ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಪರೀಕ್ಷೆ ಬರೆಯಲು ‘ಕಾಡಿನ ಮಕ್ಕಳು’ ಸಜ್ಜು

ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದ ಮಕ್ಕಳ ಮೂರು ತಿಂಗಳ ತರಬೇತಿ ಕೊನೆಯ ಹಂತಕ್ಕೆ
ಸೂರ್ಯನಾರಾಯಣ ವಿ.
Published 20 ಫೆಬ್ರುವರಿ 2024, 6:24 IST
Last Updated 20 ಫೆಬ್ರುವರಿ 2024, 6:24 IST
ಅಕ್ಷರ ಗಾತ್ರ

ಚಾಮರಾಜನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಶಿಕ್ಷಣ ಮೊಟಕುಗೊಳಿಸಿದ್ದ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಮಕ್ಕಳನ್ನು ಮತ್ತೆ ಪರೀಕ್ಷೆ ಬರೆಯಲು ಸಜ್ಜುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮೈಸೂರಿನ ರೋಟರಿ ಪಂಚಶೀಲ ಸಹಯೋಗದಲ್ಲಿ ಆರಂಭಿಸಿರುವ ಪುನಶ್ಚೇತನಾ ತರಬೇತಿ ಈಗ ಅಂತಿಮ ಹಂತ ತಲುಪಿದ್ದು,  ಮಕ್ಕಳು ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ. 

ರಾಜ್ಯದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಈ ಪ್ರಯತ್ನಕ್ಕೆ ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆಗಳು ಕೂಡ ಕೈಜೋಡಿಸಿವೆ. ತಾಲ್ಲೂಕಿನ ಹರದನಹಳ್ಳಿಯ ಪರಿಶಿಷ್ಟ ವರ್ಗಗಳ ಮೆಟ್ರಿಕ್‍ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ  ಸೋಲಿಗ, ಬೆಟ್ಟಕುರುಬ, ಜೇನುಕುರುಬ ಸಮುದಾಯದ 30 ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. 

ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಈ ತರಬೇತಿ‌ ಯೋಜನೆ ರೂಪಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣಗೊಂಡು ಮನೆಯಲ್ಲಿದ್ದ 46 ಮಕ್ಕಳನ್ನು ಗುರುತಿಸಲಾಗಿತ್ತು. ಇವರಿಗೆ ಡಿ.1ರಿಂದ ಮೂರು ತಿಂಗಳ ಕಾಲ ಶಿಕ್ಷಣ ಇಲಾಖೆಯ ನುರಿತ ಶಿಕ್ಷಕರಿಂದ ತರಬೇತಿ ಕೊಡಿಸಿ ಪರೀಕ್ಷೆಗೆ ಸಜ್ಜುಗೊಳಿಸಲು ನಿರ್ಧರಿಸಲಾಗಿತ್ತು. ಎರಡೂವರೆ ತಿಂಗಳ ತರಬೇತಿ ಮುಕ್ತಾಯವಾಗಿದ್ದು, ಈಗ ಕೊನೆಯ ಹಂತ ತಲುಪಿದೆ. ಮಾರ್ಚ್‌ 25ರಿಂದ ಏ.6ರವರೆಗೆ ನಡೆಯಲಿರುವ ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ಮಕ್ಕಳು ಸಜ್ಜುಗೊಂಡಿದ್ದಾರೆ. 

30 ಮಕ್ಕಳು ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಇವರಲ್ಲಿ ಎಂಟು ಮಂದಿ ಹೆಣ್ಣುಮಕ್ಕಳಿದ್ದಾರೆ. ಒಟ್ಟು ಮಕ್ಕಳ ಪೈಕಿ ಇಬ್ಬರು ಮನೆಯಲ್ಲಿನ ಸಮಸ್ಯೆ ಕಾರಣಕ್ಕೆ ತರಬೇತಿಗೆ ಬರುತ್ತಿಲ್ಲ. ಅವರು ಕೂಡ ಪರೀಕ್ಷೆಗೆ ಕಟ್ಟಿದ್ದು, ಪರೀಕ್ಷೆ ಬರೆಯುವಂತೆ ಶಿಕ್ಷಕರು, ಅಧಿಕಾರಿಗಳು ಅವರಿಗೆ ಹೇಳಿದ್ದಾರೆ. 

ಪರೀಕ್ಷೆಯಲ್ಲಿ ಉತ್ತಮ ಅಂಕ: ಶಿಕ್ಷಣ ಇಲಾಖೆಯ 26 ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಒಂದೂವರೆ ತಿಂಗಳ ತರಬೇತಿ ಬಳಿಕ, ಅವರ ಕಲಿಕಾ ಸಾಮರ್ಥ್ಯ ಅಳೆಯಲು ಪ್ರತಿ ವಿಷಯದಲ್ಲಿ ತಲಾ 25 ಅಂಕಗಳಿಗೆ (ಸಮಾಜ ವಿಜ್ಞಾನ 20 ಅಂಕ) ಪರೀಕ್ಷೆ ನಡೆಸಲಾಗಿತ್ತು.

‘ಹಲವು ಮಕ್ಕಳು ಚೆನ್ನಾಗಿ ಬರೆದಿದ್ದಾರೆ. ನಾಲ್ಕೈದು ಮಂದಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಅವರೆಲ್ಲ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ  ಸಾಧ್ಯತೆ ಇದೆ’ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.  

ಪಾಠದೊಂದಿಗೆ ಆಟ,ಊಟ: ಆರಂಭದಲ್ಲಿ ಮಕ್ಕಳನ್ನು ವಾರಕ್ಕೊಮ್ಮೆ ಮನೆಗೆ ಕಳುಹಿಸಲಾಗುತ್ತಿತ್ತು. ರಜೆ ಮುಗಿಸಿ ಬರುತ್ತಿದ್ದರು. ಪರೀಕ್ಷೆ ಹತ್ತಿರದಲ್ಲಿರುವುದರಿಂದ ಈಗ ಮನೆಗೆ ಕಳುಹಿಸಲಾಗುತ್ತಿಲ್ಲ. ಅವರ ಮನಸ್ಸನ್ನು ಅಭ್ಯಾಸದ ಕಡೆಗೆ ಕೇಂದ್ರಿಕರಿಸಲು ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. 

ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಪ್ರತಿ ದಿನ ಯೋಗ, ಧ್ಯಾನ, ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಮೈಸೂರು, ಶ್ರೀರಂಗಪಟ್ಟಣ, ಕೆಆರ್‌ಎಸ್‌ ಪ‍್ರವಾಸ ಹೋಗಿ ಬಂದಿದ್ದಾರೆ. ಸಿನಿಮಾಕ್ಕೂ ಕರೆದೊಯ್ಯಲಾಗಿದೆ.   

ಮಕ್ಕಳಿಗಾಗಿಯೇ ಭಾನುವಾರ ನಗರದಲ್ಲಿ ಕ್ರೀಡಾಕೂಟ ನಡೆಸಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಎಸ್‌ಪಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ ಪ್ರಕಾಶ್‌ ಮೀನಾ ಸೇರಿದಂತೆ ಹಲವು, ಅಧಿಕಾರಿಗಳು ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. 

ಕ್ರಿಕೆಟ್‌, ವಾಲಿಬಾಲ್‌, ಥ್ರೋಬಾಲ್‌ ಪಂದ್ಯಾವಳಿ ಆಯೋಜಿಸಲಾಗಿತ್ತು. ಕ್ರಿಕೆಟ್‌, ವಾಲಿಬಾಲ್‌ನಲ್ಲಿ ಟ್ರೈಬಲ್‌ ಟೈಗರ್ಸ್‌ (ಮ‌ಕ್ಕಳ ತಂಡ) ಗೆದ್ದರೆ, ಥ್ರೋಬಾಲ್‌ನಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಂಡ ಗೆಲುವು ಸಾಧಿಸಿತು. 

‘ಹಮ್ಮಿಕೊಳ್ಳಲಾಗುತ್ತಿರುವ ವೈವಿಧ್ಯಮಯ ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ‌. 30 ಮಕ್ಕಳಿಗಾಗಿ ನಾವು 40ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದೇವೆ. ಈ ಪ್ರಯತ್ನ ಯಶಸ್ವಿಯಾಗಬೇಕು ಎಂಬುದು ನಮ್ಮ ಆಶಯ’ ಎಂದು ತರಬೇತಿ ಉಸ್ತುವಾರಿ ಹೊತ್ತಿರುವ ಪರಿಶಿಷ್ಟ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಚಂದ್ರಶೇಖರ್‌ ಹೇಳಿದರು. 

ಪರೀಕ್ಷೆಗೆ ನೋಂದಣಿ: ‘ತರಬೇತಿಗಾಗಿ ಗುರುತಿಸಲಾಗಿದ್ದ ಎಲ್ಲ ಮಕ್ಕಳನ್ನೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಣಿ ಮಾಡಲಾಗಿದೆ. ತರಬೇತಿಯನ್ನು ಮೊಟಕು ಗೊಳಿಸಿದವರಿಗೂ ಪರೀಕ್ಷೆ ಬರೆಯುವಂತೆ ಹೇಳಿದ್ದೇವೆ. ಉತ್ತೀರ್ಣರಾದವರನ್ನು ನಾವೇ ಪಿಯುಸಿಗೆ ಸೇರಿಸಿ, ಹಾಸ್ಟೆಲ್‌ ವ್ಯವಸ್ಥೆ ಮಾಡಲಿದ್ದೇವೆ’ ಎಂದರು. 

ಸಿ.ಟಿ.ಶಿಲ್ಪಾ ನಾಗ್‌
ಸಿ.ಟಿ.ಶಿಲ್ಪಾ ನಾಗ್‌
3 ತಿಂಗಳ ತರಬೇತಿ ಈ ತಿಂಗಳು ಮುಗಿಯಲಿದೆ. ಪರೀಕ್ಷೆಯವರೆಗೂ ಮಕ್ಕಳನ್ನು ಹಾಸ್ಟೆಲ್‌ನಲ್ಲೇ ಇರಿಸುವ ಬಗ್ಗೆ ಶೀಘ್ರ ತೀರ್ಮಾನಿಸುತ್ತೇವೆ
ಸಿ.ಟಿ.ಶಿಲ್ಪಾ ನಾಗ್‌ ಜಿಲ್ಲಾಧಿಕಾರಿ
ಮಕ್ಕಳ ಆತ್ಮವಿಶ್ವಾಸ ಹೆಚ್ಚಿದೆ:
ಡಿ.ಸಿ ತರಬೇತಿ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ‘ಎರಡೂವರೆ ತಿಂಗಳಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಾಗಿದೆ. ತರಬೇತಿ ಶುರುವಾಗಿದ್ದ ಸಂದರ್ಭದಲ್ಲಿ ಮಾತನಾಡಲು ಅಂಜುತ್ತಿದ್ದರು. ಈಗ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಾವು ನಡೆಸಿದ ಪರೀಕ್ಷೆಯಲ್ಲಿ ಕೆಲವರು ಅತ್ಯುತ್ತಮವಾಗಿ ಅಂಕ ಗಳಿಸಿದ್ದಾರೆ. ಎಲ್ಲರೂ ಡಿಸ್ಟಿಂಕ್ಷನ್‌ ಬರಬೇಕು ಎಂಬುದು ನಮ್ಮ ಗುರಿಯಲ್ಲ. ಎಸ್ಎಸ್‌ಎಲ್‌ಸಿ ಉತ್ತೀರ್ಣರಾಗಿ ಅವರು ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ನಮ್ಮ ಆಶಯ’ ಎಂದರು.  ‘ರಾಜ್ಯದಲ್ಲೇ ಇದು ಮೊದಲ ಪ್ರಯತ್ನ. ಯಶಸ್ವಿಯಾದರೆ ಇತರ ಜಿಲ್ಲೆಗಳಲ್ಲೂ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇರುತ್ತದೆ ಅಥವಾ ಸರ್ಕಾರವೇ ಈ ಬಗ್ಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲೂ ಬಹುದು. ಬುಡಕಟ್ಟು ಸಮುದಾಯದ ಕೆಲವು ಕುಟುಂಬಗಳು ತುಂಬಾ ಬಡತನದಲ್ಲಿದೆ. ಮಕ್ಕಳನ್ನು ಓದಿಸುವ ಶಕ್ತಿಯೂ ಅವರಿಗಿಲ್ಲ. ಶಿಕ್ಷಣದ ಪ್ರಾಮುಖ್ಯವೂ ಅವರಿಗೆ ಗೊತ್ತಿಲ್ಲ. ಅವರಿಗೆ ಒಂದು ರೂಪಾಯಿಯೂ ಖರ್ಚಾಗದಂತೆ ಈ ತರಬೇತಿ ನೀಡಲಾಗುತ್ತಿದೆ. ಮಕ್ಕಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸ ಇದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT