೆದ ರಾಗಿ ಹಾಗೂ ಜೋಳದ ಫಸಲು ಮಳೆಗೆ ಸಿಲುಕಿ ಅವುಗಳ ಕಡ್ಡಿಗಳು ಜಮೀನಿನಲ್ಲೇ ಕೊಳೆತು ಹೋದವು. ದೂರದ ಊರುಗಳಿಂದ ಮೇವು ಖರೀದಿಸಬೇಕಾದ ಪರಿಸ್ಥಿತಿ ಬಂದಿದೆ. ಹಣ ಕೊಟ್ಟರೂ ಮೇವು ಸಿಗದಂತಿರುವ ಸ್ಥಿತಿ ಇದೆ. ಹಾಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಇತ್ತ ಕಡೆ ಗಮನ ಹರಿಸಿ ರಾಸುಗಳಿಗೆ ಮೇವು ಒದಗಿಸಿಕೊಡಬೇಕು
–ಚಂದ್ರು ಮಹದೇಶ್ವರ ಬೆಟ್ಟ
ಜಾನುವಾರು ಮಾರಾಟ ಭೂಮಿ ಇಲ್ಲದೆ ಹೈನುಗಾರಿಕೆ ಮಾಡುತ್ತಿರುವ ರೈತರು ಈಗಾಗಲೇ ಮೇವಿನ ಕೊರತೆಯಿಂದ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಶೀಘ್ರವಾಗಿ ಮೇವು ಪೂರೈಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು
–ಮಹದೇವಪ್ಪ ಶಿವಪುರ ಗುಂಡ್ಲುಪೇಟೆ ತಾಲ್ಲೂಕು 
ಜಿಲ್ಲೆಯಲ್ಲಿ ರೈತರ ಬಳಿ 18 ವಾರಕ್ಕೆ ಆಗುವಷ್ಟು ಮೇವು ಸಂಗ್ರಹ ಇದೆ. ಕಾಡಂಚಿನ ಪ್ರದೇಶಗಳಲ್ಲಿ ಮೇವಿನ ಸಮಸ್ಯೆ ಸ್ವಲ್ಪ ಪ್ರಮಾಣದಲ್ಲಿದೆ. ಸ್ವಂತ ಜಮೀನು ಇಲ್ಲದಿರುವವರಿಗೆ ಮೇವಿನ ಕೊರತೆಯಾಗಿದೆ. ಮೇವು ಖರೀದಿ ಮಾಡಿ ಪೂರೈಸಲು ಸಿದ್ಧತೆ ನಡೆದಿದೆ. ನೀರಾವರಿ ಸೌಲಭ್ಯ ಹೊಂದಿರುವವರಿಗೆ ಇಲಾಖೆ ವತಿಯಿಂದ ಮೇವಿನ ಕಿಟ್‌ ವಿತರಿಸಲಾಗುತ್ತಿದೆ. 22 ಸಾವಿರ ಮಂದಿಗೆ ಈಗಾಗಲೇ ವಿತರಿಸಿದ್ದೇವೆ. ಮತ್ತೆ 4000 ಕಿಟ್‌ಗಳು ಬಂದಿದ್ದು ತಾಲ್ಲೂಕುವಾರು ಹಂಚಲಿದ್ದೇವೆ.
– ಡಾ.ಎಲ್‌.ಹನುಮೇಗೌಡ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ
322 ಕಿಟ್ ವಿತರಣೆ ತಾಲ್ಲೂಕಿನಾದ್ಯಂತ ಪಶು ಪಾಲಕರಿಗೆ 322 ಮೇವಿನ ಬೀಜದ ಕಿಟ್‌ಗಳನ್ನು ನೀಡಲಾಗಿದೆ. ಜಮೀನುಗಳಲ್ಲಿ ಬಿತ್ತನೆ ಮಾಡಿ ಹುಲ್ಲು ಬೆಳೆದುಕೊಂಡು ಪೂರೈಸುತ್ತಿದ್ದಾರೆ. ತಾಲ್ಲೂಕಿಗೆ ಒಟ್ಟು 762 ಕಿಟ್ ಪೂರೈಕೆಯಾಗಿದೆ.
- ಡಾ.ಶಿವರಾಜು ಪಶು ಪಾಲನಾ ಇಲಾಖೆ ಇಲಾಖೆ ಸಹಾಯಕ ನಿರ್ದೇಶಕ ಯಳಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT