ಶನಿವಾರ, ಜುಲೈ 31, 2021
23 °C
ಜಿಲ್ಲಾ ಕೇಂದ್ರದ ಅಭಿವೃದ್ಧಿ: ಅಧಿಕಾರಿಗಳೊಂದಿಗೆ ಸಚಿವ ಎಸ್‌.ಸುರೇಶ್‌ ಕುಮಾರ್‌ ಸಭೆ

ಚಾಮರಾಜನಗರ ಮಾಸ್ಟರ್‌ ಪ್ಲಾನ್‌–2031 ಕರಡು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಮುಂದಿನ 10 ವರ್ಷಗಳಲ್ಲಿ ಜಿಲ್ಲಾ ಕೇಂದ್ರದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಚಾಮರಾಜನಗರ ಮಾಸ್ಟರ್‌ ಪ್ಲಾನ್‌–2031’ ಕರಡು ಸಿದ್ಧವಾಗಿದ್ದು, ಸರ್ಕಾರಕ್ಕೆ ಕಳುಹಿಸುವ ಹಂತದಲ್ಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ಹೇಳಿದರು. 

ನಗರದ ಅಭಿವೃದ್ಧಿ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ‘2007ರಲ್ಲಿ ಚಾಮರಾಜನಗರ ಮಾಸ್ಟರ್‌ ಪ್ಲಾನ್‌–2021 ಅಂಗೀಕರಿಸಲಾಗಿತ್ತು. ಈಗ ಅದು ಮುಕ್ತಾಯದ ಹಂತಕ್ಕೆ ಬಂದಿದೆ. ನಗರದಲ್ಲಿ ಏರಿಕೆಯಾಗುವ ಜನಸಂಖ್ಯೆ, ಇಲ್ಲಿನ ಅವಶ್ಯಕತೆ, ಉದ್ದಿಮೆಗಳನ್ನು ಆರಂಭಿಸುವ ದೃಷ್ಟಿಯಿಂದ, ಬಂಡವಾಳ ಹೂಡಿಕೆ ಆಕರ್ಷಿಸುವುದು, ಪರಿಸರ ಸಂರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ನಗರದ ಅಭಿವೃದ್ಧಿಗಾಗಿ ಮುಂದಿನ 10 ವರ್ಷಗಳ ಅವಧಿಯನ್ನು ಇಟ್ಟುಕೊಂಡು ನೀಲನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು. 

‘ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿರುವುದರಿಂದ ಎರಡು ಕಡೆಗಳಲ್ಲಿ ಕೈಗಾರಿಕಾ ಎಸ್ಟೇಟ್‌ಗಳನ್ನು ಸ್ಥಾಪಿಸುವ ಪ್ರಸ್ತಾವನೆಯೂ ಮಾಸ್ಟರ್‌ ಪ್ಲಾನ್‌ನಲ್ಲಿದೆ. ಈ ನೀಲ ನಕ್ಷೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನೂ ಕೇಳಲಾಗುತ್ತದೆ’ ಎಂದು ಅವರು ಹೇಳಿದರು. 

ಶೀಘ್ರ ಮುಕ್ತಾಯಕ್ಕೆ ಸೂಚನೆ: ‘ನಗರಸಭೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಸಂಕೀರ್ಣ, ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣ, ಖಾಸಗಿ ಬಸ್‌ ನಿಲ್ದಾಣ ಕಾಮಗಾರಿಗಳು ಸಾಕಷ್ಟು ವಿಳಂಬವಾಗಿದೆ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ನಡುವೆ ಸಮನ್ವಯದ ಕೊರತೆ ಇದೆ. ಇನ್ನು ವಿಳಂಬವಾಗಬಾರದು. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಸಚಿವರು ಹೇಳಿದರು. 

ಜುಲೈ 15ರ ಗಡುವು: ಖಾಸಗಿ ಬಸ್‌ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬೆಳಕಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕಿದೆ. ಎಲ್ಲ ಕೆಲಸಗಳನ್ನು ಜುಲೈ 15ರೊಳಗೆ ಮುಗಿಸಬೇಕು ಎಂದು ಸೂಚಿಸಲಾಗಿದೆ. ಆಗಸ್ಟ್‌ 3ರಂದು ಉದ್ಘಾಟನೆಯ ದಿನಾಂಕ ನಿಗದಿ ಪಡಿಸುವ ಯೋಚನೆ ಇದೆ’ ಎಂದರು. 

‘ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಇನ್ನೊಂದು ಪ್ರವೇಶದ್ವಾರದ ಅಗತ್ಯವಿದೆ. ಬಿಸಿಎಂ ಹಾಸ್ಟೆಲ್‌ ಬಳಿ ರಸ್ತೆ ನಿರ್ಮಿಸುವ ಕೆಲಸ ಆಗಬೇಕು. ಅದನ್ನು ಶೀಘ್ರದಲ್ಲಿ ಮಾಡಲಾಗುವುದು. ವೀರಭದ್ರೇಶ್ವರ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣದ ಕಾಮಗಾರಿ ಮುಗಿದಿದೆ. ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಹೇಳಿದರು. 

ಸುರಕ್ಷಿತ ಆಹಾರ ವಲಯ: ‘ನಗರದಲ್ಲಿ ಸುರಕ್ಷಿತ ಆಹಾರವಲಯ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಜುಲೈ ತಿಂಗಳಲ್ಲಿ ಒಂದು ಮಾದರಿ ಫುಡ್‌ ಸ್ಟ್ರೀಟ್‌ ಮಾಡಲು ತೀರ್ಮಾನಿಸಲಾಗಿದೆ’ ಎಂದರು.  

ಸಮಸ್ಯೆ ಇತ್ಯರ್ಥ: ಜೋಡಿ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್‌ ಕುಮಾರ್‌, ‘ಕೆಲವು ಕಡೆಗಳಲ್ಲಿ ಸಮಸ್ಯೆ ಇದೆ. ಈ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಇದನ್ನು ಪರಿಹರಿಸುದಕ್ಕಾಗಿ ಜಿಲ್ಲಾಧಿಕಾರಿ ಅವರು ಖುದ್ದಾಗಿ ನಾಗರಿಕರೊಂದಿಗೆ ಮಾತನಾಡಲಾಗಿದ್ದಾರೆ’ ಎಂದರು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಯೋಜನೆಯ ₹4.5 ಅನುದಾನವನ್ನು ತಡೆ ಹಿಡಿಯಲಾಗಿದೆ. ಈ ಬಗ್ಗೆ ಸಚಿವರು ಲೋಕೋಪಯೋಗಿ ಇಲಾಖೆಯ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ. ಡೀವಿಯೇಷನ್‌ ಹಾಗೂ ಜೋಡಿ ರಸ್ತೆಗೆ ಬೆಳಕಿನ ವ್ಯವಸ್ಥೆ ಮಾಡುವ ಯೋಜನೆಯನ್ನು ಪೂರ್ಣಗೊಳಿಸಲು ನಗರಸಭೆಯ ಈ ಬಾರಿಯ ಅನುದಾನ ಬಳಸಲಾಗುವುದು’ ಎಂದರು. 

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್ ಇದ್ದರು. 

ಸಭೆಗೂ ಮುನ್ನ ಸಚಿವರು ಅಧಿಕಾರಿಗಳೊಂದಿಗೆ ಖಾಸಗಿ ಬಸ್‌ ನಿಲ್ದಾಣ, ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರಕ್ಕೆ ವಿದ್ಯುತ್‌ ಚಿತಾಗಾರ
‘ಚಾಮರಾಜನಗದಲ್ಲಿ ವಿದ್ಯುತ್‌ ಚಿತಾಗಾರ ಸ್ಥಾಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಅದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಎರಡು ಮೂರು ಜಾಗವನ್ನು ಪ್ರಸ್ತಾಪಿಸಲಾಗಿದೆ. ಯಾವುದಾದರೂ ಒಂದು ಜಮೀನನ್ನು ಅಂತಿಮಗೊಳಿಸಿ ಯೋಜನೆಯ ಬಗ್ಗೆ ಸಮಗ್ರ ವರದಿ ತಯಾರಿಸಲಾಗುವುದು. ಶವಗಳನ್ನು ಸುಡಲು ಅನಿಲ ಅಥವಾ ವಿದ್ಯುತ್‌ ಬಳಸುವ ಬಗ್ಗೆ ಕೊನೆಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಸ್‌.ಸುರೇಶ್‌ ಕುಮಾರ್‌ ಅವರು ಹೇಳಿದರು. 

ಮತ್ತೆ ಹಸಿರು ಜಿಲ್ಲೆಯತ್ತ...
ಮುಂಬೈನಿಂದ ಬಂದು ಕೋವಿಡ್‌–19 ದೃಢಪಟ್ಟ ವ್ಯಕ್ತಿ ಸಂಪೂರ್ಣ ಗುಣಮುಖಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದು, ಜಿಲ್ಲೆ ಮತ್ತೆ ಹಸಿರು ಜಿಲ್ಲೆಯಾಗಿದೆ ಎಂದು ಸುರೇಶ್‌ ಕುಮಾರ್‌ ಹೇಳಿದರು. 

‘ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್–19 ವಿರುದ್ಧ ನಡೆಸಿರುವ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿದೆ. ₹1.79 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಕೋವಿಡ್‌–19 ಪರೀಕ್ಷೆ ಪ್ರಯೋಗಾಲಯ ಕೂಡ ತನ್ನ ಉತ್ಕೃಷ್ಟತೆ ಕಾರಣದಿಂದ ರಾಜ್ಯದ ಗಮನ ಸೆಳೆದಿದೆ’ ಎಂದು ಮೆಚ್ಚುಗೆ ಸೂಚಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು