ಸೋಮವಾರ, ಸೆಪ್ಟೆಂಬರ್ 20, 2021
21 °C
ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿ 24 ಮಂದಿ ಸಾವಿನ ಪ್ರಕರಣ

ಚಾಮರಾಜನಗರ ಕೋವಿಡ್ ಆಸ್ಪತ್ರೆ ದುರಂತ: ತಲಾ ₹ 2 ಲಕ್ಷ ಪರಿಹಾರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2 ಮತ್ತು 3ರಂದು ಮೃತಪಟ್ಟಿರುವ 24 ಮಂದಿಯ ಕುಟುಂಬಗಳಿಗೆ ತಲಾ ₹ 2 ಲಕ್ಷದಂತೆ ಒಟ್ಟು ₹ 48 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಈ ಪ್ರಕರಣದಲ್ಲಿ ಹೈಕೋರ್ಟ್‌ಗೆ ನೀಡಿದ್ದ ಭರವಸೆಯಂತೆ ಪರಿಹಾರದ ಮೊತ್ತವನ್ನು ಕಂದಾಯ ಇಲಾಖೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ. 24 ಮಂದಿ ಮೃತರ ಸಂಪೂರ್ಣ ವಿವರಗಳನ್ನು ಚಾಮರಾಜನಗರ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದು, ಕಾನೂನುಬದ್ಧ ವಾರಸುದಾರರನ್ನು ಖಚಿತಪಡಿಸಿಕೊಂಡು ಪರಿಹಾರ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೃತಪಟ್ಟ ಎಲ್ಲ ವ್ಯಕ್ತಿಗಳ ಅಧಿಕೃತ ವಾರಸುದಾರರಿಗೆ ಪರಿಹಾರ ಪಾವತಿಸಿರುವ ಕುರಿತು ಹೈಕೋರ್ಟ್‌ಗೆ ಅನುಸರಣಾ ವರದಿ ಸಲ್ಲಿಸಲು ಪೂರಕವಾಗಿ ವಿವರವಾದ ಮಾಹಿತಿಯುಳ್ಳ ವರದಿಯನ್ನು ಅಡ್ವೊಕೇಟ್‌ ಜನರಲ್‌ ಕಚೇರಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.

ಮೇ 2 ಮತ್ತು 3ರಂದು ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 24 ರೋಗಿಗಳು ಮೃತಪಟ್ಟಿದ್ದರು. ಆಮ್ಲಜನಕದ ಕೊರತೆ ಇದಕ್ಕೆ ಕಾರಣ ಎಂಬ ಆರೋಪವಿದೆ. ಈ ಕುರಿತು ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ತುರ್ತು ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಮೇ 20ರಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿತ್ತು.

‘ಮೃತ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಿ’:

‘ಕೋವಿಡ್‌ನಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ನೌಕರರು ಮೃತಪಟ್ಟಿದ್ದರೆ, ಅವರ ಅವಲಂಬಿತರಿಗೆ ತಕ್ಷಣ ಪರಿಹಾರ (₹ 30 ಲಕ್ಷ ವಿಮೆ) ಮಂಜೂರು ಮಾಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್‌ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

‘ವಿವಿಧ ಜಿಲ್ಲೆಗಳಲ್ಲಿ ಕೋವಿಡ್‌ ಮತ್ತು ಇತರ ಕರ್ತವ್ಯದ ಮೇಲೆ ಸಕ್ಷಮ ಪ್ರಾಧಿಕಾರದಿಂದ (ಜಿಲ್ಲಾಧಿಕಾರಿ) ನಿಯೋಜನೆಗೊಂಡು ಇಲಾಖೆಯ ಅಧಿಕಾರಿಗಳು, ನೌಕರರು ಮತ್ತು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಕರ್ತವ್ಯದ ಸಮಯದಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದರೆ ನಿಯಮಾನುಸಾರ ಪರಿಹಾರ ಮಂಜೂರು
ಮಾಡಬೇಕಾಗಿರುವುದು ನಿಮ್ಮ ಜವಾಬ್ದಾರಿ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಪರಿಹಾರ ನೀಡಿರುವ ಬಗ್ಗೆ ಮಾಹಿತಿಯನ್ನೂ ಒದಗಿಸಬೇಕು ಎಂದೂ ಕೋರಿದ್ದಾರೆ.

ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಪತ್ರ ಬರೆದಿರುವ ಅವರು, ‘ಜಿಲ್ಲಾ ವ್ಯಾಪ್ತಿಯಲ್ಲಿ  ಕೋವಿಡ್‌ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಮೃತರಾದ ನೌಕರರ ಕುಟುಂಬಕ್ಕೆ ₹ 30 ಲಕ್ಷ ವಿಮೆ ಮೊತ್ತವನ್ನು ಪಾವತಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

‘ಕೋವಿಡ್‌ನಿಂದ ಮೃತಪಟ್ಟ ಇಲಾಖೆಯ ಸಿಬ್ಬಂದಿಗೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ ಮನವಿ ಮಾಡಿತ್ತು. ಇದಕ್ಕೆ ಮಣಿದು ಇಲಾಖೆ ಈ ಕ್ರಮ ತೆಗೆದುಕೊಂಡಿದೆ’ ಎಂದ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು